ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಬೇಸಿಗೆ ಉಷ್ಣ ತಣಿಸುವ ಸೊಗದೆ ಬೇರು

ಬಡ, ಮಧ್ಯಮ ವರ್ಗದವರ ನೆಚ್ಚಿನ ಪಾನೀಯ
Published 7 ಮೇ 2024, 6:15 IST
Last Updated 7 ಮೇ 2024, 6:15 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಬೇಸಿಗೆ ಬಂತೆಂದರೆ ಎಲ್ಲೆಡೆ ಒಂದೊಂದು ಬಗೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಶಿಡ್ಲಘಟ್ಟದಲ್ಲಿ ಜನರು ನನ್ನಾರಿಗೆ (ಸೊಗದ ಬೇರು) ಮೊರೆ ಹೋಗುತ್ತಾರೆ. ಈ ಬಾರಿ ಬೇಸಿಗೆಯು ದೇಹದ ಉಷ್ಣಾಂಶ ಹೆಚ್ಚಿಸಿರುವುದರಿಂದ ಜನರು ನನ್ನಾರಿ ಸೋಡ, ಮಿಲ್ಕ್ ನನ್ನಾರಿ, ನಿಂಬು ಸೋಡ, ನಿಂಬು ಶರಬತ್‌ಗೆ ಮುಗಿಬೀಳುತ್ತಿದ್ದಾರೆ.

ಪ್ರತಿ ಬೇಸಿಗೆಯಲ್ಲಿ ಎಳನೀರಿನ ಜತೆಗೆ ನಾನಾ ಹಣ್ಣುಗಳಿಂದ ತಯಾರಿಸಿದ ತಂಪು ಪಾನೀಯಗಳಿಗೂ ಬೇಡಿಕೆ ಇದೆ. ಕೆಲವರಂತೂ ಲಸ್ಸಿ, ಮಜ್ಜಿಗೆ, ಕಬ್ಬಿನ ಹಾಲನ್ನೇ ಬಯಸುತ್ತಾರೆ. ನಾನಾ ಹಣ್ಣು, ಹಣ್ಣಿನಿಂದ ತಯಾರಿಸಿದ ತಂಪು ಪಾನೀಯ ಇಷ್ಟಪಡುತ್ತಾರೆ. ಆದರೆ, ಅನೇಕರು ನನ್ನಾರಿ ಕುಡಿಯಲು ಇಚ್ಛಿಸುತ್ತಾರೆ. ಹಾಗಾಗಿ, ಇಲ್ಲಿ ಇತರ ತಂಪು ಪಾನೀಯಗಳ ಜತೆ ನನ್ನಾರಿಗೂ ಅದರದ್ದೇ ಆದ ಗ್ರಾಹಕರಿದ್ದಾರೆ.

ಶಿಡ್ಲಘಟ್ಟದಲ್ಲಿ ಹಲವು ವರ್ಷಗಳಿಂದ ಅಶೋಕ ರಸ್ತೆಯಲ್ಲಿ ಸೋಡಾ ಅಂಗಡಿ ಇಟ್ಟುಕೊಂಡಿರುವ ನವೀನ್ ಅವರು ನನ್ನಾರಿ, ಮಿಲ್ಕ್ ನನ್ನಾರಿ, ಮುಂತಾದ ಹಲವು ನನ್ನಾರಿ ಮಿಶ್ರಿತ ಪೇಯ ಹಾಗೂ ಪೀಚ್, ಮಾವು, ಸೀಬೆ, ಲಾವಂಚ, ಮೊಜಿತೊ, ಜೀರಾ ಮಸಾಲ, ಪುದೀನಾ ಮಸಾಲ ಪೇಯ ಮಾರುತ್ತಾ ನಾನಾ ರೀತಿಯ ಶರಬತ್ ಪ್ರಿಯರಿಗೆ ನೆಚ್ಚಿನ ವ್ಯಕ್ತಿಯಾಗಿದ್ದಾರೆ.

‘ನನ್ನಾರಿ ಮಹತ್ವ ಅರಿತ ಗ್ರಾಹಕ ವರ್ಗವಷ್ಟೇ ಮೊದಲಿನಿಂದಲೂ ಪ್ರತಿ ಬೇಸಿಗೆಯಲ್ಲಿ ನನ್ನಾರಿ ಕುಡಿಯುವ ರೂಢಿ ಇಟ್ಟುಕೊಂಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರ ದಾಹ ತೀರಿಸುವ ತಂಪು ಪಾನೀಯವಾಗಿ ಗುರುತಿಸಿಕೊಂಡಿದೆ. ಚಳಿಗಾಲ, ಮಳೆಗಾಲದಲ್ಲಿ ಇದರ ಮಾರಾಟ ಕಡಿಮೆ. ಆದರೂ, ಉಷ್ಣದ ದೇಹ ಪ್ರಕೃತಿಯುಳ್ಳವರು ಇದರ ಔಷಧ ಗುಣದಿಂದಾಗಿ ಇಷ್ಟಪಟ್ಟು ಕುದಿಯುತ್ತಾರೆ‘ ಎಂದು ಸೋಡಾ ನವೀನ್ ಹೇಳುತ್ತಾರೆ.

‘ನಮ್ಮ ಅಂಗಡಿಯಲ್ಲಿ ರೋಸ್‌ಮಿಲ್ಕ್ ನಿಂಬು ಸೋಡ ಹಾಲು ಲಸ್ಸಿ ಜತೆಯಲ್ಲಿ ಸೋಡ ಮತ್ತು ನನ್ನಾರಿ ಬೆರೆಸಿ ಕಳೆದ ಹತ್ತಾರು ವರ್ಷಗಳಿಂದ ಮಾರಾಟ ಮಾಡುತ್ತಿದ್ದೇನೆ. ಆದರೆ ಪ್ರತಿ ಬೇಸಿಗೆ ಸಂದರ್ಭದಲ್ಲಿ ನನ್ನಾರಿಗೆ ನಮ್ಮಲ್ಲಿ ಹೆಚ್ಚು ಬೇಡಿಕೆ ಇದೆ’.
ಸೋಡ ನವೀನ್ ವ್ಯಾಪಾರಿ ಅಶೋಕ ರಸ್ತೆ
ಕನ್ನಡದಲ್ಲಿ ಸೊಗದೆ ಬೇರು (ನನ್ನಾರಿ)
‘ನನ್ನಾರಿಯನ್ನು ಕನ್ನಡದಲ್ಲಿ ಸೊಗದೆ ಬೇರು ಎಂದು ಕರೆಯುತ್ತಾರೆ.  ನನ್ನಾರಿ ತಯಾರಿಗೆ ಬಳಸುವ ಬೇರು ಮೊದಲು ಬಿಸಿಲಲ್ಲಿ ಹಲವು ದಿನ ಚೆನ್ನಾಗಿ ಒಣಗಿಸಿದ ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಮಿಶ್ರಣ ಮಾಡಿ ಹಲವು ಗಂಟೆ ಕುದಿಸಲಾಗುತ್ತದೆ. ಅಂದಾಜು ಒಂದು ಕೆಜಿ ನನ್ನಾರಿ ಬೇರಿಗೆ 15-20 ಲೀಟರ್‌ನಷ್ಟು ನೀರು ರುಚಿಗೆ ಅನುಗುಣವಾಗಿ ಸಕ್ಕರೆ ಹಾಕಿ 4-6 ಗಂಟೆ ಬೇಯಿಸಬೇಕು. ಪಾನಕ ರೀತಿಯಲ್ಲಿ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ ಮೇಲೆ ಗ್ರಾಹಕರ ಆಕರ್ಷಣೆಗಾಗಿ ಇತರ ಮಿಶ್ರಣ ಮಾಡಿ ಮಾರಾಟಕ್ಕೆ ಇಡಲಾಗುತ್ತದೆ‘. ‘ನನ್ನ ಬಳಿ ಒಂದು ಎರಡು ಲೀಟರ್ ನನ್ನಾರಿ ಖರೀದಿಸುವ ಗ್ರಾಹಕರಿದ್ದಾರೆ. ಗಿಡಮೂಲಿಕೆಯಿಂದ ತಯಾರಾದ ಈ ತಂಪು ಪಾನೀಯದಿಂದ ದೇಹ ತಂಪು ಇರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಇತರ ಜ್ಯೂಸ್‌ಗಳಿಗೆ ಹೋಲಿಸದರೆ ನನ್ನಾರಿ ಹುಡುಕಿಕೊಂಡು ಬಂದು ಕುಡಿದು ಹೋಗುವ ವರ್ಗವೂ ಇದೆ‘ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT