ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಎರಡೇ ಸಾರ್ವಜನಿಕ ಶೌಚಾಲಯ!

ವಯಸ್ಸಾದ ಹಿರಿಯರು, ಮಹಿಳೆಯರ ಕಷ್ಟ ಹೇಳತೀರದು
Last Updated 15 ನವೆಂಬರ್ 2022, 4:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ: 2011ನೇ ಜನಗಣತಿಪ್ರಕಾರ ನಗರದ ಜನಸಂಖ್ಯೆ 50 ಸಾವಿರ. ಈಗ ಇನ್ನೂ ಹೆಚ್ಚಿದೆ. ಆದರೆ,ನಗರದಲ್ಲಿ ಸಾರ್ವಜನಿಕರ ಶೌಚಾಲಯಗಳು ಎರಡು ಮಾತ್ರ ಇವೆ. ಒಂದು ಪ್ರವಾಸಿ ಮಂದಿರದ ಹೊರಗೆ ಇದ್ದರೆ, ಮತ್ತೊಂದು ನಗರದ ಬಸ್ ನಿಲ್ದಾಣದ ಬಳಿ ಇದೆ. ಸಂತೆ ಬೀದಿ ಬೋವಿ ಕಾಲೊನಿಯಲ್ಲಿಇನ್ನೊಂದು ಇದೆಯಾದರೂನಿರ್ವಹಣೆಯಿಲ್ಲದೆ ಲೆಕ್ಕಕ್ಕಷ್ಟೇ ಉಳಿದಿದೆ.

ನಗರದಲ್ಲಿ ಇರುವುದು ಎರಡು ಪ್ರಮುಖ ರಸ್ತೆಗಳು. ಒಂದು ಅಶೋಕ ರಸ್ತೆಯಾದರೆ ಮತ್ತೊಂದು ಟಿ.ಬಿ.ರಸ್ತೆ. ಊರಿನ ಹಳೆ ರಸ್ತೆಯೆನಿಸಿರುವ ಅಶೋಕ ರಸ್ತೆಯಲ್ಲಿ ನಗರಸಭೆ, ಸರ್ಕಾರಿ ಶಾಲೆಗಳು, ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ, ಹಲವು ದೇವಸ್ಥಾನಗಳು, ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳು ಇವೆ.

ಟಿ.ಬಿ. ರಸ್ತೆಯು ಬಸ್ ನಿಲ್ದಾಣದಿಂದ ಪ್ರಾರಂಭವಾಗಿ ಕೋಟೆ ವೃತ್ತದ ಮೂಲಕ ಹಾದು ತಾಲ್ಲೂಕು ಕಚೇರಿವರೆಗೆ ಸಾಗುತ್ತದೆ. ಈ ರಸ್ತೆಯಲ್ಲೂ ಹಲವು ದೇವಸ್ಥಾನ, ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿಗಳು ಇವೆ. ಎರಡೂ ಜನನಿಬಿಡ ರಸ್ತೆಗಳಾಗಿವೆ. ಆದರೆ, ಸಮರ್ಪಕ ನಿರ್ವಹಣೆ ಇರುವ ಸಾರ್ವಜನಿಕ ಶೌಚಾಲಯಗಳು ಇರದ ಕಾರಣ ಜನರು ಪರದಾಡುವ ಪರಿಸ್ಥಿತಿಯಿದೆ.

ಮಧುಮೇಹದಿಂದ ಬಳಲುವ ಹಿರಿಯರಂತೂ ತುಂಬಾ ಕಷ್ಟಪಡುತ್ತಾರೆ. ಪುರುಷರು ಹಳೆ ಕಟ್ಟಡ, ಚರಂಡಿ, ರೈಲ್ವೆ ನಿಲ್ದಾಣದ ಹೊರಗೆ ಬೆಳೆದಿರುವ ಗಿಡಮರಗಳ ಬಳಿ ಹೋಗಿ ಮೂತ್ರವಿಸರ್ಜಿಸುತ್ತಾರೆ. ಆದರೆ, ಮಹಿಳೆಯರ ಕಷ್ಟ ಹೇಳತೀರದ್ದಾಗಿದೆ. ಖಾಸಗಿಯವರು ನಿರ್ವಹಣೆ ಮಾಡುತ್ತಿರುವ ಸಾರ್ವಜನಿಕ ಶೌಚಾಲಯಗಳಲ್ಲೂ ಶುಚಿತ್ವ ಅಷ್ಟಕಷ್ಟೇ.ತಾಲ್ಲೂಕು ಕಚೇರಿ, ಪಂಚಾಯಿತಿ, ಪೊಲೀಸ್ ಠಾಣೆ, ಪುರಸಭೆ, ಬಿಇಒ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿಗಳಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 274 ಗ್ರಾಮಗಳು, 28 ಗ್ರಾಮ ಪಂಚಾಯಿತಿ ಮತ್ತು ನಾಲ್ಕು ಹೋಬಳಿಗಳಿವೆ.ಹಲವು ಕೆಲಸ ಕಾರ್ಯಗಳಿಗಾಗಿಗ್ರಾಮೀಣ ಭಾಗದ ಜನರು ನಗರಕ್ಕೆ ಬಂದೇ ಬರುತ್ತಾರೆ. ದೂರದಿಂದ ಬರುವವರಿಗೆ ಅದರಲ್ಲೂ ಮಹಿಳೆಯರು, ಹೆಣ್ಣು ಮಕ್ಕಳು, ವೃದ್ಧರು ಸಾರ್ವಜನಿಕ ಶೌಚಾಲಯ ಇಲ್ಲದೆ ತುಂಬಾ ಕಷ್ಟಪಡುವಂತಾಗಿದೆ. ಈ ಬಗ್ಗೆ ಕನಿಷ್ಠ ಗಮನವೂ ಹರಿಸದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಗೆ ಜನರು ಹಿಡಿಶಾಪ ಹಾಕುವ ಹಾಕುವಂತಾಗಿದೆ.

ಸ್ಥಳ ನೀಡಲು ಕೋರಿಕೆ

ನಗರದಲ್ಲಿರುವ ಎರಡು ಶೌಚಾಲಯಗಳನ್ನು ಖಾಸಗಿಯವರಿಗೆ ನಿರ್ವಹಣೆಗೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.

15ನೇ ಹಣಕಾಸಿನ ಯೊಜನೆ ಉಳಿಕೆ ಹಣದಲ್ಲಿ ಶೌಚಾಲಯ ದುರಸ್ತಿಪಡಿಸಲು ಸಿದ್ಧಪಡಿಸಲಾದ ಅಂದಾಜು ವೆಚ್ಚದ ಪ್ರಸ್ತಾವ ಕಳುಹಿಸಲಾಗಿದೆ. ಅಶೋಕ ರಸ್ತೆಯಲ್ಲಿ ವ್ಯಾಪಾರಸ್ಥರು ಹಾಗೂ ಜನರು ಸಾರ್ವಜನಿಕ ಶೌಚಾಲಯಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಹಳೇ ಎಸ್.ಬಿ.ಐ ಬ್ಯಾಂಕ್ ಕಟ್ಟಡದ ಮುಂದೆ ಸ್ಥಳ ನೀಡಲು ಕೋರಲಾಗಿದ್ದು, ಸ್ಥಳ ನೀಡಿದ ತಕ್ಷಣವೇ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತದೆ ಎಂದರು.

ಕೈತಪ್ಪಿದ ಇನ್ಫೊಸಿಸ್ ನೆರವು

ಟ್ರಸ್ಟ್ ಕಾರ್ಯಕ್ರಮಕ್ಕೆ 2014ರಲ್ಲಿ ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯನ್ನು ಆಹ್ವಾನಿಸಲಾಗಿತ್ತು. ಆಗ ಶಿಡ್ಲಘಟ್ಟ ನಗರದಲ್ಲಿ ನಾಲ್ಕು ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಲಾಗುವುದು ಹಾಗೂ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಶೌಚಾಲಯಗಳನ್ನು ಇನ್ಫೊಸಿಸ್ ಫೌಂಡೇಶನ್‌ವತಿಯಿಂದ ನಿರ್ಮಿಸಿ ಕೊಡಲಾಗುವುದು.

ಇದಕ್ಕೆ ನಗರಸಭೆಯಿಂದ ಸ್ಥಳ ಗುರುತಿಸಿ ಪತ್ರ ಕೊಡಿಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಎಷ್ಟು ಸರ್ಕಾರಿ ಶಾಲೆಗಳಿಗೆ ಶೌಚಾಲಯ ಬೇಕಿದೆ ಎಂದು ಪತ್ರ ಕೊಡಿಸಿ ಎಂದು ಕೇಳಿದ್ದರು. ಆದರೆ, ನಗರಸಭೆಯವರು ಸ್ಥಳ ಗುರುತಿಸಲೇ ಇಲ್ಲ ಮತ್ತು ಪತ್ರವನ್ನೂ ಕೊಡಲಿಲ್ಲ. ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಶೌಚಾಲಯ ನಿರ್ಮಿಸಿಕೊಟ್ಟರೆ ನೀರಿಗೇನು ಮಾಡುವುದು ಎಂದು ನನ್ನನ್ನೇ ಪ್ರಶ್ನಿಸಿದ್ದರು. ಐದಾರು ತಿಂಗಳು ನಿರಂತರ ಪ್ರಯತ್ನ ಮಾಡಿ ಕೊನೆಗೆ ಸುಮ್ಮನಾದೆ.

ಬಿ.ಆರ್.ಅನಂತಕೃಷ್ಣ,ಅಧ್ಯಕ್ಷ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT