ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ: ದೇಶ ಒಗ್ಗೂಡಿಸುವ ಕಾರ್ಯ

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಚಿವ ಡಾ.ಕೆ.ಸುಧಾಕರ್‌ರಿಂದ ಚಾಲನೆ
Last Updated 16 ಜನವರಿ 2021, 3:52 IST
ಅಕ್ಷರ ಗಾತ್ರ

ಚಿಂತಾಮಣಿ: ‘ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕೆಲಸ ಇಡೀ ದೇಶವನ್ನು ಒಗ್ಗೂಡಿಸುವ ಕೆಲಸವಾಗಿದೆ. ಇದರಿಂದ ದೇಶದಲ್ಲಿ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಹಾಗೂ ವಿಶ್ವ ಹಿಂದೂ ಪರಿಷತ್ ಕಚೇರಿ ಉದ್ಘಾಟನೆ ಮತ್ತು ಶ್ರೀ ರಾಮಮಂದಿರ ನಿರ್ಮಾಣದ ಪ್ರಯುಕ್ತ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರ ಮಾನಸ ಸರೋವರದ ಕೈಲಾಸನಾಥನಂತೆ ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾಗುತ್ತದೆ. ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದ ಹಿಂದೂಗಳ ಪುಣ್ಯಕ್ಷೇತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅನೇಕ ಹೋರಾಟಗಾರರ, ಇತಿಹಾಸಕಾರರ ಹೋರಾಟ, ಸಂಘರ್ಷ, ಸಂಕಲ್ಪದ ಫಲವಾಗಿ ಶ್ರೀರಾಮ ಮಂದಿರ ನಿರ್ಮಾಣ
ವಾಗುತ್ತಿದೆ’ ಎಂದು ತಿಳಿಸಿದರು.

‘ದಶಾವತಾರಗಳಲ್ಲಿ ಶ್ರೀ ರಾಮಚಂದ್ರನ ಅವತಾರ ವಿಶೇಷವಾಗಿದೆ. ಶ್ರೀರಾಮನ ಆದರ್ಶ ಇಂದಿನ ಕಾಲಘಟ್ಟಕ್ಕೂ ಹಾಗೂ ಭೂಮಿ ಇರುವವರೆಗೂ ಪ್ರಸ್ತುತವಾಗಿರುತ್ತದೆ. ಶ್ರೀರಾಮ ಸೀತೆಯನ್ನು ಕರೆತರಲು ವಾನರರು ಸಹಾಯ ಮಾಡಿದ್ದರು. ಶಿವಾಜಿ ಮಹಾರಾಜರು ಬ್ರಿಟೀಷರ ವಿರುದ್ಧ ಹೋರಾಡಲು ಜನರು ಕೈ ಜೋಡಿಸಿದ್ದರು. ಅದೇ ರೀತಿ ರಾಮನ ದೇಗುಲ ನಿರ್ಮಿಸಲು ದೇಶದ ಮೂಲೆ ಮೂಲೆಗಳಲ್ಲಿರುವ ಹಿಂದೂಗಳು ಭಾಗಿಯಾಗಬೇಕು’ ಎಂದರು.

‘ಶ್ರೀರಾಮ ಆದರ್ಶದ ಪ್ರತಿರೂಪ. ಪುತ್ರ, ಸಹೋದರ, ಪತಿಯಾಗಿ ಹೇಗೆ ಬಾಳಬೇಕು ಎಂಬುದನ್ನು ಶ್ರೀರಾಮಚಂದ್ರನನ್ನು ನೋಡಿ ಕಲಿಯಬಹುದು. ಇಂತಹ ಮಹಾನ್ ಪುರುಷನ ದೇಗುಲ ನಿರ್ಮಾಣಕ್ಕೆ ಅನೇಕ ಸಂತರು, ಸ್ವಯಂಸೇವಕರು ಹೋರಾಟ ಮಾಡಿದ್ದಾರೆ’ ಎಂದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೇಣಿಗೆ ಸಂಗ್ರಹ ಆಂದೋಲನದಂತೆ ನಡೆಯಬೇಕು. ಒಂದಿಬ್ಬರು ಶ್ರೀಮಂತರು ಸೇರಿಕೊಂಡು ದೇವಾಲಯ ನಿರ್ಮಾಣ ಮಾಡಬಹುದಿತ್ತು. ಆದರೆ ದೇಶದ ಪ್ರತಿಯೊಬ್ಬರೂ ನಿರ್ಮಾಣದಲ್ಲಿ ಭಾಗಿಯಾಗಬೇಕು ಎನ್ನುವ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ಪ್ರತಿಯೊಬ್ಬರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನಾನೂ ಜೊತೆಯಲ್ಲಿರುತ್ತೇನೆ’ ಎಂದರು.

‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲೂ ಸಂಘಟನೆ ಬಲಿಷ್ಠಗೊಳ್ಳಬೇಕಾಗಿದೆ. ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರು ಮನೆ ಮನೆಗೂ ತೆರಳಿ ನೆರವು ನೀಡಿದ್ದರು.ಆರ್.ಎಸ್.ಎಸ್ ನ ಶಿಸ್ತು, ಸಂಯಮ, ದೇಶಪ್ರೇಮವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದುಗ್ಗಲಾಪುರದ ಶಿವಯೋಗಾನಂದ ಸ್ವಾಮೀಜಿ, ಮುಖಂಡರಾದ ಗೌರಿಶಂಕರ್, ನಾಗರಾಜ್, ಕಾಶೀನಾಥ್ ಸೇರಿದಂತೆ ಆರ್.ಎಸ್.ಎಸ್, ವಿಶ್ವ ಹಿಂದೂ ಪರಿಷತ್, ಬಿಜೆಪಿಯ ಸ್ಥಳೀಯ ನಾಯಕರು, ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT