ಸೋಮವಾರ, ನವೆಂಬರ್ 28, 2022
20 °C
ಉಪಲೋಕಾಯುಕ್ತರ ಭೇಟಿ ತಂದಿದೆ ಜಿಲ್ಲೆಯಲ್ಲಿ ಸಂಚಲನ; ಮತ್ತೆ ಭೇಟಿಗೆ ಸಾರ್ವಜನಿಕರ ಮನವಿ

‘ಉಪಲೋಕಾಯುಕ್ತರೇ ಮತ್ತೆ ಜಿಲ್ಲೆಗೆ ಬನ್ನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಜಿಲ್ಲೆಗೆ ಭೇಟಿ ನೀಡಿದ್ದು ಮತ್ತು ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಪ್ರಶಂಸೆಗೆ ಕಾರಣವಾಗಿದೆ. 

ಉಪಲೋಕಾಯುಕ್ತರ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು ‘ಉಪಲೋಕಾಯುಕ್ತರೇ ಮತ್ತೆ ಮತ್ತೆ ಜಿಲ್ಲೆಗೆ ಭೇಟಿ ನೀಡಿ’ ಎಂದು ನಾಗರಿಕರು ಮನವಿ ಮಾಡಿದ್ದಾರೆ. 

ನ.5ರಿಂದ 7ರವರೆಗೆ ಜಿಲ್ಲೆಯಲ್ಲಿ ಉಪಲೋಕಾಯುಕ್ತರು ಪ್ರವಾಸ ಕೈಗೊಂಡಿದ್ದರು. 5ರಂದು ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಅಹವಾಲುಗಳನ್ನು ಆಲಿಸಿದ್ದರು. ಬಹಿರಂಗವಾಗಿಯೇ ವಿಚಾರಣೆ ನಡೆಸಿ ಸಾರ್ವಜನಿಕರ ಬಹಳಷ್ಟು ದೂರುಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದರು. ಸಂಬಂಧಿಸಿದ ಅಧಿಕಾರಿಗಳನ್ನು ಖುದ್ದಾಗಿ ಕರೆಯಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರು. 

6ರಂದು ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣ ಹಂತದಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ, ಜಿಲ್ಲಾ ಆಸ್ಪತ್ರೆ, ಅಣಕನೂರು ಬಳಿಯ ಜಿಲ್ಲಾ ಕಾರಾಗೃಹ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ  ವಿದ್ಯಾರ್ಥಿ ನಿಲಯ, ಎಂ.ಜಿ.ರಸ್ತೆಯ ಮೆಟ್ರಿಕ್ ಪೂರ್ವ ಬಾಲಕಿಯರು ಮತ್ತು ಪದವಿ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದರು. 

ಉಪಲೋಕಾಯುಕ್ತರು ತಮ್ಮ ಪ್ರವಾಸ ಪೂರ್ಣಗೊಳಿಸಿ ತೆರಳಿದ ನಂತರ ವ್ಯವಸ್ಥೆಯ ಲೋಪಗಳು ಒಂದೊಂದಾಗಿ ಬಯಲಾಗಿವೆ. ಉಪಲೋಕಾಯುಕ್ತರು ಭೇಟಿ ನೀಡಿದ ಬಹುತೇಕ ಕಡೆಗಳಲ್ಲಿ ವ್ಯವಸ್ಥೆಗಳು ಉತ್ತಮವಾಗಿರಲಿಲ್ಲ. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ‍್ರಾಂಶುಪಾಲರು, ಉಪನ್ಯಾಸಕರ ವಿರುದ್ಧ ಉಪಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವರು ಲೋಕಾಯುಕ್ತ ಸಂಸ್ಥೆ ಎದುರು ಹಾಜರಾಗಿ ಹೇಳಿಕೆಗಳನ್ನು ನೀಡುವಂತೆ ನೋಟಿಸ್ ನೀಡಿದ್ದಾರೆ. 

ಉಪಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿರುವ  ಬಗ್ಗೆ ‘ಪ್ರಜಾವಾಣಿ’ಯಲ್ಲಿ ನ.17ರಂದು ‘ಜಿಲ್ಲಾ ಕಾರಾಗೃಹದಲ್ಲಿ ಅವ್ಯವಸ್ಥೆ; ಪ್ರಕರಣ ದಾಖಲು’ ಮತ್ತು ನ.19ರಂದು ‘ಅಧಿಕಾರಿಗಳಿಗೆ ಉಪಲೋಕಾಯುಕ್ತರ ಚಾಟಿ’ ಎನ್ನುವ ವರದಿಗಳು ಸಹ ಪ್ರಕಟವಾಗಿವೆ. ಉಪಲೋಕಾಯುಕ್ತರ ದೂರಿನಲ್ಲಿ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕಾರಾಗೃಹ, ಪದವಿ ಹಾಸ್ಟೆಲ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವ ಅಧ್ವಾನಗಳು ಬಯಲಾಗಿವೆ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ದೂರಿನಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಲೋಕಾಯುಕ್ತರಿಗೇ ಸುಳ್ಳುಗಳನ್ನು ಹೇಳಿರುವ ಬಗ್ಗೆಯೂ
ವಿವರಿಸಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಗಾಗ್ಗೆ ಅಸಮಾಧಾನಗಳು ಕೇಳಿ ಬರುತ್ತಿದ್ದವು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದು ಸಹ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವಿಚಾರವಾಗಿ ಲೋಪಗಳ ವಿರುದ್ಧ ಕಠಿಣ ಕ್ರಮಗಳು ಜಾರಿಯಾಗಿರಲಿಲ್ಲ. ಉಪಲೋಕಾಯುಕ್ತರು ಪ್ರಕರಣ ದಾಖಲಿಸುವ ಮೂಲಕ ಹುಳುಕುಗಳು ಬಯಲಾಗಿವೆ.

ಲೋಕಾಯುಕ್ತರು ಪ್ರಕರಣ ದಾಖಲಿಸುತ್ತಿದ್ದಂತೆ ಇತ್ತ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಉಪಲೋಕಾಯುಕ್ತರು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡಿದರೆ ಒಳ್ಳೆಯದು ಎನ್ನುವ ಅಭಿಪ್ರಾಯ ಮೂಡಿದೆ.

ಮತ್ತೊಮ್ಮೆ ಬರುವೆ...:ತಿಂಗಳಿಗೆ ಒಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದೇನೆ. ಚಿಕ್ಕಬಳ್ಳಾಪುರ ನಾವು ಭೇಟಿ ನೀಡಿದ ನಾಲ್ಕನೇ ಜಿಲ್ಲೆಯಾಗಿದೆ. ಎಲ್ಲ ಜಿಲ್ಲೆಗಳಿಗೂ ಒಂದು ಸುತ್ತು ಭೇಟಿ ನೀಡಿದ ನಂತರ ಮತ್ತೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತೇನೆ’ ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕ್ಕಬ‌ಳ್ಳಾಪುರದ ಜಿಲ್ಲಾ ಆಸ್ಪತ್ರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಬಾಲಕರ ಹಾಸ್ಟೆಲ್ ಮತ್ತು ಜಿಲ್ಲಾ ಕಾರಾಗೃಹದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ನೋಟಿಸ್ ನೀಡಲು ಆದೇಶಿಸಿದ್ದೇನೆ ಎಂದರು.

ಧನ್ಯವಾದಗಳು:ಚಿಕ್ಕಬಳ್ಳಾಪುರದ ಬಹುತೇಕ ಇಲಾಖೆಗಳಲ್ಲಿ ಸಾಮಾನ್ಯ ಜನರ ಪರವಾಗಿ ಕೆಲಸಗಳು ಆಗುತ್ತಿಲ್ಲ. ಕಾಸಿಗಾಗಿ ಕೆಲಸ ಎನ್ನುವಂತೆ ಆಗಿದೆ. ಕಾಲಕಾಲಕ್ಕೆ ನಡೆಯಬೇಕಾಗಿದ್ದ ಇಲಾಖಾ ಪ್ರಗತಿ ಪರಿಶೀಲನಾ ಸಭೆಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿಂತು ಹೋಗಿವೆ. ಇಂತಹ ಸಂದರ್ಭದಲ್ಲಿ ಉಪಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿ ಶಿಕ್ಷಣ, ಆರೋಗ್ಯ ಸಂಸ್ಥೆಗಳಿಗೆ, ಹಾಸ್ಟೆಲ್‌ಗಳನ್ನು ಪರಿಶೀಲಿಸಿದರು. ಅಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವ ಮೂಲಕ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉಪಲೋಕಾಯುಕ್ತರಿಗೆ ಧನ್ಯವಾದಗಳು.

ಯಲುವಳ್ಳಿ ಸೊಣ್ಣೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ, ಚಿಕ್ಕಬಳ್ಳಾಪುರ

ಆರು ತಿಂಗಳಿಗೊಮ್ಮೆ ಬನ್ನಿ: ಉಪಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡುತ್ತಾರೆ ಎನ್ನುವುದು ಅಧಿಕಾರಿಗಳಿಗೆ ಒಂದು ವಾರದ ಮುನ್ನವೇ ತಿಳಿದಿತ್ತು. ಮೇಲಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದ್ದರು. ಹೀಗಿದ್ದರೂ ಉಪಲೋಕಾಯುಕ್ತರು ತಾವು ಭೇಟಿ ನೀಡಿದ ಕಡೆಗಳಲ್ಲಿ ಅವ್ಯವಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಲೋಕಾಯುಕ್ತರ ಶಕ್ತಿ ಏನು ಎನ್ನುವುದನ್ನು ತೋರಿಸುತ್ತದೆ. ಉಪಲೋಕಾಯುಕ್ತರು ಆರು ತಿಂಗಳಿಗೆ ಒಮ್ಮೆಯಾದರೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿದರೆ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಬಹಳಷ್ಟು ಅಧ್ವಾನಗಳು ಬಯಲಾಗಲಿವೆ.

ಮೋಹನ್ ಕುಮಾರ್, ‌ಮಾಹಿತಿಹಕ್ಕು ಕಾರ್ಯಕರ್ತ, ಚಿಕ್ಕಬಳ್ಳಾಪುರ

ಆಡಳಿತ ಸುಧಾರಣೆ ವಿಶ್ವಾಸ: ಉಪಲೋಕಾಯುಕ್ತರು ಹಾಸ್ಟೆಲ್, ಆಸ್ಪತ್ರೆ, ಕಾಲೇಜು ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳು ಮತ್ತು ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡಿದ್ದಾರೆ. ಅವ್ಯವಸ್ಥೆ ಇದ್ದ ಕಡೆ ಸ್ವಯಂಪ್ರೇರಿತವಾಗಿ ಪ್ರಕರಣ ಸಹ ದಾಖಲಿಸಿದ್ದಾರೆ. ಅವರ ಭೇಟಿಯ ನಂತರ ಇಲಾಖೆಗಳ ಆಡಳಿದ ವಿಚಾರವಾಗಿ ಸುಧಾರಣೆ ಆಗುತ್ತದೆ ಎನ್ನುವ ಆಶಾಭಾವವಿದೆ. ಉಪಲೋಕಾಯುಕ್ತರು ಅಥವಾ ಸಂಸ್ಥೆಯ ಉನ್ನತ ಅಧಿಕಾರಿಗಳು ಆಗಾಗ್ಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ.

ಸು.ಧಾ.ವೆಂಕಟೇಶ್, ರಾಜ್ಯ ಸಂಚಾಲಕ, ಕದಸಂಸ, ಚಿಕ್ಕಬಳ್ಳಾಪುರ

ಭರವಸೆ ತಂದ ಭೇಟಿ: ಉಪಲೋಕಾಯುಕ್ತರ ಪ್ರವಾಸದಿಂದ ಜಿಲ್ಲೆಯ ಅಧಿಕಾರಿ ವರ್ಗಕ್ಕೆ ಚಾಟಿ ಬೀಸಿದಂತೆ ಆಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರ ಮೇಲೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿರುವುದು ಜನರಲ್ಲಿ ಒಂದಿಷ್ಟು ಭರವಸೆ ತಂದಿದೆ. ಸಾರ್ವಜನಿಕರ ದೂರುಗಳನ್ನು ಬಹಿರಂಗವಾಗಿ ವಿಚಾರಣೆ ನಡೆಸಿದರು. ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ವೃದ್ಧಿಸಿದೆ. ಜಿಲ್ಲೆಯಲ್ಲಿ ಉಪಲೋಕಾಯುಕ್ತರ ಭೇಟಿ ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಎನ್.ಚಂದ್ರಶೇಖರ್, ಉಪನ್ಯಾಸಕ, ಚಿಕ್ಕಬಳ್ಳಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.