ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ| ಇಬ್ಬರು ಸಿಪಿಎಂ ಸದಸ್ಯರ ಉಚ್ಛಾಟನೆ

ಬಾಗೇಪಲ್ಲಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆ ಆರೋಪ
Last Updated 16 ಜೂನ್ 2020, 8:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಾಗೇಪಲ್ಲಿಯಲ್ಲಿ ಜೂನ್ 9 ರಂದು ನಡೆದ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿಆಮಿಷ, ಅಧಿಕಾರ ದಾಹಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಬಿಜೆಪಿ ಸೇರಿರುವ ಇಬ್ಬರು ಸಿಪಿಎಂ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಯರಾಮರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಪಿಎಂ ಬಾಗೇಪಲ್ಲಿ ತಾಲ್ಲೂಕು ಸಮಿತಿ ಸದಸ್ಯ ಸೋಮಶೇಖರ್‌ ರೆಡ್ಡಿ ಅವರು ಪಕ್ಷದ ಗಮನಕ್ಕೆ ತಾರದೆ ಎಪಿಎಂಸಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ವೈ.ಎ.ಅಶ್ವತ್ಥರೆಡ್ಡಿ ಅವರು ಸೋಮಶೇಖರ್‌ ರೆಡ್ಡಿ ಅವರನ್ನು ಬೆಂಬಲಿಸಿದ್ದರು’ ಎಂದು ತಿಳಿಸಿದರು.

‘ಇವತ್ತು ದೇಶ ಮತ್ತು ರಾಜ್ಯದಲ್ಲಿ ಜನರು ಕೊರೊನಾ ಸೋಂಕಿನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರಗಳು ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ 7 ತಿಂಗಳು ತಲಾ ₹2,500 ಪರಿಹಾರ ಹಣ ನೀಡಬೇಕು. ಜತೆಗೆ, ಪ್ರತಿಯೊಂದು ಕುಟುಂಬಕ್ಕೆ ಉಚಿತವಾಗಿ ಪ್ರತಿ ಒಬ್ಬರಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿ ವಿತರಿಸಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಕಾರಣಕ್ಕೆ ನಗರ, ಪಟ್ಟಣ ತೊರೆದು ಹಳ್ಳಿಗಳಿಗೆ ವಾಪಾಸಾಗಿರುವ ಜನರಿಗೆ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನರೇಗಾ ಆಸರೆಯಾಗಿದೆ. ಆದ್ದರಿಂದ ನರೇಗಾ ಕೂಲಿ ಕೆಲಸವನ್ನು 200 ದಿನಗಳಿಗೆ ವಿಸ್ತರಿಸಬೇಕು. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಸಮರ್ಪಕವಾಗಿ ಪಿಪಿಇ ಕಿಟ್‌ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜನರು ಹೈನುಗಾರಿಕೆ ಮೇಲೆ ಅತಿ ಹೆಚ್ಚು ಅವಲಂಬಿಸಿದ್ದಾರೆ. ಆದರೆ ಇತ್ತೀಚೆಗೆ ಕೋಚಿಮುಲ್ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ₹2 ಕಡಿತ ಮಾಡಿದೆ. ಪಶು ಆಹಾರ ಬೆಲೆ ಗಗನಮುಖಿಯಾಗಿರುತ್ತಿರುವ, ಮತ್ತೊಂದೆಡೆ ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲಿನ ಇಳಿಕೆ ಮಾಡಿರುವುದನ್ನು ಸಿಪಿಎಂ ತೀವ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದರು.

ಸಿಪಿಎಂ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ಮುನಿಕೃಷ್ಣಪ್ಪ ಮಾತನಾಡಿ, ‘ಈಗಾಗಲೇ ಎಪಿಎಂಸಿ ಮತ್ತು ವಿದ್ಯುತ್‌ ಕ್ಷೇತ್ರವನ್ನು ಬಂಡವಾಳಶಾಹಿಗಳ ಕೈಗೆ ಒಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ಬೀದಿಗೆ ತಳ್ಳಲು ಹೊರಟಿದೆ’ ಎಂದು ತಿಳಿಸಿದರು.

‘ಭೂ ಸುಧಾರಣೆ ಕಾಯ್ದೆ 1978ರ 79 ಹಾಗೂ 80ನೇ ಪರಿಚ್ಛೇದಗಳನ್ನು ರದ್ದುಪಡಿಸಿರುವುದಲ್ಲದೇ 63ನೇ ಪರಿಚ್ಛೇದಕ್ಕೂ ತಿದ್ದುಪಡಿ ಮಾಡಿರುವುದರಿಂದ ಅತಿ ಸುಲಭವಾಗಿ ಕೈಗಾರಿಕೋದ್ಯಮಿಗಳು ಭೂಮಿ ಖರೀದಿಸಲು ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಹಣ ಬಲ ಹೊಂದಿದ ದೊಡ್ಡ ಉದ್ಯಮಿಗಳ ಲಾಬಿ ಇದೆ’ ಎಂದು ಆರೋಪಿಸಿದರು.

‘ಕೃಷಿ ಅವಲಂಬಿತರ ಜಮೀನು ಖರೀದಿಗೆ ಯಾವುದೇ ನಿರ್ಬಂಧವಿಲ್ಲದೆ ಅವಕಾಶ ನೀಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಉಳ್ಳವನಿಗೆ ಜಮೀನು ಎನ್ನುವ ಬಿಜೆಪಿ ಧೋರಣೆ ಖಂಡನಾರ್ಹ. ಇದರಿಂದ ಸಹಕಾರಿ ರಂಗಕ್ಕೂ ದೊಡ್ಡ ಪೆಟ್ಟು ಬೀಳಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT