ಶುಕ್ರವಾರ, ಅಕ್ಟೋಬರ್ 22, 2021
30 °C
ಪ್ಲಾಟ್‍ಫಾರಂನಲ್ಲೇ ನಿಲ್ಲಿಸಲು ಪ್ರಯಾಣಿಕರ ಆಗ್ರಹ

ಬಾಗೇಪಲ್ಲಿ: ಕೆಎಸ್‍ಆರ್‌ಟಿಸಿ ಬಸ್‌ ಅಡ್ಡಾದಿಡ್ಡಿ ನಿಲುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್‍ಗಳ ನಿಲುಗಡೆಗೆ ಪ್ಲಾಟ್‍ಫಾರಂಗಳು ಇದ್ದರೂ, ಕೆಲ ಚಾಲಕರು, ನಿರ್ವಾಹಕರು ಪಾದಚಾರಿ ರಸ್ತೆಯಲ್ಲಿ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಬಸ್‍ಗಳನ್ನು ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯುಂಟಾಗಿದೆ.

ಪಟ್ಟಣದಲ್ಲಿ ಒಂದೇ ಒಂದು ಮುಖ್ಯರಸ್ತೆ ಇದೆ. ಮುಖ್ಯರಸ್ತೆಗೆ ಅಂಟಿಕೊಂಡಂತೆ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ, ಬೆಸ್ಕಾಂ, ಪುರಸಭೆ, ತಾಲ್ಲೂಕು ಕಚೇರಿ, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಚೇರಿಗಳು ಇವೆ. ಸರ್ಕಾರಿ ಕಿರಿಯ, ಪ್ರಾಥಮಿಕ, ಪ್ರೌಢಶಾಲೆಗಳು ಇವೆ. ಇದೇ ಪ್ರತಿನಿತ್ಯ ಮುಖ್ಯರಸ್ತೆಯಲ್ಲಿ ಸಾವಿರಾರು ಜನರು, ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ.

ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿಶಾಲವಾದ  ಜಾಗ ಇದೆ. ಬೆಂಗಳೂರು, ಆಂಧ್ರಪ್ರದೇಶದ ಕಡೆಗಳಿಂದ, ಚಿಂತಾಮಣಿ, ಪಾತಪಾಳ್ಯ, ಗೂಳೂರು ಕಡೆಗಳಿಗೆ ಸಂಚರಿಸುವ ಸಾರಿಗೆ ಬಸ್‍ಗಳಿಗೆ ಕ್ರಮ ಸಂಖ್ಯೆ, ಪ್ಲಾಟ್‍ಫಾರಂಗಳನ್ನು ನಿಗದಿಪಡಿಸಲಾಗಿದೆ. ಹೊರಗೆ, ಒಳಗೆ ಹೋಗಿ ಬರಲು 2 ಕಡೆ ಮಾರ್ಗಗಳನ್ನು ಮಾಡಲಾಗಿದೆ. ಇದೀಗ ಹೊರಗೆ ಹೋಗುವ ಬಸ್‌ಗಳ ಮಾರ್ಗದಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶದ ಬಸ್‌ಗಳನ್ನು ನಿಲ್ಲಿಸುತ್ತಿದ್ದಾರೆ.

ಚಿಂತಾಮಣಿಗೆ ಸಂಚರಿಸುವ ಬಸ್‌ಗಳನ್ನು ಪ್ಲಾಟ್ ಫಾರಂನಲ್ಲಿ ನಿಲ್ಲಿಸದೇ, ಬಸ್‍ಗಳು ಹೋಗಿ, ಬರುವ ಸ್ಥಳದಲ್ಲಿ ನಿಲ್ಲಿಸಲಾಗುತ್ತಿದೆ. ಒಂದೇ ಮಾರ್ಗದಲ್ಲಿ ಬಸ್‌ಗಳು ಹೋಗಲು, ಬರಲು ಮಾಡಿಕೊಂಡಿದ್ದಾರೆ. ಇದರಿಂದ ಬಸ್‌ಗಳು ಮುಖಾಮುಖಿ ಆಗಿ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.

ಬೆಂಗಳೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಸೇರಿದಂತೆ ಆಂಧ್ರಪ್ರದೇಶದ ಕಡೆಗಳಿಗೆ ಸಂಚರಿಸುವ ಬಸ್‌ಗಳನ್ನು ಚಾಲಕರು, ನಿರ್ವಾಹಕರು ನಿಗದಿಪಡಿಸಿದ ಕ್ರಮಸಂಖ್ಯೆ, ಫ್ಲಾಟ್ ಫಾರಂಗಳಲ್ಲಿ ನಿಲ್ಲಿಸಬೇಕು. ಪಾದಚಾರಿಗಳ ರಸ್ತೆಯಲ್ಲಿ ಕೆಲ ಚಾಲಕರು, ನಿರ್ವಾಹಕರು ಬಸ್ ಗಳನ್ನು ನಿಲ್ಲಿಸಿ, ಪ್ರಯಾಣಿಕರನ್ನು ಹತ್ತಿಸುವುದು, ಇಳಿಸುವುದು ಮಾಡುತ್ತಿದ್ದಾರೆ. ತಾಲ್ಲೂಕು ಕೇಂದ್ರದಲ್ಲಿ ಖಾಸಗಿ ಬಸ್ ನಿಲ್ದಾಣ ಇಲ್ಲ. ಇದರಿಂದ ಖಾಸಗಿ ಬಸ್‌ಗಳನ್ನು ಸಹ ಮುಖ್ಯರಸ್ತೆಯ ಪಾದಚಾರಿಯ ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ತೊಂದರೆ ಆಗಿದೆ ಎಂದು ಸಾರ್ವಜನಿಕರು ದೂರಿದರು.

ಕೆಎಸ್‍ಆರ್‌ಟಿಸಿ ಘಟಕದ ವ್ಯವಸ್ಥಾಪಕರು ಕೂಡಲೇ ಸಾರಿಗೆ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ನೇಮಿಸಿ, ಜನರನ್ನು ನಿಲ್ದಾಣದಲ್ಲಿ ಇರುವಂತೆ ಮಾಡಿಸಬೇಕು. ಬಸ್‌ಗಳನ್ನು ಫ್ಲಾಟ್ ಫಾರಂನಲ್ಲಿ ನಿಲ್ಲಿಸುವಂತೆ ಮಾಡಬೇಕು ಎಂದು ರೈತ ಸಂಘದ ಮುಖಂಡ ಎಂ.ಎಸ್.ನರಸಿಂಹರೆಡ್ಡಿ ಒತ್ತಾಯಿಸಿದರು.

ಕ್ರಮ ಜರುಗಿಸಿ: ಪಾದಚಾರಿ ರಸ್ತೆಯಲ್ಲಿ, ಬಸ್ ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಹೋಗಿಬರಲು ತೊಂದರೆ ಆಗಿದೆ. ಬಸ್‌ಗಳನ್ನು ತಿರುಗಿಸಲು ಆಗುತ್ತಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ಚಾಲಕರ, ನಿರ್ವಾಹಕರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಪಿಎಸ್‍ಎಸ್ ಸಂಘಟನೆಯ ಮುಖಂಡ ಚನ್ನರಾಯಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.