ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನ ಬಹು ಪುಣ್ಯ ಕಾರ್ಯ

ನಮ್ಮ ಚಿಕ್ಕಬಳ್ಳಾಪುರ ಯುವಕರ ತಂಡದ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ
Last Updated 8 ಜುಲೈ 2018, 13:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸತ್ತ ಮೇಲೆ ನಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಅಂಧಕಾರದಲ್ಲಿರುವವರ ಬಾಳಿನಲ್ಲಿ ಬೆಳಕು ನೀಡಿದ ಪುಣ್ಯ ಲಭ್ಯವಾಗುತ್ತದೆ. ಜಗತ್ತನ್ನೇ ಕಾಣದ ಜೀವಗಳಿಗೆ ನೇತ್ರದಾನ ಮೂಲಕ ನೆರವಾಗುವುದು ಪುಣ್ಯ ಕಾರ್ಯ. ಆದ್ದರಿಂದ ಪ್ರತಿಯೊಬ್ಬರೂ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಚ್‌.ದೇವರಾಜ್‌ ತಿಳಿಸಿದರು.

ಬೊಮ್ಮಸಂದ್ರದ ನಾರಾಯಣ ನೇತ್ರಾಲಯ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ನಮ್ಮ ಚಿಕ್ಕಬಳ್ಳಾಪುರ ಯುವಕರ ತಂಡದ ಸಹಯೋಗದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುರುಡುತನ ವ್ಯಕ್ತಿಯ ವೈಯಕ್ತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕುರುಡತನಕ್ಕೆ ಹಲವು ಕಾರಣಗಳಿವೆ. ನೇತ್ರದಾನದಿಂದ ನಮ್ಮ ಕಣ್ಣುಗಳು ಇಬ್ಬರು ಕುರುಡರಿಗೆ ದೃಷ್ಟಿ ಕೊಡಬಲ್ಲವು. ಆ ಮೂಲಕ ಮರಣಾ ನಂತರವೂ ಇನ್ನೊಬ್ಬರ ಬದುಕಿಗೆ ಬೆಳಕಾಗಿರಬಹುದು’ ಎಂದು ಹೇಳಿದರು.

‘ಪ್ರತಿಯೊಬ್ಬರೂ ತಮ್ಮ ಮರಣದ ನಂತರ ನೇತ್ರದಾನ ಮಾಡಬಹುದು. ಯಾವುದೇ ವಯಸ್ಸಿನ ಹಾಗೂ ಯಾವುದೇ ರಕ್ತದ ಗುಂಪಿನ ಮಹಿಳೆ, ಪುರುಷ ನೇತ್ರದಾನ ಮಾಡಬಹುದು. ಅನೇಕರಿಗೆ ನೇತ್ರದಾನ ಮಾಡುವ ಆಸೆ ಇರುತ್ತದೆ. ಆದರೆ, ತಿಳಿವಳಿಕೆ ಇಲ್ಲದೆ ಮುಂದೆ ಬರುತ್ತಿಲ್ಲ. ಮನುಷ್ಯ ಸತ್ತ ಕೆಲ ಗಂಟೆಗಳ ವರೆಗೆ ದೇಹದ ವಿವಿಧ ಅಂಗಾಂಗಗಳನ್ನು ಪಡೆದು ಬೇರೊಬ್ಬರಿಗೆ ಕಸಿ ಮಾಡಬಹುದು’ ಎಂದು ತಿಳಿಸಿದರು.

‘ನಾಗರಿಕರು ಕಾನೂನು ಅರಿವು ಹೊಂದುವ ಮೂಲಕ ಸಂತ್ರಸ್ತರ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದಿಂದ ಸಿಗುವ ಸೌಲಭ್ಯ ಉಪಯೋಗ ಪಡೆದುಕೊಳ್ಳಬೇಕು. ಗಲಭೆ, ಅಪಘಾತದಲ್ಲಿ ಸಾವು–ನೋವು ಸಂಭವಿಸಿದಾಗ ಸಂತ್ರಸ್ತರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ ನ್ಯಾಯಾಲಯ ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ಕೊಡಲಿದೆ’ ಎಂದರು.

ಜಿಲ್ಲಾ ನೇತ್ರ ವೈದ್ಯ ಜಯರಾಂ ರೆಡ್ಡಿ ಮಾತನಾಡಿ, ‘ ಮನುಷ್ಯನ ಆರೋಗ್ಯಕ್ಕೆ ತರಕಾರಿ ಸೇವನೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಕಾಯಿ, ಹಣ್ಣು, ಬೇಳೆ, ತರಕಾರಿ ಪದಾರ್ಥಗಳನ್ನು ತಿನ್ನುವುದು ಕಡಿಮೆಯಾಗಿದೆ. ದೇಹದ ಆರೈಕೆಯಷ್ಟೇ ಕಣ್ಣಿನ ಆರೈಕೆ ಕೂಡ ಮುಖ್ಯ. ಕಣ್ಣು ಜೋಪಾನವಾಗಿಟ್ಟುಕೊಳ್ಳಬೇಕು. ನೇತ್ರದಾನದ ಮಹತ್ವ ಅರಿತು ನೆರೆಹೊರೆಯವರಲ್ಲಿ ಕೂಡ ಆ ಬಗ್ಗೆ ತಿಳುವಳಿಕೆ ಮೂಡಿಸಬೇಕು’ ಎಂದು ಹೇಳಿದರು.

ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಲಿಚ್ಚಿಸುವವರ ಹೆಸರನ್ನು ನೋಂದಾಯಿಸಿಕೊಳ್ಳಲಾಯಿತು. ನಮ್ಮ ಚಿಕ್ಕಬಳ್ಳಾಪುರ ಯುವಕರ ತಂಡದ ಪದಾಧಿಕಾರಿಗಳಾದ ವಿನಯ್‌ ಕುಮಾರ್‌, ಮಧುಗೌಡ, ಮಂಜುನಾಥ್‌, ವಿಶ್ವನಾಥ್‌, ಶಿವಪ್ರಕಾಶ್‌, ವಿಶ್ವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT