ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷಗಳಲ್ಲಿ ಬೋವಿ ಸಮುದಾಯದ ಬೇಡಿಕೆಗಳ ಈಡೇರಿಕೆ: ಬಿ.ಎಸ್‌ ಯಡಿಯೂರಪ್ಪ

ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಭೋವಿ ಸಮುದಾಯದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ
Last Updated 3 ನವೆಂಬರ್ 2019, 14:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಭೋವಿ ಸಮುದಾಯದ ಬೇಡಿಕೆಗಳನ್ನು ಕಾರ್ಯರೂಪಕ್ಕೆ ತರಲು ನನ್ನ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡು ವರ್ಷಗಳಲ್ಲಿ ಆ ಸಮಾಜದ ಒಬ್ಬೇ ಒಬ್ಬ ವ್ಯಕ್ತಿ ಕೂಡ ಇರುವುದಕ್ಕೆ ಮನೆ, ದುಡಿಯಲು ಕೆಲಸವಿಲ್ಲ ಎನ್ನುವಂತಹ ಸ್ಥಿತಿಯಲ್ಲಿ ಇರದಂತೆ ನೋಡಿಕೊಳ್ಳುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಭೋವಿ ಸಮುದಾಯದ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಿಂದೆ ಮತ್ತು ಇವತ್ತು ನಾವೇನಾದರೂ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಭೋವಿ ಸಮಾಜದವರ ಕೊಡುಗೆ ಸಾಕಷ್ಟಿದೆ. ಮೊದಲಿನಿಂದಲೂ ಈ ಸಮಾಜ ನಮ್ಮೊಂದಿಗೆ ಗಟ್ಟಿಯಾಗಿ ನಿಂತಿರುವುದರಿಂದ ನಾನು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿರುವೆ’ ಎಂದು ತಿಳಿಸಿದರು.

‘ಭೋವಿ ಸಮಾಜದವರೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ನಿಮ್ಮಲ್ಲೂ ವಿದ್ಯಾವಂತರು, ಬುದ್ಧಿವಂತರು ಸಾಕಷ್ಟಿದ್ದಾರೆ. ಅವರಿಗೆ ಸೂಕ್ತ ಅವಕಾಶಗಳು ಸಿಗುತ್ತಿಲ್ಲ ಎಂಬ ನೋವಿದೆ. ಆ ಕೊರತೆಯನ್ನು ನೀಗುವ ಪ್ರಯತ್ನ ಮಾಡುತ್ತೇವೆ’ ಎಂದರು.

‘ಹಿಂದುಳಿದ ಈ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ಆಗಬೇಕು ಎಂದು ಶ್ರಮ ಹಾಕಿ, ಶೇ 60 ರಷ್ಟು ಕೇಂದ್ರ, ಶೇ 40 ರಷ್ಟು ರಾಜ್ಯ ಸರ್ಕಾರದ ಅನುದಾನದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಉದ್ದೇಶಿಸಿದ್ದೇವೆ. ಅದಕ್ಕೆ ನವೆಂಬರ್ 8 ರಂದು ಅಡಿಗಲ್ಲು ಹಾಕಿ, ಆದಷ್ಟು ಬೇಗ ಪೂರ್ಣ ಮಾಡುತ್ತೇವೆ. ನೂತನ ಮಂಚೇನಹಳ್ಳಿ ತಾಲ್ಲೂಕಿಗೆ ಕೆಲ ಹಳ್ಳಿಗಳನ್ನು ಸೇರಿಸಿರುವುದಕ್ಕೆ ಕೆಲವರಿಗೆ ಬೇಸರವಿದೆ. ಅದನ್ನೂ ಸರಿಪಡಿಸೋಣ’ ಎಂದು ತಿಳಿಸಿದರು.

‘ಈ ಕ್ಷೇತ್ರದಲ್ಲಿ ನ.8 ರಂದು ಆರೇಳು ಸಾವಿರ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಅದರಲ್ಲಿ ಭೋವಿ ಸಮುದಾಯ, ಪರಿಶಿಷ್ಟ ವರ್ಗಗಳು, ಹಿಂದುಳಿದವರಿಗೆ ಹೆಚ್ಚು ಪ್ರಮಾಣದಲ್ಲಿ ನಿವೇಶನ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಯಡಿಯೂರಪ್ಪ ಅವರು ವೇದಿಕೆಯಲ್ಲಿದ್ದ ಅನರ್ಹ ಶಾಸಕ ಸುಧಾಕರ್ ಅವರನ್ನು ಕುರಿತು ಹೇಳಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ರಾಜ್ಯದಲ್ಲಿರುವ ಕ್ವಾರಿ, ಬಂಡೆಗಳನ್ನು ಹರಾಜಿನ ಮೂಲಕ ಬೇರೆಯವರ ಪಾಲಾಗುತ್ತಿವೆ. ಇದರಿಂದಾಗಿ ಕಲ್ಲು ಒಡೆಯುವುದೇ ಕುಲ ಕಸುಬು ಮಾಡಿಕೊಂಡಿರುವ ನಮ್ಮ ಜನರು ಎಲ್ಲಿಯೂ ನೆಲೆ ಇಲ್ಲದ ಸ್ಥಿತಿ ಬಂದಿದ್ದಾರೆ. ಇಂದಿಗೂ ಬಹಳಷ್ಟು ಬಡವರಿಗೆ ಕಲ್ಲು ಒಡೆಯುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಆದ್ದರಿಂದ ಭೋವಿ ಸಮುದಾಯದವರಿಗೆ ಕಲ್ಲು ಕ್ವಾರಿಗಳನ್ನು ಮಂಜೂರು ಮಾಡುವ ಕೆಲಸಗಳಾಗಬೇಕು’ ಎಂದು ಮನವಿ ಮಾಡಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರು ಭೋವಿ ಜನಾಂಗವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ, ಇವತ್ತು ಸದಾಶಿವ ಆಯೋಗ 101 ಜನಾಂಗಗಳಿರುವ ಸಮುದಾಯವನ್ನು ಪ್ರತ್ಯೇಕಿಸಿದೆ. ಕೇವಲ ಎರಡೇ ಸಮಾಜದವರಿಗೆ ಶೇ 12ರಷ್ಟು ಮೀಸಲಾತಿ, 107 ಜಾತಿಗಳಿಗೆ ಶೇ 3ರಷ್ಟು ಮೀಸಲಾತಿಗೆ ಸೇರಿಸಿರುವುದು ಬಹಳ ಅನ್ಯಾಯ. ನಮಗೆ ಬಳುವಳಿಯಾಗಿ ಬಂದ ಮೀಸಲಾತಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಯಡಿಯೂರಪ್ಪ ಅವರು 100 ದಿನ ಆಡಳಿತ ಪೂರೈಸಿ ಜಿಲ್ಲೆಗೆ ಬರಿಗೈಯಲ್ಲಿ ಬಂದಿಲ್ಲ. ನಮಗೆ ವೈದ್ಯಕೀಯ ಕಾಲೇಜು, ಮಂಚೇನಹಳ್ಳಿ ತಾಲ್ಲೂಕು ಘೋಷಣೆ, ವಸತಿ ರಹಿತರಿಗೆ ಭೂಮಿಯಂತಹ ಮೂರು ಕೊಡುಗೆ ನೀಡಿದ್ದಾರೆ. ಇವತ್ತು ಯಡಿಯೂರಪ್ಪ ಅವರು ರಾಜಕೀಯ ವಿಕೋಪದಷ್ಟೇ ರಾಜಕೀಯ ವಿಕೋಪ ಎದುರಿಸುತ್ತಿದ್ದಾರೆ. ಅವರಿಗೆ ನಾವೆಲ್ಲ ಶಕ್ತಿ ತುಂಬಬೇಕಿದೆ’ ಎಂದು ತಿಳಿಸಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಪ್ರತಿ ತಾಲ್ಲೂಕಿನಲ್ಲಿ ಭೋವಿ ಸಮುದಾಯದವರಿಗೆ ಕಲ್ಲು ಒಡೆಯಲು ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ ಕನಿಷ್ಠ ₹500 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ಬೆಳ್ಳಿ ಗದೆ ನೀಡಿ, ಬೃಹತ್ ಹಾರ ಹಾಕಿ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಗೂಳಿಹಟ್ಟಿ ಶೇಖರ್, ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ತಿನ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ, ಎಂ.ವಿ.ನಾಗರಾಜ್, ಎಂ.ನಾರಾಯಣಸ್ವಾಮಿ, ಕೆ.ವೆಂಕಟಸ್ವಾಮಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಹಿರಿಯ ವಕೀಲ ಶಂಕ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಸೇರಿದಂತೆ ಭೋವಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT