ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಒತ್ತುವರಿಗೆ ನಲುಗಿವೆ ಕೆರೆ, ಕುಂಟೆ

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ 33 ಅಡಿ ರಾಜಕಾಲುವೆ 3 ಅಡಿಗೆ!
Last Updated 14 ಜೂನ್ 2021, 3:46 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಕೆರೆ, ಕುಂಟೆಗಳು, ರಾಜಕಾಲುವೆಗಳು ಒತ್ತುವರಿಗೆ ಸಿಲುಕಿ ನಲುಗಿವೆ. ನಿರ್ವಹಣೆ ಕೊರತೆಯಿಂದ ಅಧ್ವಾನಗೊಂಡಿವೆ.

ರಾಜರು, ಪೂರ್ವಿಕರು ಹಾಗೂ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕೆರೆ, ಕುಂಟೆಗಳು, ರಾಜಕಾಲುವೆಗಳು ಒತ್ತುವರಿ ಆಗಿವೆ. ಕಲ್ಯಾಣಿಗಳು, ಚೆಕ್ ಡ್ಯಾಂಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಚಿತ್ರಾವತಿ, ವಂಡಮಾನ್ ನದಿಪಾತ್ರ, ಕಣಜಗಳು ಸೇರಿದಂತೆ ಜಲಮೂಲಗಳನ್ನು ರಕ್ಷಿಸಬೇಕಾದ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕವಾಗಿದೆ.

ಪಟ್ಟಣದ ಹೊರವಲಯದ ಚಿತ್ರಾವತಿ ಒಡ್ಡು ತುಂಬಿ ಹರಿಯುವ ನೀರು ವ್ಯರ್ಥ ಆಗದಂತೆ ರಾಜ ಕಾಲುವೆಯನ್ನು ಬ್ರಿಟಿಷರು ನಿರ್ಮಿಸಿದ್ದಾರೆ. ಸಂತೆ ಮೈದಾನದ ಮೂಲಕ ಕೊರ್ಲಕುಂಟೆಗೆ ನೀರು ಹರಿಯಲು ಕಾಲುವೆ ಮಾಡಿದ್ದಾರೆ. ಅಂದು 33 ಅಡಿಯಷ್ಟಿದ್ದ ರಾಜಕಾಲುವೆ ಇಂದು 3 ಅಡಿಗೆ ಇಳಿದಿದೆ!

ಅಂದು ರಾಜಕಾಲುವೆ ಎನಿಸಿತ್ತು. ಇಂದು ಚರಂಡಿ ಆಗಿದೆ. ಕಾಲುವೆಯ ಸ್ವಚ್ಛತೆಗೆ ಪುರಸಭೆಯಿಂದ ಕೋಟ್ಯಂತರ ಹಣ ವ್ಯಯ ಮಾಡಲಾಗಿದೆ. ಆದರೆ ಸ್ವಚ್ಛತೆ ಮಾತ್ರ ಮರೀಚಿಕೆ ಆಗಿದೆ. ಮನೆಗಳಲ್ಲಿನ ತ್ಯಾಜ್ಯ, ಕೊಳಚೆ ನೀರನ್ನು ರಾಜಕಾಲುವೆಗೆ ಹರಿಸಲಾಗುತ್ತಿದೆ. ಹರಿಯುವ ನೀರು ಸಂಗ್ರಹಕ್ಕೆ ಬ್ರಿಟಿಷರು ಚಿತ್ರಾವತಿ ಕಣಜವನ್ನು ನಿರ್ಮಿಸಿದ್ದರು. ಅಲ್ಲದೆ ಸಣ್ಣ ಸಣ್ಣ ಕಾಲುವೆಗಳನ್ನು ಸಹ ನಿರ್ಮಿಸಿದ್ದಾರೆ. ಆದರೆ ಕಣಜ ಹಾಗೂ ಕಾಲುವೆಗಳಲ್ಲಿ ಈಗ ಕಳೆ ಗಿಡಗಳು ಬೆಳೆದಿವೆ.

ಪಟ್ಟಣದ ಪಕ್ಕದಲ್ಲಿ ಹಾದುಹೋಗುವ ಚಿತ್ರಾವತಿ ನದಿ ಪಾತ್ರದ ಎಡ, ಬಲ ದಂಡೆಗಳಲ್ಲಿನ ಜಾಗವನ್ನು ಪ್ರಭಾವಿಗಳು, ರಿಯಲ್ ಎಸ್ಟೇಟ್‌ನವರು ಒತ್ತುವರಿ ಮಾಡಿದ್ದಾರೆ. ಇದೀಗ ಕೊರ್ಲಕುಂಟೆ ಕೆರೆ, ಬಾಜಿರಾಯನ ಕೆರೆ, ಗೂಳೂರು ರಸ್ತೆಯ ರೆಡ್ಡಿ ಕೆರೆ, ಪ್ರವಾಸಿ ಮಂದಿರದ ಮುಂದಿನ ಬಾಂಗ್ಲಾಕುಂಟೆ, ರಾಳ್ಳಕುಂಟೆ ಸೇರಿದಂತೆ ಬಹುತೇಕ ಕೆರೆಗಳು ಒತ್ತುವರಿ ಆಗಿವೆ. ಕೆರೆಗಳಲ್ಲಿ ಊರಿನವರು ಕಸಕಡ್ಡಿ ಸುರಿಯುತ್ತಿದ್ದಾರೆ.

ಅಂದಿನ ದಿನಗಳಲ್ಲಿ ಕೆರೆ, ಕುಂಟೆ, ಕಾಲುವೆಗಳಲ್ಲಿನ ಹೂಳು ತೆಗೆಸಿ ರೈತರು ತಮ್ಮ ಹೊಲ-ಗದ್ದೆಗಳಿಗೆ ಹಾಕಿಕೊಳ್ಳುತ್ತಿದ್ದರು. ಈ ಹೂಳು ತೆಗೆದರೆ ನೀರು ಸಹ ಸರಾಗವಾಗಿ ಹರಿಯುತ್ತಿತ್ತು. ಜಮೀನುಗಳಿಗೆ ಫಲವತ್ತಾದ ಮಣ್ಣು ಸಹ ದೊರೆಯುತ್ತಿತ್ತು.

ಗುಮ್ಮನಾಯಕನ ಪಾಳ್ಯದ ಪಾಳೇಗಾರರ ಆಡಳಿತದಲ್ಲಿ ತಾಲ್ಲೂಕಿನ ಅರ್ಧದಷ್ಟು ಕೆರೆ, ಕುಂಟೆ, ಕಾಲುವೆಗಳು ನಿರ್ಮಾಣವಾಗಿವೆ. ಗುಮ್ಮನಾಯಕನಪಾಳ್ಯ, ಆಚೇಪಲ್ಲಿ, ಮಿಟ್ಟೇಮರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಲ್ಯಾಣಿಗಳನ್ನು ನಿರ್ಮಿಸಿದ್ದಾರೆ. ಆದರೆ ಇಂದು ಕೆರೆ-ಕುಂಟೆ, ಕಾಲುವೆ, ಕಲ್ಯಾಣಿಗಳ ನಿರ್ವಹಣೆ ಇಲ್ಲ. ಕಳೆ ಹಾಗೂ ಮುಳ್ಳಿನ ಗಿಡಗಳು ಬೆಳೆದಿವೆ.

ಕೆಲ ಪ್ರಭಾವಿಗಳು ಬೆಟ್ಟ-ಗುಡ್ಡಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಪರಿಸರ ಹಾಳು ಮಾಡಿದ್ದಾರೆ. ಈ ಪರಿಣಾಮ ಸಮೀಪದ ಕೆರೆ, ಕುಂಟೆಗಳಲ್ಲಿ ಹೂಳು ತುಂಬಿದೆ. ನೀರು ಸಂಗ್ರಹ ಆಗುತ್ತಿಲ್ಲ. ಬರಕ್ಕೆ ಹೆಸರಾಗಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮಳೆ ಇಲ್ಲದಿದ್ದರೆ ಜನ-ಜಾನುವಾರುಗಳಿಗೆ ನೀರಿನ ಕಂಟಕ ಎದುರಾಗುತ್ತದೆ. ಮಳೆ ಬಿದ್ದರೆ ಮಾತ್ರ ಬಿತ್ತನೆ ಕಾರ್ಯ ನಡೆಯಲಿದೆ. ಕೊಳವೆಬಾವಿಗಳಿಂದ, ಏತನೀರಾವರಿ, ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿಯಿಂದ ರೈತರು ತರಕಾರಿಗಳನ್ನು ಮಾತ್ರ ಬೆಳೆಯುತ್ತಿದ್ದಾರೆ. ಇಂತಹ ಕಡೆಯಲ್ಲಿಯೇ ಜಲಮೂಲಗಳ ರಕ್ಷಣೆ ಸಾಧ್ಯವಾಗಿಲ್ಲ.

ತಾಲ್ಲೂಕಿನ ಮಾರ್ಗಾನುಕುಂಟೆ, ದೇವಿಕುಂಟೆ ಸೇರಿದಂತೆ ಆ ಭಾಗದಲ್ಲಿ ಬೆಟ್ಟ-ಗುಡ್ಡಗಳಿವೆ. ಇಲ್ಲಿ ಗಿಡ, ಮರಗಳು ಹೆಚ್ಚಾಗಿತ್ತು. ಸ್ವಚ್ಛಂದವಾಗಿ ಹಸಿರಾಗಿ ಕಂಗೊಳಿಸುತ್ತಿತ್ತು. ಆದರೆ ಕೆಲ ಪ್ರಭಾವಿಗಳು, ಇಟ್ಟಿಗೆ ಕಾರ್ಖಾನೆಯವರು ಇಟ್ಟಿಗೆಗಳನ್ನು ಸುಡಲು, ಅಪಾರವಾದ ವನಸಂಪತ್ತು ಕಡಿದು, ಪರಿಸರ ನಾಶ ಮಾಡಿದ್ದಾರೆ. ಅರಣ್ಯ ವಲಯದಲ್ಲಿಯೇ ಗಿಡ ಮರಗಳು ಇಲ್ಲ. ಎಲ್ಲವೂ ಬಯಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT