ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹ್ವಾ ಚಾಪಲ್ಯ ತಣಿಸಿದ ಅವರೆ ಖಾದ್ಯ

ವಾಸವಿ ಧರ್ಮ ಶಾಲೆಯಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರಿಂದ ‘ಅವರೆ ಬೇಳೆ ಮೇಳ’
Last Updated 14 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಲ್ಲಿ ಹತ್ತಾರು ಬಾಣಲೆಯಲ್ಲಿನ ಕುದಿಯುವ ಎಣ್ಣೆಯಿಂದ ಹೊಮ್ಮುತ್ತಿದ್ದ ಅವರೆ ಬೇಳೆಯ ಘಮಲು ಹೊತ್ತೇರಿದಂತೆ ಜನಸಂದಣಿಯೂ ಹೆಚ್ಚುವಂತೆ ಮಾಡಿತ್ತು. ಅಲ್ಲಿಗೆ ಬಂದ ಪ್ರತಿಯೊಬ್ಬರೂ ‘ಅವರೆ ಬೇಳೆಯಿಂದ ಇಷ್ಟೆಲ್ಲಾ ಅಡುಗೆ ಮಾಡಬಹುದಾ’ ಎಂದು ಜನರು ಅಚ್ಚರಿ ಪಡುತ್ತಿದ್ದು ಕಂಡುಬಂತು.

ನಗರದ ಗಂಗಮ್ಮಗುಡಿ ರಸ್ತೆ ಕ್ರಾಸಿನಲ್ಲಿರುವ ವಾಸವಿ ಧರ್ಮ ಶಾಲೆಯಲ್ಲಿ ಶನಿವಾರ ವಾಸವಿ ಮಹಿಳಾ ಮಂಡಳಿ ಮತ್ತು ವೈಕುಂಠ ಭಜನಾ ಮಂಡಳಿ ಸಹಯೋಗದಲ್ಲಿ ಆರ್ಯವೈಶ್ಯ ಸಮುದಾಯದ ಮಹಿಳೆಯರು ಆಯೋಜಿಸಿದ್ದ ‘ಅವರೆ ಬೇಳೆ ಮೇಳ’ದಲ್ಲಿ ಕಂಡ ದೃಶ್ಯವಿದು.

ಸಂಜೆ ಹೊತ್ತಿಗೆ ಶುರುವಾದ ಮೇಳಕ್ಕೆ ಮುಗಿಬಿದ್ದ ಅಬಾಲವೃದ್ಧರು ಅವರೆ ಬೇಳೆಯ ವಿವಿಧ ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರೆಕಾಯಿ ಹೋಳಿಗೆ, ಹಲ್ವಾ, ಚಿಕ್ಕಿ, ಶಿರಾ, ಜೆಲ್ಲಿ, ಹಿತಕಬೇಳೆ ಎಳ್ಳವರೆ, ಅವರೆ ಬೇಳೆ ಸ್ಟಿಕ್‌ ಮುಂತಾದ ಸಿಹಿ ತಿನಿಸುಗಳೂ ಘಮಘಮಿಸುತ್ತಿದ್ದವು. ಗಟ್ಟಿ ಮನಸು ಮಾಡಿ ಹೆಜ್ಜೆ ಮುಂದೆ ಹಾಕಿದರೆ ಖಾರದ ತಿನಿಸುಗಳು. ಸುಮ್ಮನಿರಲು ಸಾಧ್ಯವೇ? ಅವುಗಳ ರುಚಿಯನ್ನೂ ನೋಡಬೇಕು ಎನ್ನುವ ಆಸೆ ಮೇಳಕ್ಕೆ ಬಂದವರದು.

ಅವರೆಕಾಳು ದೋಸೆ ಕೂಡಾ ಸುವಾಸನೆಯಿಂದಲೇ ಮನಸನ್ನು ಸೆಳೆಯಿತು. ಈರುಳ್ಳಿ, ಕೊತ್ತಂಬರಿ, ಅವರೆಬೇಳೆಗಳ ಮಿಶ್ರಣದಲ್ಲಿ ದಪ್ಪವಾಗಿ ಮೈದಳೆದಿತ್ತು. ಸಾದಾ ಪಡ್ಡು ರುಚಿ ನೋಡಿದ್ದವರಿಗೆ ಅವರೆಬೇಳೆ ಪಡ್ಡು ರುಚಿ ನೋಡುವ ಅವಕಾಶ ಸಿಕ್ಕಿತ್ತು. ಇನ್ನು ಅಲ್ಲಿದ್ದ ಅವರೆಬೇಳೆ ಬೋಂಡಾ, ವಡೆ, ನಿಪ್ಪಟ್ಟುಗಳ ಸ್ವಾದವೂ ಖುಷಿ ನೀಡಿತು.

ಅವರೆಕಾಳಿನ ಚಿತ್ರಾನ್ನ, ಪಲಾವ್‌, ಉಸುಲಿ, ಮಸಾಲೆ ಇಡ್ಲಿ, ಪಾಯಸ ಅಲ್ಲಿ ಬಹುಬೇಡಿಕೆ ಇತ್ತು. ಅವರೆಕಾಳಿನ ಕೇಸರಿಬಾತ್‌ ಸವಿಯುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಅಲ್ಲಿದ್ದವರು ದೇಹಕ್ಕೆ ಸೇರುತ್ತಿರುವ ಕ್ಯಾಲರಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಆದರಾತಿಥ್ಯ ಜನಜಂಗುಳಿಯ ಖುಷಿಯನ್ನೂ ಹೆಚ್ಚಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT