ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ನೆಹರೂ ನಿಲಯ ಉದ್ಘಾಟನೆ

ಮುಂದಿನ ಬೇಸಿಗೆಯ ಒಳಗೆ ಬೆಟ್ಟದಲ್ಲಿ ನೀರಿನ ಶಾಶ್ವತ ಪರಿಹಾರಕ್ಕೆ ಯೋಜನೆ ಅನುಷ್ಠಾನ –ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್‌
Last Updated 15 ಜೂನ್ 2019, 12:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ₹2 ಕೋಟಿ ವೆಚ್ಚದಲ್ಲಿ ನವೀಕರಿಸಿದ ನೆಹರೂ ನಿಲಯವನ್ನು ಶನಿವಾರ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು, ‘ಪ್ರವಾಸಿಗರ ಅನುಕೂಲಕ್ಕಾಗಿ ನೆಹರೂ ನಿಲಯವನ್ನು ನವೀಕರಿಸಲಾಗಿದೆ. ಅಭಿವೃದ್ಧಿಗೆ ಕೊನೆ ಇಲ್ಲ. ಹೀಗಾಗಿ ಪ್ರವಾಸಿಗರ ಬೇಡಿಕೆಗಳಿಗೆ ಮನ್ನಣೆ ಕೊಟ್ಟು ಬೆಟ್ಟದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಎಂ.ವಿ.ವೆಂಕಟೇಶ್‌ ಮಾತನಾಡಿ, ‘ನಂದಿಬೆಟ್ಟಕ್ಕೆ ಸದ್ಯ ಸುಲ್ತಾನ್ ಪೇಟೆಯಿಂದ ಕುಡಿಯುವ ನೀರು ತರುವ ಕೆಲಸ ಮಾಡುತ್ತಿದ್ದೇವೆ. ನೀರಿನ ಶಾಶ್ವತ ಪರಿಹಾರಕ್ಕಾಗಿ ಎಚ್.ಎನ್‌.ವ್ಯಾಲಿ ನೀರು ತರಲು ಉದ್ದೇಶಿಸಲಾಗಿದೆ. ಬೆಟ್ಟದಲ್ಲಿ 20 ಲಕ್ಷ ಲೀಟರ್‌ ಸದಾ ಸಂಗ್ರಹಿಸುವಂತಹ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಮುಂದಿನ ಬೇಸಿಗೆಯ ಒಳಗೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಊಟಿಯಲ್ಲಿರುವ ಕರ್ನಾಟಕ ಸಿರಿ ಉದ್ಯಾನ ತಮಿಳುನಾಡಿನ ಬಟಾನಿಕಲ್ ಉದ್ಯಾನ ಹಿಂದಿಕ್ಕುತ್ತಿದೆ. ಪ್ರವಾಸಿಗರ ಸಂಖ್ಯೆ ವಾರ್ಷಿಕ 40 ಲಕ್ಷ ದಾಟಿದೆ. ಕೆಮ್ಮನಗುಂಡಿಯನ್ನು ಸಹ ಅಭಿವೃದ್ಧಿಗೊಳಿಸಲಾಗುತ್ತಿದೆ. ಬೃಂದಾವನ ಉದ್ಯಾನವನ್ನು ಭಾರಿ ಮತ್ತು ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಅಂತರರಾಷ್ಟ್ರ ಮಟ್ಟದಲ್ಲಿ ಪ್ರೇಕ್ಷಣೀಯ ಸ್ಥಳ ಮಾಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ’ ಎಂದರು.

‘ಪಂಪಾವನ, ರಾಜಾಸಿಟ್, ಉತ್ತರ ಕರ್ನಾಟಕದಲ್ಲಿರುವ ತೋಟಗಾರಿಕೆ ಕ್ಷೇತ್ರಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲು ನಾವು ಹೆಚ್ಚಿನ ಅನುದಾನ ತಂದಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವಗಳನ್ನು ಸಲ್ಲಿಸಿದ್ದೇವೆ. ಪ್ರತ್ಯೇಕ ಆಯುಕ್ತರು, ಸಚಿವರನ್ನು ಹೊಂದಿರುವ ರಾಜ್ಯ ತೋಟಗಾರಿಕೆ ಇಲಾಖೆ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ತೋಟಗಾರಿಕೆ ಯೋಜನೆ ಮುಖಾಂತರ ಇಲಾಖೆಗೆ ಗುರುತರ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಮಾತನಾಡಿ, ‘ನಂದಿಬೆಟ್ಟದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥೆಯೊಂದರ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಅಮೃತ ಸರೋವರ ಹೂಳೆತ್ತುವ ಕಾರ್ಯ ನಡೆದಿದೆ. ಒಂದು ವರ್ಷ ಈ ಅಭಿಯಾನ ನಡೆಯಲಿದೆ’ ಎಂದು ತಿಳಿಸಿದರು.

‘ಬೆಟ್ಟದಲ್ಲಿ ಶೀತ ವಲಯದ ಹೂವುಗಳನ್ನು ಬೆಳೆಯಲು ಪಾಲಿಹೌಸ್‌ಗಳನ್ನು ಸುಸಜ್ಜಿತಗೊಳಿಸಲಾಗಿದೆ. ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ 70–80 ಕಡೆಗಳನನು ನೀರು ಇಂಗುವ ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರವೇಶ ಶುಲ್ಕ ಸಂಗ್ರಹ ಟೆಂಡರ್‌ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ಇತ್ತೀಚೆಗೆ ಇತ್ಯರ್ಥಗೊಂಡಿದೆ. ಶೀಘ್ರದಲ್ಲಿಯೇ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಸಚಿವರು ‘ಕೃಷ್ಣರಾಜಸಾಗರ ಬೃಂದಾವನ ಉದ್ಯಾನ’ ಕಿರುಹೊತ್ತಿಗೆ ಬಿಡುಗಡೆಗೊಳಿಸಿದರು. ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಶಿವಕುಮಾರ್, ಉಪ ನಿರ್ದೇಶಕ ಕುಮಾರಸ್ವಾಮಿ, ನಂದಿಬೆಟ್ಟದ ವಿಶೇಷ ಅಧಿಕಾರಿ ರಮೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT