ಸೋಮವಾರ, ಜುಲೈ 4, 2022
24 °C
16 ಮಸೀದಿಗಳಿಗೆ ವಿದ್ಯುತ್‌ ದೀಪಾಲಂಕಾರ

ರಂಜಾನ್: ಸಿದ್ಧತೆಗಳು ಜೋರು

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಬಹು ಹಿಂದಿನಿಂದಲೂ ಕೋಮು ಸೌಹಾರ್ದದ ನೆಲೆವೀಡಾಗಿರುವ ಜಿಲ್ಲೆಯಲ್ಲಿ ಮತ್ತೊಂದು ರಂಜಾನ್ ಮಾಸ ತೆರೆ ಕಾಣುವ ಹಂತದಲ್ಲಿದೆ. 

ನಗರದಲ್ಲಿ ಅಲಂಕೃತಗೊಂಡಿರುವ ಮಸೀದಿಗಳ ಮಿನಾರುಗಳಿಂದ ಹೊರಡುವ ನಮಾಜ್‌ನ ನಿನಾದ, ಮುಸ್ಲಿಮರ ಮನೆ ಮನಗಳ ಕುರಾನ್‌ ಪಠಣಗಳಿಂದ ‘ಈದ್‌ಉಲ್‌ ಫಿತ್ರ್‌’ ಕಳೆಗಟ್ಟಿದೆ. ರಂಜಾನ್ ಬಂದಿದ್ದೇ ನಗರದ ಬಜಾರ್ ರಸ್ತೆ, ಕಾರ್ಖಾನೆ ಪೇಟೆ ರಸ್ತೆ ಸೇರಿದಂತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಹಣ್ಣುಗಳು, ವಿವಿಧ ಖಾದ್ಯಗಳು, ವಿವಿಧ ಸುಂಗಂಧ ದ್ರವ್ಯಗಳು, ಹೊಸ ಬಟ್ಟೆ, ಬೂಟು ಖರೀದಿ ಬಲು ಜೋರಿನಿಂದ ನಡೆದಿದೆ. 

 ‘ಈದ್‌ಉಲ್‌ ಫಿತ್ರ್‌’ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳು ನಡೆದಿವೆ. ನಗರದಲ್ಲಿರುವ 16 ಮಸೀದಿಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ನಗರದಲ್ಲಿ ವಾಣಿ ಚಿತ್ರಮಂದಿರ ಸಮೀಪದ ಹುಸೇನಿಯಾ ಮಸೀದಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಲಾಗುತ್ತಿದೆ.

ಸಿರಿವಂತರ ಹಲೀಮ, ಬಡವರ ಬೇಳೆ ಸಾರು: ರಂಜಾನ್ ಮಾಸದಲ್ಲಿ ಮುಸ್ಲಿಮರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಆಹಾರ ಸೇವಿಸುತ್ತಾರೆ. ಶ್ರೀಮಂತರ ಮನೆಗಳ ಊಟದ ಟೇಬಲ್‌ಗಳಲ್ಲಿ ಸಿಹಿ ತಿಂಡಿಗಳಾದ ಹೈದರಾಬಾದ್‌ ಹಲೀಮ್‌, ಖದ್ದು ಕೀರ್‌, ಜಿಲೇಬಿ, ಹಾರೀಸ್‌, ಖಾರದ ತಿನಿಸುಗಳಾದ ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಚಿಕನ್‌ಕೀಮಾ, ಚಿಕನ್‌ ಸಮೋಸಾ, ಲೆಗ್‌ಪೀಸ್‌, ಚಿಕನ್‌ ಫ್ರೈ, ತಂದೂರಿ ಮತ್ತು ರುಮಾಲಿ ರೋಟಿ ಇರುತ್ತವೆ. ಬಡವರ ಮನೆಗಳಲ್ಲಿ ಅವರವರ ಶಕ್ತಾನುಸಾರ ಚಿಕನ್, ಮಟನ್, ಬೇಳೆ ಸಾರಿನ ಊಟ ಮಾಡುತ್ತಾರೆ. ಬಡವ, ಶ್ರೀಮಂತರ ಎಂಬ ಭೇದವಿಲ್ಲದ ಹಣ್ಣು ಎಲ್ಲರ ಊಟದ ಮೆನುಗಳಲ್ಲಿ ಸ್ಥಾನ ಪಡೆದಿರುತ್ತವೆ.

ಮನ ಸೆಳೆಯುವ ಸಮೋಸ: ನಗರದ ವಿವಿಧ ಬಡಾವಣೆಗಳಲ್ಲಿ ಸಂಜೆಯಾದರೆ ಸಾಕು ಸಮೋಸ ಸೇರಿದಂತೆ ತರಹೇವಾರಿ ಖಾದ್ಯಗಳ ಘಮಲು ಮನೆ ಮಾಡುತ್ತಿದೆ. ದಿನವಿಡೀ ಉಪವಾಸ ವ್ರತ ನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆಯ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಾಗೆ ಅಗ್ರಸ್ಥಾನ. ಹೀಗಾಗಿ ರಂಜಾನ್ ಸಂದರ್ಭದಲ್ಲಿ ಪ್ರತಿ ಮಸೀದಿ ಬಳಿ ಹಣ್ಣು, ವಿವಿಧ ತಿನಿಸು, ಸಮೋಸಾ, ಕಚೋರಿ ಸೇರಿದಂತೆ ಹಲವು ಅಂಗಡಿಗಳ ಸಂತೆ ಮೈದಳೆಯಲು ಆರಂಭಿಸಿದೆ.

ನಗರದ ಜೂನಿಯರ್‌ ಕಾಲೇಜು ಮುಂಭಾಗದ ಮಸೀದಿ, ಬಾಲಾಜಿ ಟಾಕೀಸ್‌ ಪಕ್ಕ, ನಗರಸಭೆ ವೃತ್ತದ ಬಳಿಯ ಮಸೀದಿ, ಎಂ.ಜಿ ರಸ್ತೆ ಮಸೀದಿ ಬಳಿ, ಅಂಬೇಡ್ಕರ್‌ ವೃತ್ತ, ಜಿಲ್ಲಾ ಗ್ರಂಥಾಲಯ ಬಳಿ ರಂಜಾನ್ ಮಾಸದ ತರಹೇವಾರಿ ವಿಶೇಷ ಖಾದ್ಯಗಳ ಅಂಗಡಿಗಳು ಮೈದಳೆದಿವೆ. ಸೂರ್ಯಾಸ್ತದ ನಂತರ ಈ ಅಂಗಡಿಗಳಲ್ಲಿ ಸಮೋಸ ಜತೆಗೆ ಪಪ್ಪಾಯಿ, ಕಲ್ಲಂಗಡಿ, ಬಾಳೆ, ಖರ್ಜೂರ, ಹಾಲು, ಜ್ಯೂಸ್‌ ಆಸ್ವಾದನೆ ಕಾರುಬಾರು ಜೋರಾಗಿ ಕಂಡು ಬರುತ್ತಿದೆ.

ಸದ್ಯ ನಿತ್ಯ ಸಂಜೆ ನಗರದ ಮಸೀದಿಗಳ ಮುಂದೆ ಬಿಸಿಬಿಸಿಯಾಗ ಬಗೆಬಗೆ ಸಮೋಸಾಗಳ ಪರಿಮಳ ದಾರಿಹೋಕರ ರುಚಿ ಮೊಗ್ಗುಗಳನ್ನು ಅರಳಿಸುತ್ತಿದೆ. ಇದರ ಜತೆಗೆ ಕೆಲವೆಡೆ ಬಟಾಟೆ ವಡಾ, ಪಾವ್‌ಬಾಜಿ, ಬೊಂಡ, ಮೆಣಸಿನಕಾಯಿ ಬಜ್ಜಿ ಮಾರಾಟ ತಿಂಡಿಪ್ರಿಯರ ಬಾಯಲ್ಲಿ ನೀರೂರಿಸುತ್ತಿವೆ. ನಗರದಲ್ಲಿ ಈರುಳ್ಳಿ, ಮೊಟ್ಟೆ, ಚಿಕನ್‌ ಹೀಗೆ ವಿವಿಧ ಸ್ವಾದಗಳಲ್ಲಿ ಸಮೋಸಾಗಳು ದೊರೆಯುತ್ತವೆ.

ಖರ್ಜೂರ ತಿಂದು ಇಡೀ ದಿನ ಚೈತನ್ಯದಿಂದ ಇರುವ ಮುಸ್ಲಿಮರು, ಸಂಜೆಯಾದೊಡನೆ ಇಫ್ತಾರ್‌ಗೆ ಬಿಸಿ ಬಿಸಿ ಸಮೋಸ ಖರೀದಿಸಿ ಮನೆಗೆ ಒಯ್ಯುವರು. ರಂಜಾನ್ ಮಾಸಾಚರಣೆಯ ಸಂದರ್ಭದಲ್ಲಿ ನಗರದಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಸಮೋಸ ಮಾರಾಟವಾಗುತ್ತದೆ. ಇದಲ್ಲದೇ ಹಳ್ಳಿಗಳಲ್ಲಿ ಕೂಡ ವ್ಯಾಪಾರ ಜೋರಾಗಿದೆ ಎನ್ನುತ್ತಾರೆ
ವ್ಯಾಪಾರಿಗಳು.

‘ಸದ್ಯ ಸಮೋಸ ಸೀಜನ್. ರಂಜಾನ್ ಆರಂಭವಾಗುತ್ತಿದ್ದಂತೆ ಬೇಡಿಕೆ ಶುರುವಾಗುತ್ತದೆ. ದಿನದ ಹದಿನಾಲ್ಕುವರೆ ಗಂಟೆ ಉಪವಾಸವಿರುವ ಕಾರಣ ದೇಹದ ತೂಕ ಇಳಿಯುತ್ತದೆ ಎನ್ನುವುದು ವ್ರತಾಚರಣೆ ಮಾಡುವವರ ನಂಬಿಕೆ. ಅದಕ್ಕಾಗಿ ಈ ಸಂದರ್ಭದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನ ಆಹಾರ ಸೇವಿಸುವುದು ಮುಖ್ಯ. ಮುಸ್ಲಿಮರು ಹೆಚ್ಚು ಸಮೋಸ ಸವಿಯಲು ಇದೂ ಒಂದು ಕಾರಣ’ ಎಂಬುದು ಜೂನಿಯರ್‌ ಕಾಲೇಜು ಮುಂಭಾಗ ಸಮೋಸ ಮಾರುವ ಅಮೀರ್‌ ಜಾನ್‌.

‘ಕಳೆದ ಆರೇಳು ವರ್ಷಗಳಿಂದ ಸಮೋಸ ವ್ಯಾಪಾರ ಮಾಡುತ್ತಿದ್ದೇನೆ. ರಂಜಾನ್ ಸಂದರ್ಭದಲ್ಲಿ ನಮ್ಮ ಅಂಗಡಿಯಲ್ಲಿ ಸುಮಾರು 10 ಜನರಿಗೆ ಸಮೋಸ ತಯಾರಿಸುವುದೇ ಕೆಲಸ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ 300ರ ವರೆಗೆ ಮಾರಾಟವಾದರೆ, ಈಗ ದಿನಕ್ಕೆ 2 ಸಾವಿರದಷ್ಟು ಮಾರಾಟವಾಗುತ್ತವೆ’ ಎಂದು ಹೇಳಿದರು.

‘ಮುಸ್ಲಿಮರಷ್ಟೆ ಅಲ್ಲದೇ ಎಲ್ಲ ಸಮುದಾಯದ ಜನರು ಸಮೋಸ ರುಚಿಗೆ ಮಾರು ಹೋಗಿದ್ದಾರೆ. ರಂಜಾನ್‌ ಸಂದರ್ಭದಲ್ಲಿ ಮಧ್ಯಾಹ್ನದವರೆಗೆ 200ರಿಂದ 300 ಸಮೋಸ ಮಾರಾಟವಾದರೆ, ನಂತರ ಖರೀದಿಗೆ ಸಾಲು ನಿಂತಿರುತ್ತಾರೆ. ಸಂಜೆ ಕೆಲವರು ಮನೆಗೆ ಒಯ್ಯಲು ಕಾದು ನಿಂತಿರುತ್ತಾರೆ. ಇನ್ನಷ್ಟು ಜನರು ಮುಂಚಿತ ಹಣವನ್ನೂ ಕೊಟ್ಟಿರುತ್ತಾರೆ’ ಎಂದು ಬಿ.ಬಿ ರಸ್ತೆ ಬದಿಯ ಸಮೋಸಾ ವ್ಯಾಪಾರಿ ಅಪ್ಸರ್‌ ಹೇಳಿದರು.

‘ಉಪವಾಸ ಮುಗಿಸಿ ಹಸಿದ ಹೊಟ್ಟೆಯಲ್ಲಿ ಬರುವ ಬಡವರಿಗೆ, ಹಸಿದವರಿಗೆ ಊಟ ನೀಡಬೇಕು ಎಂದು ಖುರಾನ್‌ನಲ್ಲಿ ಹೇಳಿದೆ. ಹೀಗಾಗಿ ಎಲ್ಲ ಮಸೀದಿಗಳ ಬಳಿಯೂ ಸಮೋಸ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು