ಗುರುವಾರ , ನವೆಂಬರ್ 21, 2019
26 °C
ಜಿಲ್ಲಾ ಆಸ್ಪತ್ರೆಯಲ್ಲಿ ಕೃತಕ ದಂತ ಪಂಕ್ತಿ ಅಳವಡಿಕೆ ಶಿಬಿರ

ಹಲ್ಲುಗಳ ಬಗ್ಗೆ ಮುತುವರ್ಜಿ ವಹಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಆರೋಗ್ಯದ ದೃಷ್ಟಿಯಲ್ಲಿ ಹಲ್ಲಿಗೆ ಬಹುಮುಖ್ಯ ಪಾತ್ರವಿದೆ. ಆದ್ದರಿಂದ ಪ್ರತಿಯೊಬ್ಬರೂ ಹಲ್ಲಿನ ಸಂರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ‘ದಂತಭಾಗ್ಯ’ ಯೋಜನೆ ಅಡಿಯಲ್ಲಿ ಆಯೋಜಿಸಲಾಗಿದ್ದ ಕೃತಕ ದಂತ ಪಂಕ್ತಿ ಅಳವಡಿಕೆ ಶಿಬಿರದಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಗಳು ರೂಪಿಸಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳಿಗೆ ಜನರ ಸಹಭಾಗಿತ್ವ ಇದ್ದಾಗ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಪ್ರತಿಯೊಂದು ಆಹಾರ ಅಗೆದು ತಿನ್ನಲು ಹಲ್ಲುಗಳು ಬೇಕು. ಆದರೆ ವಯೋ ಸಹಜವಾಗಿ ಅಥವಾ ವಿವಿಧ ಕಾರಣಗಳಿಂದಾಗಿ ಹಲ್ಲು ಕಳೆದುಕೊಂಡವರಿಗೆ ಘನ ಆಹಾರ ಸೇವನೆ ಕಷ್ಟವಾಗುತ್ತದೆ. ಅಂತಹವರು ಕೃತಕ ದಂತ ಪಂಕ್ತಿ ಅಳವಡಿಸಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕಳೆದ ವರ್ಷ ಜಿಲ್ಲೆಯಲ್ಲಿ ಸುಮಾರು 400 ಜನರಿಗೆ ಕೃತಕ ದಂತ ಪಂಕ್ತಿ ಅಳವಡಿಸಲಾಗಿದೆ’ ಎಂದರು.

‘ಜನ ಸಾಮಾನ್ಯರು ಸೇರಿದಂತೆ ವಿಶೇಷವಾಗಿ ಹಿರಿಯನಾಗರಿಕರು, ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ದಂತಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದನ್ನು ಜನರು ಸದುಪಯೋಗಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

ದಂತ ವೈದ್ಯೆ ಡಾ.ಕೆ.ವಿ.ಮಂಜುಳಾ ಮಾತನಾಡಿ, ‘ನಿತ್ಯ ನಿಯಮಿತವಾಗಿ ಎರಡು ಹೊತ್ತು ಹಲ್ಲುಗಳು ಸ್ವಚ್ಛಗೊಳಿಸಬೇಕು. ಹಲ್ಲುಗಳು ಆರೋಗ್ಯವಾಗಿದ್ದಾಗ ಘನ ಪದಾರ್ಥಗಳನ್ನು ಚೆನ್ನಾಗಿ ಅಗೆಯಲು, ಆಮೂಲಕ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯಕವಾಗುತ್ತದೆ. ಭಾಷೆಯ ಉಚ್ಛಾರಣೆಯಲ್ಲಿ ಕೂಡ ಹಲ್ಲುಗಳು ಮಹತ್ವದ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆ.ಮಂಜುಳಾ, ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ.ಕೀರ್ತಿ, ಡಾ.ಸುಪ್ರಿಯಾ, ಡಾ.ಬಿಕ್ಕಲಾ, ಡಾ.ಸೌಮ್ಯ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)