ಗುರುವಾರ , ಏಪ್ರಿಲ್ 15, 2021
30 °C

ಮುರುಕಲು ಮನೆಯಲ್ಲಿ ನಗರಸಭೆ ಉಪಾಧ್ಯಕ್ಷೆ: ಭಾಗ್ಯಮ್ಮನ ಬದುಕಿಗೆ ಇಲ್ಲ ಭದ್ರತೆ

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಒಂದು ಬಾರಿ ಗ್ರಾ.ಪಂ ಅವಧಿ ಪೂರೈಸುವಷ್ಟರಲ್ಲಿ ಸದಸ್ಯರು ಸರ್ಕಾರ ಹಾಗೂ ಸ್ಥಳೀಯ‌ಮಟ್ಟದ ಅನುದಾನ ಬಳಕೆ ಮಾಡಿಕೊಂಡು ಅರ್ಹತೆಗೆ ಅನುಗುಣವಾಗಿ ಒಂದಷ್ಟು ಆಸ್ತಿ ಮತ್ತು ಹಣ ಮಾಡುವುದು ಉಂಟು. ಇಂತಹವರ ಮಧ್ಯೆ ನಗರಸಭೆ ಉಪಾಧ್ಯಕ್ಷೆಯಾದರೂ ಇರಲು ಸ್ವಂತ ಸೂರಿಲ್ಲದೆ ಮುರಕಲು ಮನೆಯಲ್ಲೆ ಬದುಕು ಕಟ್ಟಿಕೊಂಡು ದಿನಗೂಲಿ ಜೀವನ ನಡೆಸುತ್ತಿದ್ದಾರೆ ಭಾಗ್ಯಮ್ಮ.

ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮ ಅವರ ಸರಳ ಜೀವನ ರಾಜಕಾರಣಿಗಳಿಗೆ ಮಾದರಿಯಾಗಿದೆ. ನಗರಕ್ಕೆ ಸಮೀಪವಿರುವ ಹಿರೇಬಿದನೂರು ಗ್ರಾಮದಲ್ಲಿ ಪತಿಯೊಂದಿಗೆ ದಿನಗೂಲಿ ಮಾಡಿಕೊಂಡು ಒಪ್ಪೊತ್ತಿನ ಊಟ, ಮೂವರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. 6 ವರ್ಷಗಳ ಹಿಂದೆ ಗ್ರಾ.ಪಂ ಚುನಾವಣೆ ವೇಳೆ ಪರಿಶಿಷ್ಟ ಜಾತಿ‌ ಮಹಿಳೆಗೆ ಮೀಸಲಾಗಿದ್ದ ಸ್ಥಾನಕ್ಕೆ ಸ್ಥಳೀಯ ನಾಯಕರು ಭಾಗ್ಯಮ್ಮ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದರು. ಚುನಾವಣೆಯಲ್ಲಿ ಗೆದ್ದು ಅವರು ಗ್ರಾ.ಪಂ ಸದಸ್ಯರಾದರು.

ಇದರ ಮಧ್ಯೆ ಹಿರೇಬಿದನೂರು ಗ್ರಾಮ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಯಿತು. ಈ ಸಂದರ್ಭದಲ್ಲಿ ಕೆಲ ನಾಯಕರ ಒತ್ತಡದಿಂದ ಮೀಸಲಾತಿಗೆ ಅನುಗುಣವಾಗಿ ಮತ್ತೆ ಭಾಗ್ಯಮ್ಮ ಅವರನ್ನು ನಗರಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದ್ದರು. ತೀವ್ರ ಪೈಪೋಟಿ ನಡುವೆ ನಗರಸಭೆ ಚುನಾವಣೆಯಲ್ಲೂ ಜಯಗಳಿಸಿದರು.

ಬಳಿಕ ಎಂದಿನಂತೆ ತಮ್ಮ ದಿನಗೂಲಿ ಕೆಲಸ ಮಾಡಿಕೊಂಡು ತುತ್ತಿನಚೀಲ ತುಂಬಿಸಿಕೊಳ್ಳುವ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದರು. ಒಂದು ವರ್ಷದ ಬಳಿಕ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಬಿಡುಗಡೆಯಾಗಿ ಉಪಾಧ್ಯಕ್ಷೆ ಸ್ಥಾನಕ್ಕೆ ಈಕೆಗೆ ಅವಕಾಶ ಕೂಡಿಬಂತು. ಇವರ ಒಂದು ಮತವೇ ನಿರ್ಣಾಯಕವಾಗಿದ್ದ ಸಮಯದಲ್ಲಿ ಪಕ್ಷದ ನಾಯಕರು ಇವರ ಬೆಂಬಲ ಪಡೆದು ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿದರು.

ಆದರೆ, ಇವರ ಜೀವನ‌ಶೈಲಿ‌ ಇಂದಿಗೂ ಬದಲಾಗಿಲ್ಲ. ಬಿರುಕು ಬಿಟ್ಟ ಗೋಡೆಗಳು, ಹೊಡೆದ ಸಿಮೆಂಟ್‌‌ ಶೀಟ್‌ಗಳ‌ ಮೇಲ್ಚಾವಣಿ, ಕಟ್ಟಿಗೆ ಒಲೆ ಸೇರಿದಂತೆ 10 ಅಡಿ ಅಳತೆಯ ಒಂದೇ ಒಂದು ಕೊಠಡಿಯಲ್ಲಿ ಮೂವರು ಮಕ್ಕಳೊಂದಿಗೆ ‌ದಿನದೂಡುತ್ತಿದ್ದಾರೆ.

ಪತಿ ನರಸಿಂಹಮೂರ್ತಿ ‌ತನ್ನ ಹೆಂಡತಿ ‌ನಗರಸಭೆ ಉಪಾಧ್ಯಕ್ಷೆಯಾದರೂ ಕಚೇರಿ ಸಮೀಪದಲ್ಲೇ ಬಾಳೆಹಣ್ಣು ಮಾರುತ್ತಾ ತನ್ನ ಸ್ವಾಭಿಮಾನದ ಜೀವನಕ್ಕೆ ಆಸರೆ ಪಡೆದಿದ್ದಾರೆ. ಅರ್ಚನಾ, ಅಕ್ಷಯ್ ಕುಮಾರ್ ಮತ್ತು ಅಖಿಲ್ ಎಂಬ ಮಕ್ಕಳೊಂದಿಗೆ ಇದೇ ಮುರಕಲು ಮನೆಯಲ್ಲೇ ಬದುಕು ಸಾಗಿಸುತ್ತಿದ್ದಾರೆ.

ಎರಡು ಬಾರಿ ಜನಪ್ರತಿನಿಧಿಯಾಗಿದ್ದರೂ ಅಧಿಕಾರಿಗಳು ಮತ್ತು ನಾಯಕರ ಭರವಸೆಯನ್ನೇ ನೆಚ್ಚಿಕೊಂಡು ತಮಗಾಗಿ ಸ್ವಂತ ಸೂರು ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

‘ದಶಕಗಳಿಂದಲೂ ಕಿತ್ತು ತಿನ್ನುವ ಬಡತನವಿದ್ದರೂ ಸ್ವಾಭಿಮಾನದಿಂದ ಬದುಕುವ ಛಲದಿಂದ ದಿನಗೂಲಿ ಮಾಡಿಕೊಂಡಿದ್ದೆವು. ಕೆಲ ನಾಯಕರು ಒತ್ತಡದಿಂದ ಒಲ್ಲದ ಮನಸ್ಸಿನಿಂದ ರಾಜಕಾರಣಕ್ಕೆ ಪ್ರವೇಶಿಸಿದೆ. ಒಂದು‌ ಬಾರಿ ಗ್ರಾ.ಪಂ ಸದಸ್ಯೆಯಾಗಿ, ಇದೀಗ ನಗರಸಭೆ ಉಪಾಧ್ಯಕ್ಷೆಯಾಗಿದ್ದೇನೆ. ಆದರೆ, ನನ್ನ ಕುಟುಂಬದ ಪರಿಸ್ಥಿತಿಯೊಂದಿಗೆ ಕನಿಷ್ಠ ಮಟ್ಟದ ಸ್ವಂತ ಮನೆಯ ಆಸರೆಯಿಲ್ಲದೆ ಬದುಕುತ್ತಿದ್ದೇವೆ’ ಎಂದು ತಿಳಿಸಿದರು.

‘ಅತಂತ್ರ ಸ್ಥಿತಿಯಲ್ಲಿರುವ ಮನೆಯಲ್ಲಿ‌ ಪತಿ ಮತ್ತು ಮಕ್ಕಳ ಪೋಷಣೆ ನಿಜಕ್ಕೂ ನರಕವನ್ನು ಕಾಣುವಂತಿದೆ. ಆದರೂ, ಸ್ವಾಭಿಮಾನದಿಂದ ಬದುಕುವ ಪರಿಸ್ಥಿತಿಯಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ನಮ್ಮ ಮನೆಗೆ ಭೇಟಿ ‌ನೀಡಿ ಕನಿಷ್ಠ ಮಟ್ಟದ ಮನೆಯ‌ ಆಸರೆಯನ್ನು ಒದಗಿಸಿಕೊಡಬೇಕಾಗಿದೆ’ ಎಂದು ಭಾಗ್ಯಮ್ಮ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.