ಶುಕ್ರವಾರ, ಜನವರಿ 15, 2021
21 °C
ಅಶ್ವಿನಿ ಬಡಾವಣೆ ನಿವಾಸಿಗಳ ಪ್ರತಿಭಟನೆ

ಸ್ಮಶಾನ ಸ್ಥಳಾಂತರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಹೃದಯ ಭಾಗವಾದ ವಾರ್ಡ್ ನಂ. 7ರ ಅಶ್ವಿನಿ ಬಡಾವಣೆಯ ಜನವಸತಿ ಪ್ರದೇಶದಲ್ಲಿರುವ ರುದ್ರಭೂಮಿಯನ್ನು ನಗರದ ಹೊರಗಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಆ ಭಾಗದ ನಾಗರಿಕರು ಶನಿವಾರ ಪ್ರತಿಭಟನೆ ನಡೆಸಿದರು.

ಅಶ್ವಿನಿ ಬಡಾವಣೆಯ ರುದ್ರಭೂಮಿ ಸಂಪೂರ್ಣವಾಗಿ ಜನವಸತಿ ಪ್ರದೇಶದಲ್ಲಿದೆ. ಸುತ್ತಲೂ ವಾಸದ ಮನೆಗಳಿವೆ. ಅದಕ್ಕೆ ಹೊಂದಿಕೊಂಡು ಡೆಕ್ಕನ್ ಆಸ್ಪತ್ರೆ ಇದೆ. ಶವಗಳನ್ನು ಸುಡುವುದರಿಂದ ಬರುವ ಹೊಗೆ ಮತ್ತು ಕೆಟ್ಟ ವಾಸನೆಯಿಂದ ಸುತ್ತಮುತ್ತಲ ಮನೆಗಳ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ನಗರಸಭೆಗೆ ಮತ್ತು ತಹಶೀಲ್ದಾರ್‌ಗೆ ಮನವಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಶವ ಸಂಸ್ಕಾರ ಘಟಕ(ರುದ್ರಭೂಮಿ)ದಲ್ಲಿ ಶವಗಳನ್ನು ಸೌದೆಯಿಂದ ಸುಡುತ್ತಾರೆ. ಅದರಿಂದ ಬರುವ ಹೊಗೆ ಮತ್ತು ದುರ್ವಾಸನೆ ಬಹಳ ದೂರದವರೆಗೂ ಹರಡುತ್ತದೆ. ಸುತ್ತಮುತ್ತಲ ಮನೆಗಳಲ್ಲಿ ವಾಸವಾಗಿರುವ ಜನರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.

ವಿಶೇಷವಾಗಿ ಹಿರಿಯ ನಾಗರಿಕರು, ಮಕ್ಕಳು ಹೆಚ್ಚಿಗೆ ಅನಾರೋಗ್ಯಪೀಡಿತರಾಗುತ್ತಿದ್ದಾರೆ. ಪ್ರತಿನಿತ್ಯ ಶವಗಳನ್ನು ಸುಡುವುದರಿಂದ ಹೊರಬರುವ ಕೆಟ್ಟ ವಾಸನೆಯಿಂದ ಸುತ್ತಮುತ್ತಲಿನ ಜನ ಊಟ ಮಾಡಲು ಅಸಹ್ಯಪಡುವಂತಾಗಿದೆ. ನಗರದ ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗಗಳಿಂದಲೂ ಇಲ್ಲಿಗೆ ಶವಗಳನ್ನು ತಂದು ಸುಡುತ್ತಾರೆ ಎಂದು ಪ್ರತಿಭಟನಾಕಾರರು
ಆರೋಪಿಸಿದರು.

ಮೆದುಳು ಜ್ವರ, ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುವಂತಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿ ಸತ್ತವರನ್ನು ಸಹ ಇಲ್ಲೇ ತಂದು ಸುಡುತ್ತಾರೆ. ವ್ಯವಸ್ಥಿತವಾಗಿಯೂ ಸಂಸ್ಕಾರ ಮಾಡುವುದಿಲ್ಲ. ಮಕ್ಕಳು, ಹಿರಿಯರ ಆರೋಗ್ಯ ಕಾಪಾಡಲು ಕೂಡಲೇ ರುದ್ರಭೂಮಿಯನ್ನು ತೆರವುಗೊಳಿಸಬೇಕು ಎಂದು ನಿವಾಸಿ ಮಂಜುಳಾ ಮನವಿ ಮಾಡಿದರು.

ಜನವಸತಿ ಪ್ರದೇಶದಲ್ಲಿರುವ ರುದ್ರಭೂಮಿಯನ್ನು ನಗರದ ಹೊರಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಅಶ್ವಿನಿ ಬಡಾವಣೆಯ ನಿವಾಸಿಗಳು ಅನಿವಾರ್ಯವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.