ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ಸ್ವಚ್ಛತೆ ಮರೀಚಿಕೆ, 739 ಕುಟುಂಬಗಳಿಗೆ ಶೌಚಾಲಯವಿಲ್ಲ

Published 14 ಅಕ್ಟೋಬರ್ 2023, 6:20 IST
Last Updated 14 ಅಕ್ಟೋಬರ್ 2023, 6:20 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ನಗರಗೆರೆ ಹೋಬಳಿಯ ಮೇಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿಗೂ 739 ಕುಟುಂಬಗಳು ಶೌಚಾಲಯ ವ್ಯವಸ್ಥೆ ಇಲ್ಲದೆ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿವೆ. 

ಜಿಲ್ಲಾಡಳಿತ ಮತ್ತು ತಾಲ್ಲೂಕು ಪಂಚಾಯಿತಿ ತಾಲ್ಲೂಕಿನ ಎಲ್ಲ ಕುಟುಂಬಗಳಿಗೆ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಲು ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. 

ಮೇಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಳ್ಯ, ಒಂಟಿಮನೆಹಳ್ಳಿ, ಮರಿಪಡುಗು, ಹುಣಸೇನಹಳ್ಳಿ, ವೆಳಪಿ ಜಗರೆಡ್ಡಹಳ್ಳಿ, ದಿನ್ನೇಹುಣಸೇನಹಳ್ಳಿ, ಚಿಟ್ಟಾವಲಹಳ್ಳಿ ಸೇರಿದಂತೆ ಒಟ್ಟು 8 ಗ್ರಾಮಗಳಿವೆ. ಇವುಗಳಲ್ಲಿ ಬಹುತೇಕ ಗ್ರಾಮಗಳು ರಾಜ್ಯದ ಗಡಿಭಾಗದಲ್ಲಿದ್ದು, ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿವೆ. ಈ ಗ್ರಾಮಗಳಲ್ಲಿನ ಒಟ್ಟು 1,350 ಕುಟುಂಬಗಳಲ್ಲಿ 611 ಕುಟುಂಬಗಳಿಗೆ ಮಾತ್ರ ಶೌಚಾಲಯ ವ್ಯವಸ್ಥೆಯಿದ್ದು ಉಳಿದ 739 ಕುಟುಂಬದ ಸದಸ್ಯರು ಇಂದಿಗೂ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಿವೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶೌಚಾಲಯ ನಿರ್ಮಾಣದ ಬಗ್ಗೆ ಜನರಲ್ಲಿ ಜಾಗೃತಿ ‌ಮೂಡಿಸಲು ವಿಫಲವಾಗಿದ್ದು, ಸಮರ್ಪಕ ಅನುದಾನ ಕಲ್ಪಿಸಲು ಸಹಕಾರ ನೀಡದಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎನ್ನುತ್ತಾರೆ‌ ಸ್ಥಳೀಯರು.

ಮೇಳ್ಯ ಗ್ರಾ.ಪಂ ವ್ಯಾಪ್ತಿಯ ಒಟ್ಟು 8 ಗ್ರಾಮಗಳಲ್ಲಿನ 1350 ಕುಟುಂಬಗಳಲ್ಲಿ 269 ಪರಿಶಿಷ್ಟ ಜಾತಿ, 211 ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ 870 ಕುಟುಂಬಳಿವೆ. ಇವರಲ್ಲಿ ಪರಿಶಿಷ್ಟ ಜಾತಿಯ 80, ಪರಿಶಿಷ್ಟ ಪಂಗಡದ 68 ಮತ್ತು ಇತರೆ ಸಮುದಾಯದ 463 ಸೇರಿದಂತೆ ಒಟ್ಠು 611 ಕುಟುಂಬಗಳು ಮಾತ್ರ ಶೌಚಾಲಯ ವ್ಯವಸ್ಥೆ ಹೊಂದಿವೆ. ಉಳಿದಂತೆ 189 ಪರಿಶಿಷ್ಟ ಜಾತಿ, 143 ಪರಿಶಿಷ್ಟ ಪಂಗಡ ಮತ್ತು 407 ಇತರೆ ಸಮುದಾಯದ ಕುಟುಂಬಗಳು ಸೇರಿದಂತೆ ಒಟ್ಟು 739 ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆಯೇ ಸಿಕ್ಕಿಲ್ಲ.

ಇದರ ಜತೆಗೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಚರಂಡಿಗಳಲ್ಲಿ ವರ್ಷಗಳಿಂದಲೂ ತ್ಯಾಜ್ಯ ತುಂಬಿದ್ದು ತ್ಯಾಜ್ಯ ‌ನೀರು ಹರಿಯದೆ ಮಡುಗಟ್ಟಿ ವಿಷಕಾರಿ ಕ್ರಿಮಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನತೆ ರಸ್ತೆಗಳಲ್ಲಿ ಮತ್ತು‌ ಮನೆಯ ಪಕ್ಕದಲ್ಲಿ ದುರ್ನಾತ ಹೆಚ್ಚಾಗಿ ಮೂಗು‌ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ‌ನಿರ್ಮಾಣವಾಗಿದೆ. ಜನತೆ ಸಾಂಕ್ರಾಮಿಕ ರೋಗಗಳು ‌ಹರಡುವ ಭೀತಿಯಲ್ಲಿಯೇ ಬದುಕು ಸಾಗಿಸುವಂತಾಗಿದೆ. ಅನೇಕ ಬಾರಿ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಗಮನಕ್ಕೆ ತಂದರೂ ವ್ಯವಸ್ಥೆ ಸರಿಯಾಗಿಲ್ಲ. ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿ ‌ನೆಮ್ಮದಿಯಿಂದ ಬದುಕುವುದು ದುಸ್ತರವಾಗಿದೆ ಎನ್ಮುತ್ತಾರೆ ಸ್ಥಳೀಯ ‌ನಿವಾಸಿ ನಾಗರಾಜ್.

ಒಂದೆಡೆ ಬಯಲು‌ ಬಹಿರ್ದೆಸೆಯನ್ನು ಅವಲಂಭಿಸಿರುವ ಬಹುತೇಕ ಕುಟುಂಬಗಳು ಮತ್ತೊಂದೆಡೆ ನಿರುಪಯುಕ್ತ ತ್ಯಾಜ್ಯದಿಂದ ಮಡುಗಟ್ಟಿದ ಚರಂಡಿ ವ್ಯವಸ್ಥೆ ಇವೆರಡರ ನಡುವೆ ಅನೈರ್ಮಲ್ಯದಿಂದ ನೆಮ್ಮದಿಯಿಲ್ಲದ ಬದುಕು ಸಾಗಿಸುತ್ತಿರುವ ಜನತೆಯ ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬ ಯಕ್ಷ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.

ಈ ವಿಚಾರವಾಗಿ ಮಾಹಿತಿ ಪಡೆಯಲು ಅನೇಕ ಬಾರಿ ಸ್ಥಳೀಯ ಪಿಡಿಒ ಅಧಿಕಾರಿ ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಗೌರಿಬಿದನೂರು ತಾಲ್ಲೂಕಿನ ಮೇಳ್ಯ‌ ಗ್ರಾ.ಪಂ ಕಾರ್ಯಾಲಯ
ಗೌರಿಬಿದನೂರು ತಾಲ್ಲೂಕಿನ ಮೇಳ್ಯ‌ ಗ್ರಾ.ಪಂ ಕಾರ್ಯಾಲಯ

ಪಿಡಿಒ ಸಹಿ ಹಾಕಲು ಮಾತ್ರ ಸೀಮಿತ

ಮೇಳ್ಯ ಗ್ರಾ.ಪಂ ಯ ಪಿಡಿಒ ಅಧಿಕಾರಿ ನಾರಾಯಣಸ್ವಾಮಿ ಕಚೇರಿಯಲ್ಲಿನ ದಾಖಲೆಗಳಿಗೆ ಸಹಿ ಹಾಕಲು ಮಾತ್ರ ಸೀಮಿತವಾಗಿದ್ದು ಉಳಿದಂತೆ ಯಾವುದೇ ವ್ಯವಹಾರ ಕಚೇರಿಯ ಕಾರ್ಯಗಳು ಮತ್ತು ಜನತೆ ಯಾವುದೇ ಸಮಸ್ಯೆಗಳನ್ನು ಹೇಳಿದರೂ ಅದಕ್ಕೆ ಉತ್ತರ ಅಲ್ಲಿನ ಸಿಬ್ಬಂದಿ ನೀಡುವಂತಾಗಿದೆ. ಕನಿಷ್ಠ ಸದಸ್ಯರ ಸಮಸ್ಯೆಗಳಿಗೂ ಸ್ಪಂದಿಸುವ ಔದಾರ್ಯತೆ ಪಿಡಿಒ ಅಧಿಕಾರಿಯಲ್ಲಿ ಇಲ್ಲದಂತಾಗಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ ಸದಸ್ಯರೊಬ್ಬರು. ಗ್ರಾ.ಪಂ ಕಾರ್ಯಾಲಯದ ಮುಂದೆಯೇ ಅನೈರ್ಮಲ್ಯ  ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಮತ್ತು ಸುತ್ತಲಿನ ಚರಂಡಿ ವ್ಯವಸ್ಥೆಯೇ ವರ್ಷಗಳಿಂದ ಅನೈರ್ಮಲ್ಯತೆಯಿಂದ ಕೂಡಿದ್ದು ಅದನ್ನು ಸ್ವಚ್ಛಗೊಳಿಸಲು ಇಲ್ಲಿನ ಅಧಿಕಾರಿಗಳು ಮುಂದಾಗಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ 15ನೇ ಹಣಕಾಸಿನಲ್ಲಿ ಪ್ರತಿ ತಿಂಗಳು ಅನುದಾನವನ್ನು ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಪೋರ್ಟಲ್ ನಲ್ಲಿ ಅಳವಡಿಸಿದ್ದಾರೆ. ಪಂಚಾಯತಿ ವ್ಯಾಪ್ತಿಯಲ್ಲಿ ಚರಂಡಿಗಳು ಸ್ವಚ್ಛವಾಗದೆಯೇ ಅನುದಾನ ಬಳಕೆಯಾಗುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಸಾಕಷ್ಟು ಅನುಮಾನಗಳು ಮೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT