ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡಾದಿಡ್ಡಿ ವಾಹನ ನಿಲುಗಡೆ

ಬಾಗೇಪಲ್ಲಿ: ಸುಗಮ ಸಂಚಾರಕ್ಕೆ ಅಡ್ಡಿ– ಚಾಲಕರ ಪರದಾಟ
Last Updated 15 ಜುಲೈ 2022, 8:11 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಹಾಗೂ ಚಾಲನೆಯಿಂದ ಜನರು ಭಯದಿಂದ ಸಂಚರಿಸುತ್ತಿದ್ದರೂ ಪೊಲೀಸರು, ಪುರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಪಟ್ಟಣದಲ್ಲಿ 100 ಅಡಿಯಷ್ಟು ವಿಶಾಲವಾದ ಮುಖ್ಯರಸ್ತೆ ಇದೆ. ಮುಖ್ಯರಸ್ತೆ ಪಕ್ಕದಲ್ಲಿ ತಾಲ್ಲೂಕು ಕಚೇರಿ, ಪಂಚಾಯಿತಿ, ಸರ್ಕಾರಿ ಶಾಲಾ-ಕಾಲೇಜುಗಳಿವೆ. ಬಸ್ ನಿಲ್ದಾಣದ ಮುಂಭಾಗದಿಂದ ಕುಂಬಾರಪೇಟೆ ವೃತ್ತದವರೆಗೆ ಬೀದಿಬದಿಯಲ್ಲಿ ಸಗಟು ವ್ಯಾಪಾರ ವಹಿವಾಟು ಹೆಚ್ಚಾಗಿದೆ.

ಬಸ್ ನಿಲ್ದಾಣದಿಂದ ಡಾ.ಎಚ್.ಎನ್. ವೃತ್ತದವರೆಗೂ ಪಾದಚಾರಿ ರಸ್ತೆಯನ್ನು ವ್ಯಾಪಾರಸ್ಥರು ಅತಿಕ್ರಮಣ ಮಾಡಿದ್ದಾರೆ. ವ್ಯಾಪಾರಿಗಳು ಅಂಗಡಿಗಳ ವಸ್ತುಗಳನ್ನು ಪಾದಚಾರಿ ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ರಸ್ತೆ ಇಲ್ಲವಾಗಿದೆ. ತಾಲ್ಲೂಕು ಕೇಂದ್ರ ಆದರೂ ಖಾಸಗಿ ಬಸ್ ನಿಲ್ದಾಣ ಇಲ್ಲ. ಬಸ್‌ಗಳನ್ನು ಪಾದಚಾರಿಗಳ ರಸ್ತೆಯಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಆಟೊಗಳು, ಕಾರುಗಳು, ದ್ವಿಚಕ್ರವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಇಲ್ಲ. ಪ್ರತ್ಯೇಕವಾದ ನಿಲ್ದಾಣಗಳೂ ಇಲ್ಲ. ಇದರಿಂದ ವಾಹನಗಳ ಸವಾರರು ಮುಖ್ಯರಸ್ತೆಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಒಂದರ ಪಕ್ಕದಲ್ಲೊಂದು ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದಾರೆ. ಇದರಿಂದ ಹಿಂಬದಿ ನಿಲ್ಲಿಸಿರುವ ವಾಹನಗಳನ್ನು ತೆಗೆಯಲು ಸವಾರರು ಹರಸಾಹಸಪಡುವಂತಾಗಿದೆ.

ಪಟ್ಟಣದ ಕುಂಬಾರಪೇಟೆ, ಸರ್ಕಾರಿ ಶಾಲಾ-ಕಾಲೇಜಿನ ಮುಂಭಾಗ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣದ ಮುಂದಿರುವ ವೃತ್ತಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ‌ಪೊಲೀಸ್ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಪಟ್ಟಣದಲ್ಲಿ ಸಂಚಾರ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಾರ್ವಜನಿಕರು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂಬುದು ಜನರ ದೂರು.

ಪಟ್ಟಣದ ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳ ಚಾಲನೆಯಿಂದ ಪ್ರತಿದಿನ ಅಪಘಾತಗಳು ಸಂಭವಿಸಿ ಗಾಯಗೊಳ್ಳುತ್ತಿದ್ದಾರೆ. ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇತ್ತೀಚೆಗೆ ಪುರಸಭೆಯ ಇಬ್ಬರು ನೌಕರರು ಮೃತಪಟ್ಟಿದ್ದಾರೆ. ಆದರೆ, ಪೊಲೀಸ್ ಮತ್ತು ಆರ್‌ಟಿಒ, ಪುರಸಭೆ ಅಧಿಕಾರಿಗಳು ತಮಗೇನೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಚನ್ನರಾಯಪ್ಪ ಆರೋಪಿಸಿದರು.

‘ಪಟ್ಟಣದಲ್ಲಿ ದಿನೇ ದಿನೇ ವಾಹನಗಳ ಸಂಚಾರ ಸಂಖ್ಯೆ ಏರಿಕೆಯಾಗುತ್ತಿದೆ. ಕೆಲವು ವಾಹನಗಳಿಗೆ ಪರವಾನಗಿ ಇಲ್ಲ. ವಾಹನ ಚಾಲನಾ ಪರವಾನಗಿ, ವಿಮೆ ಸೇರಿದಂತೆ ಚಾಲಕರ ಬಳಿ ದಾಖಲೆಗಳೇ ಇಲ್ಲ. ಕೆಲವು ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ದಲಿತ ಹಕ್ಕುಗಳ ಸಮಿತಿಯ ತಾಲ್ಲೂಕು ಮುಖಂಡ ಜಿ. ಕೃಷ್ಣಪ್ಪ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT