ಗುರುವಾರ , ಮಾರ್ಚ್ 23, 2023
30 °C
ವೈದ್ಯಕೀಯ ಶಿಕ್ಷಣ ಕಾಲೇಜಿನ ಶೇ 45ರಷ್ಟು ಕಾಮಗಾರಿ ಪೂರ್ಣ: ಡಿ.ಸಿ

ಮುಂದಿನ ಶೈಕ್ಷಣಿಕ ವರ್ಷ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯ ಕನಸಿನ ಯೋಜನೆಯಾದ ವೈದ್ಯಕೀಯ ಶಿಕ್ಷಣ ಕಾಲೇಜಿನ ಕಾಮಗಾರಿ ಭರದಿಂದ ನಡೆಯುತ್ತಿದೆ. ಭೌತಿಕವಾಗಿ ಶೇ 45ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉದ್ಘಾಟನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಲೇಜಿನ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ  ಮಾತನಾಡಿದರು.

ಸಚಿವ ಡಾ.ಕೆ.ಸುಧಾಕರ್ ಅವರ ನಿರ್ದೇಶನದಂತೆ ಕಾಮಗಾರಿ ಸಾಗುತ್ತಿದೆ. ಇಲ್ಲಿಯವರೆಗೆ ₹ 200 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ₹ 134 ಕೋಟಿ ಈಗಾಗಲೇ ಬಿಡುಗಡೆ ಆಗಿದೆ. ಉಳಿಕೆ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿದೆ ಎಂದರು.

ಕಾಮಗಾರಿ ಪ್ರಕ್ರಿಯೆಗೆ ಇನ್ನಷ್ಟು ವೇಗ ನೀಡಿ ನಿಗದಿತ ಅವಧಿಗಿಂತ ಮುಂಚೆಯೇ ಪೂರ್ಣಗೊಳಿಸಬೇಕು. ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದರೆ ಕೂಡಲೇ ತಿಳಿಸಬೇಕು ಎಂದು ಕಾಲೇಜು ನಿರ್ಮಾಣ ಯೋಜನೆಯ ವ್ಯವಸ್ಥಾಪಕರಿಗೆ ಸೂಚಿಸಿದರು.

ಕಾಲೇಜಿನ ಆವರಣದ ಅಂಚಿನ ಅಕ್ಕಪಕ್ಕದ ಖಾಲಿ ಜಾಗ ಗುರುತಿಸಿ 1000ಕ್ಕೂ ಹೆಚ್ಚು ಗಿಡಗಳನ್ನು ಒಂದೆರಡು ದಿನಗಳಲ್ಲಿ ನೆಡಬೇಕು. ಉದ್ಘಾಟನೆ ವೇಳೆಗೆ ಸುಂದರ ಹಸಿರು ವನ ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿಗೆ ನಿರ್ದೇಶನ ನೀಡಿದರು.

ವೈದ್ಯಕೀಯ ಶಿಕ್ಷಣ ಕಾಲೇಜು ಕಾರ್ಯಾರಂಭವಾದ ಮೇಲೆ ನೀರಿನ ಸಮಸ್ಯೆ ತಲೆದೋರಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜಿನ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಿಂದ ನೀರು ಶೇಖರಣೆ ಆಗಲಿರುವ ಸ್ಥಳಗಳನ್ನು ಗುರುತಿಸಬೇಕು. ಚೆಕ್ ಡ್ಯಾಂಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಸಾಮಾಜಿಕ ಅರಣ್ಯ ಅಧಿಕಾರಿ ಶ್ರೀನಾಥ್, ವೈದ್ಯಕೀಯ ಶಿಕ್ಷಣ ಕಾಲೇಜು ಕಾಮಗಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ಯೋಜನಾ ವ್ಯವಸ್ಥಾಪಕ ದೀಪಕ್, ಆನಂದ್ ಬಾಳಗಿ, ಜೆ.ಇ ರಾಮಚಂದ್ರಪ್ಪ, ಪಿ.ಎಂ.ಸಿ ಶ್ರೀಕಾಂತ್, ಗೌರೀಶ್ ಹಾಗೂ ಆಡಳಿತ ಅಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.