ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಉದ್ಘಾಟನೆಗೂ ಮುನ್ನವೇ ಸಂಚಾರಕ್ಕೆ ಸಾಕ್ಷಿಯಾದ ರೈಲ್ವೆ ಮೇಲ್ಸೇತುವೆ

Published 26 ಮೇ 2023, 13:34 IST
Last Updated 26 ಮೇ 2023, 13:34 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಅರವಿಂದ ನಗರದಿಂದ ಎಂ.ಜಿ ರಸ್ತೆಯವರೆಗೆ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಾಣಗಿರುವ ಮೇಲ್ಸೆತುವೆಯು ಉದ್ಘಾಟನೆಗೂ ಮುನ್ನವೇ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುವುದು ಸ್ಥಳೀಯ ‌ನಾಗರೀಕರಲ್ಲಿ ಆತಂಕ ಮತ್ತು ಅನುಮಾನಕ್ಕೆ ಕಾರಣವಾಗಿದೆ.

2017 ರಲ್ಲಿ ನಗರದಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಎಂ.ಜಿ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೇಂದ್ರ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಸುಮಾರು ₹ 20 ಕೋಟಿ ಅನುದಾನದಡಿಯಲ್ಲಿ 6 ವರ್ಷಗಳಿಂದಲೂ ಕುಂಟುತ್ತಾ ಆಮೆ ವೇಗದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ‌ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದೆ. ಆದರೆ ಉದ್ಘಾಟನೆ ಭಾಗ್ಯ ದೊರೆಯದ ಮುನ್ನವೇ ಬಸ್ಸು, ಲಾರಿ, ಕಾರು ಸೇರಿದಂತೆ ಇತರ ಬಾರೀ ಗಾತ್ರದ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ದೊರೆತಿದೆ. ಇದರಿಂದಾಗಿ ಸ್ಥಳೀಯ ನಾಗರೀಕರಲ್ಲಿ ಒಂದೆಡೆ ಸಂತಸ ಮೂಡಿದರೆ ಮತ್ತೊಂದೆಡೆ ಆತಂಕಕ್ಕೆ ಕಾರಣವಾಗಿದೆ.

ನಗರಸಭೆಯ 21 ಮತ್ತು 12 ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಈ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಹೊಸೂರು, ಬೈರೇನಹಳ್ಳಿ, ತುಮಕೂರು, ಸಿರಾ, ಮಧುಗಿರಿ ಸೇರಿದಂತೆ ಇತರೆಡೆಗಳಿಗೆ ಸಂಪರ್ಕ ಕಲ್ಪಿಸುವ ಮುಕ್ತ ರಸ್ತೆಯಾಗಿದೆ. ಜತೆಗೆ ಲೀಡರ್ ಇಂಟರ್ ನ್ಯಾಷನಲ್ ಶಾಲೆ, ಬಿಜಿಎಸ್ ಶಾಲೆ, ಅರವಿಂದ ಶಾಲೆ, ಯಶಸ್ವಿ ಪದವಿ ಪೂರ್ವ ಕಾಲೇಜು, ಸಿಲ್ವರ್ ಅಪೆರಲ್ 2 ಗಾರ್ಮೆಂಟ್ಸ್ ಸೇರಿದಂತೆ ಇತರೆಡೆಗಳಿಂದ ಸಂಪರ್ಕ ಕಲ್ಪಿಸಲು ಮುಖ್ಯ ಸೇತುವೆಯಾಗಿದೆ. ಆದರೆ ಕಳೆದ 5-6 ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿರುವ ಈ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದ ಜನತೆ ತೀವ್ರ ಸಂಕಷ್ಟ ಎದುರಿಸಿ ಗುತ್ತಿಗೆದಾರರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿತ್ತು.

ಪ್ರಸ್ತುತ ರೈಲ್ವೆ ‌ಮೇಲ್ಸೆತುವೆ ಕಾಮಗಾರಿಯು ಪೂರ್ಣಗೊಂಡಿಲ್ಲ. ರಸ್ತೆಗೆ ಜಲ್ಲಿ ಮತ್ತು ವೆಟ್ ಮಿಕ್ಸ್ ಹಾಕಿ ರಸ್ತೆಯ ಎರಡೂ ಬದಿಯಲ್ಲಿನ ಪಾದಚಾರಿ ರಸ್ತೆಯ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕಳೆದ 5-6 ವರ್ಷಗಳಿಂದಲೂ ತಾಳ್ಮೆಯಿಂದ ಇದ್ದ ನಾಗರೀಕರು ಇದೀಗ ಯಾವುದೇ ಎಚ್ಚರಿಕೆಗಳಿಗೂ ಸೊಪ್ಪಾಕದೆ ನಿರ್ಭೀತಿಯಿಂದ ಮೇಲ್ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ಮುಂದಾಗಿದ್ದಾರೆ. ಇದರ ಬಗ್ಗೆ ಗುತ್ತಿಗೆದಾರ ಯಾವುದೇ ಕ್ರಮ ವಹಿಸದೆ ಸುಖಾ ಸುಮ್ಮನಾಗಿದ್ದಾರೆ. ಸ್ಥಳೀಯವಾಗಿ ನಡೆಯುವ ಕಾಮಗಾರಿಗಳ ಗುಣಮಟ್ಟ, ಅದರ ಪೂರ್ಣ ಕಾಮಗಾರಿ ಸೇರಿದಂತೆ ಇತರ ವಿಚಾರಗಳನ್ನು ಪ್ರಶ್ನಿಸುವ ಪ್ರಜ್ಞಾವಂತ ‌ನಾಗರೀಕರು ಮೂಕ ಪ್ರೇಕ್ಷಕರಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣಕುರುಡು ನೀತಿಯನ್ನು ಅನುಸರಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಇನ್ನೂ ಅಪೂರ್ಣಗೊಂಡಿರುವ ಮೇಲ್ಸೇತುವೆ ‌ಮೇಲೆ ನಿತ್ಯ ನೂರಾರು ಬಾರೀ ಗಾತ್ರದ ವಾಹನಗಳು ಮತ್ತು ಬಸ್ಸುಗಳ ಸಂಚಾರವು ಯಾವುದೇ ನೀತಿ ನಿಯಮಾವಳಿಗಳಿಲ್ಲದೆ ಸಂಚಾರ ಮಾಡುತ್ತಿದ್ದರೂ ಕೂಡ ಸಂಬಂಧಪಟ್ಟವರು ಯಾವುದೇ ಶಿಸ್ತಿನ ಕ್ರಮಕ್ಕೆ ಮುಂದಾಗದಿರುವುದು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಏನಾದರೂ ಅನಾವುತಗಳು ಸಂಭವಿಸಿದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆಗಾರರಾಗುತ್ತಾರೆ.

ಅಪಾಯಕ್ಕೆ ಆಹ್ವಾನ ನೀಡುವ ಅಪೂರ್ಣ ಕಾಮಗಾರಿ
ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಈ ಸೇತುವೆಯನ್ನು ಅವಲಂಭಿಸಿ ನಿತ್ಯ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾವಿರಾರು ಮಂದಿ ಮಹಿಳಾ ಕಾರ್ಮಿಕರು ಸಂಚಾರ ಮಾಡುತ್ತಾರೆ. ಸೇತುವೆಯ ಕೆಳಭಾಗದಲ್ಲಿ ಅಥವಾ ಮೇಲ್ಬಾಗದಲ್ಲಿ ಯಾವುದೇ ಸೂಚನಾ ಫಲಕಗಳನ್ನು ಗುತ್ತಿಗೆದಾರರು ಅಳವಡಿಸಿಲ್ಲ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ನೌಕರರ ಬದುಕಿಗೆ ಮಾರಕವಾಗಿದೆ. ಸಾಕಷ್ಟು ಅಪಾಯಗಳಿಗೆ ಆಹ್ವಾನ ನೀಡುವಂತಾಗಿದೆ.
ಅಭಿಪ್ರಾಯಗಳು
' ಕಾಮಗಾರಿಗಳು ಬಹುತೇಕವಾಗಿ ಪೂರ್ಣಗೊಂಡಿದ್ದು ಪ್ರಯೋಗಾರ್ಥವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರಬೇಕಾಗಿದೆ. ಇದರ ಬಗ್ಗೆ ವಿಚಾರ ಮಾಡಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ತಿಳಿಸುತ್ತೇವೆ. ಶೀಘ್ರದಲ್ಲೇ ಮೇಲ್ಸೇತುವೆ ಕಾಮಗಾರಿಯ ಲೋಕಾರ್ಪಣೆ ಮಾಡಿ ನಗರ ಹಾಗೂ ತಾಲ್ಲೂಕಿನ ಜನತೆಗೆ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುವುದು '
- ಕೆ.ಎಚ್.ಪುಟ್ಟಸ್ವಾಮಿಗೌಡ, ಶಾಸಕರು, ಗೌರಿಬಿದನೂರು.
' ಕಾಮಗಾರಿ ಕಾರ್ಯ ಆರಂಭವಾದಾಗಿನಿಂದಲೂ ಈ‌ ಭಾಗದ ಜನತೆಗೆ ಸಂಕಷ್ಟ ತಪ್ಪಿದ್ದಲ್ಲ‌. ಕನಿಷ್ಟ ಕಾಮಗಾರಿ ಮುಗಿಯುವವರೆಗೂ ಗುತ್ತಿಗೆದಾರರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ನಾಗರೀಕರಿಗೆ ತಿಳಿಸಬೇಕಾಗಿತ್ತು. ಆದರೆ ಅಪೂರ್ಣಗೊಂಡ ಮೇಲ್ಸೇತುವೆಯಲ್ಲಿ ಈ ರೀತಿ ವಾಹನಗಳ ಸಂಚಾರ ಅವೈಜ್ಞಾನಿಕ ಮತ್ತು ಅಪಾಯವಾಗಿದೆ '
- ಮಂಜುನಾಥ್, ಅರವಿಂದ ನಗರ ನಿವಾಸಿ.
' ರೈಲ್ವೆ ‌ಮೇಲ್ಸೆತುವೆ ಕಾಮಗಾರಿಯು ಜನತೆಗೆ ಅಗತ್ಯವಾಗಿತ್ತು, ಆದರೆ ಇಷ್ಟೊಂದು ವಿಳಂಬವಾಗುವುದಾದರೆ ಈ ಹಿಂದಿನ ರೀತಿಯಲ್ಲಿಯೇ ನಾಗರೀಕರು ಸಂಚರಿಸುತ್ತಿದ್ದರು. ಅನಾವಶ್ಯಕವಾಗಿ ಸರ್ಕಾರದ ಹಣವನ್ನು ವೆಚ್ಚ ಮಾಡಿ ನಿಗಧಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ '
- ಜಿ.ವಿ.ಲೋಕೇಶ್ ಗೌಡ, ಗುಂಡಾಪುರ ನಿವಾಸಿ,
' ಕಳೆದ 15 ವರ್ಷಗಳಿಂದಲೂ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದೇವೆ, ಆದರೆ ಕಳೆದ 6 ವರ್ಷದಲ್ಲಿ ಅನಿಭವಿಸಿದ ಯಾತನೆ ನಿಜಕ್ಕೂ ಸ್ಥಳೀಯ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಿದೆ. ಕಾಮಗಾರಿಯಲ್ಲಿ ಚುರುಕು ಕಾಣದ ಕಾರಣ ಅನಾವಶ್ಯಕವಾಗಿ ನಾಗರೀಕರನ್ನು ಹೈರಾಣ ಮಾಡಿದ್ದಾರೆ '
- ಲಕ್ಷ್ಮಿದೇವಮ್ಮ, ಶಿಕ್ಷಕಿ.
ಪ್ರಸ್ತುತ ಮೇಲ್ಸೇತುವೆ ‌ಮೇಲಿನ ಪಾದಚಾರಿ ರಸ್ತೆ ಮಾರ್ಗ ಪ್ರಗತಿಯಲ್ಲಿದೆ
ಪ್ರಸ್ತುತ ಮೇಲ್ಸೇತುವೆ ‌ಮೇಲಿನ ಪಾದಚಾರಿ ರಸ್ತೆ ಮಾರ್ಗ ಪ್ರಗತಿಯಲ್ಲಿದೆ
ಗೌರಿಬಿದನೂರು ‌ನಗರದ ರೈಲ್ವೆ ನಿಲ್ದಾಣದ ‌ಸಮೀಪದಲ್ಲಿ ಅಪೂರ್ಣಗೊಂಡಿರುವ ರೈಲ್ವೆ ‌ಮೇಲ್ಸೆತುವೆ ಮೇಲೆ ವಾಹನಗಳ ಸಂಚಾರ ಆರಂಭವಾಗಿದೆ
ಗೌರಿಬಿದನೂರು ‌ನಗರದ ರೈಲ್ವೆ ನಿಲ್ದಾಣದ ‌ಸಮೀಪದಲ್ಲಿ ಅಪೂರ್ಣಗೊಂಡಿರುವ ರೈಲ್ವೆ ‌ಮೇಲ್ಸೆತುವೆ ಮೇಲೆ ವಾಹನಗಳ ಸಂಚಾರ ಆರಂಭವಾಗಿದೆ
ಗೌರಿಬಿದನೂರು ‌ನಗರದ ರೈಲ್ವೆ ನಿಲ್ದಾಣದ ‌ಸಮೀಪದಲ್ಲಿ ಅಪೂರ್ಣಗೊಂಡಿರುವ ರೈಲ್ವೆ ‌ಮೇಲ್ಸೆತುವೆ ಮೇಲೆ ವಾಹನಗಳ ಸಂಚಾರ ಆರಂಭವಾಗಿದೆ
ಗೌರಿಬಿದನೂರು ‌ನಗರದ ರೈಲ್ವೆ ನಿಲ್ದಾಣದ ‌ಸಮೀಪದಲ್ಲಿ ಅಪೂರ್ಣಗೊಂಡಿರುವ ರೈಲ್ವೆ ‌ಮೇಲ್ಸೆತುವೆ ಮೇಲೆ ವಾಹನಗಳ ಸಂಚಾರ ಆರಂಭವಾಗಿದೆ
ಕೆ.ಎಚ್.ಪುಟ್ಟಸ್ವಾಮಿಗೌಡ ಶಾಸಕ
ಕೆ.ಎಚ್.ಪುಟ್ಟಸ್ವಾಮಿಗೌಡ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT