ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2026ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು: ವೀರಪ್ಪ ಮೊಯಿಲಿ

ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿಕೆ
Published 3 ಅಕ್ಟೋಬರ್ 2023, 13:25 IST
Last Updated 3 ಅಕ್ಟೋಬರ್ 2023, 13:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: 2026ಕ್ಕೆ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ತಿಳಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯ ಜಾರಿ ವಿಚಾರದಲ್ಲಿ ಎದುರಾಗಿದ್ದ ತೊಂದರೆಗಳು ನಿವಾರಣೆ ಆಗಿವೆ. ಪ್ರತಿ ವರ್ಷ ₹ 3 ಸಾವಿರ ಕೋಟಿ ಯೋಜನೆಗೆ ಬಿಡುಗಡೆ ಆಗುತ್ತಿದೆ. ಯೋಜನೆ ಕುರಿತು ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. 

ಅಲ್ಪಸಂಖ್ಯಾತರ ಅಭಿವೃದ್ಧಿಗೆ ದೇವೇಗೌಡರು ಕಾರಣರಲ್ಲ: ನಾನು ಮುಖ್ಯಮಂತ್ರಿ ಆಗಿದ್ದ ವೇಳೆ 1992ರಲ್ಲಿ ಚಿನ್ನಪ್ಪರೆಡ್ಡಿ ಆಯೋಗದ ವರದಿ ಅನುಷ್ಠಾನಗೊಳಿಸಿದೆ. ಆ ಸಮಯದಲ್ಲಿ ಚಿನ್ನಪ್ಪರೆಡ್ಡಿ ಆಯೋಗದ ವರದಿಗೆ ಪೂರಕವಾಗಿ ಅಲ್ಪಸಂಖ್ಯಾತರ ಅಭಿವೃದ್ಧಿಗೂ ಸಮೀಕ್ಷೆ ನಡೆಸಿ ಆ ವರದಿಯನ್ನು ಅನುಷ್ಠಾನಗೊಳಿಸಲಾಗಿತ್ತು. ಇದರಿಂದ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತಿತರ ಕ್ಷೇತ್ರದಲ್ಲಿ ಅನುಕೂಲವಾಯಿತು ಎಂದರು. 

ದೇವೇಗೌಡ ಅವರು ಅಧಿಕಾರಕ್ಕೆ ಬಂದಿದ್ದು 1994ರಲ್ಲಿ. ಆದರೆ ಅವರು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಾನು ಕಾರಣ ಎನ್ನುತ್ತಾರೆ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿ ವರ್ಗಗಳು ಮತ್ತು ರೈತರಿಗೆ ನ್ಯಾಯ ದೊರಕಬೇಕಿದೆ. ಆದ ಕಾರಣ 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಕೊಚ್ಚಿ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

‘ಇಂಡಿಯಾ’ ಒಕ್ಕೂಟವು ಈಗಾಗಲೇ ಮೂರು ಸಭೆಗಳನ್ನು ನಡೆಸಿದೆ. ಇಲ್ಲಿ 30 ಪಕ್ಷಗಳ ಎಲ್ಲರೂ ನಾಯಕರೇ ಆಗಿದ್ದಾರೆ. ಒಂದು ಪಕ್ಷ ಮೇಲು ಮತ್ತೊಂದು ಕಡಿಮೆ ಎನ್ನುವುದಲ್ಲ. ಇಂತಹವರೇ ಪ್ರಧಾನಿ ಆಗಬೇಕು ಎಂದು ನಾವು ಪಟ್ಟು ಹಿಡಿದಿಲ್ಲ. ಆಯಾ ಪಕ್ಷಗಳಿಗೆ ಸಂಘಟನೆ, ಸಿದ್ಧಾಂತ, ಧ್ಯೇಯ ಧೋರಣೆಗಳು ಇವೆ. ಆದರೂ ಒಗ್ಗಟ್ಟಿನಿಂದ ಹೋಗಬೇಕು ಎನ್ನುವ ಸಂಕಲ್ಪವನ್ನು ಇಂಡಿಯಾ ಒಕ್ಕೂಟ ಮಾಡಿದೆ ಎಂದರು.

ಒಕ್ಕೂಟ ವ್ಯವಸ್ಥೆ ನಾಶದ ನಿರೀಕ್ಷೆ: ಕಾವೇರಿ ನದಿ ನೀರಿನ ವಿಚಾರವಾಗಿ ಪ್ರತಿಕ್ರಿಯಿಸಿದ ವೀರಪ್ಪ ಮೊಯಿಲಿ, ‘ಗಂಡಾಂತರ ಬಂದಾಗ ಪ್ರಧಾನಿ ಹಸ್ತಕ್ಷೇಪ ಮಾಡಬೇಕು. ಆದರೆ ‌ಭೇಟಿಗೆ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಸಮಯವನ್ನೇ ಕೊಡುತ್ತಿಲ್ಲ. ಒಕ್ಕೂಟ ವ್ಯವಸ್ಥೆ ನಾಶವಾಗಬೇಕು. ಸರ್ವಾಧಿಕಾರ ಜಾರಿಗೊಳ್ಳಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆ ಎಂದು ದೂರಿದರು.

ದೇಶದಲ್ಲಿ ಯಾರಿಗೂ ನ್ಯಾಯ ಸಿಗಬಾರದು ಎನ್ನುವುದು ಪ್ರಧಾನಿ ನಿಲುವು. ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಬೇಕು. ಒಕ್ಕೂಟ ವ್ಯವಸ್ಥೆ ನಾಶವಾಗಬೇಕು ಎನ್ನುವ ಮಾರ್ಜಾಲ ನ್ಯಾಯ ಪ್ರಧಾನಿ ಅವರದ್ದು ಎಂದು ಟೀಕಿಸಿದರು. 

ಮಾಜಿ ಶಾಸಕರಾದ ಶಿವಾನಂದ್, ಎಸ್‌.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜಿನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ನಗರಸಭೆ ಸದಸ್ಯ ರಫೀಕ್ ಇತರರು ಗೋಷ್ಠಿಯಲ್ಲಿ ಇದ್ದರು.

ಜಾತಿ ಗಣತಿ ವರದಿ ಬಿಡುಗಡೆಗೆ ಆಗ್ರಹ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿಯೂ ಸಿದ್ದವಾಗಿರುವ ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಎಂ.ವೀರಪ್ಪ ಮೊಯಿಲಿ ಆಗ್ರಹಿಸಿದರು.  ಜಾತಿ ಗಣತಿ ವರದಿಯಲ್ಲಿ ಕೆಲವು ಹೆಚ್ಚು ಕಡಿಮೆ ಇರಬಹುದು. ಇದನ್ನು  ಸರಿಪಡಿಸಬಹುದು. ಯಾವ ಸಮಾಜಕ್ಕೆ ತೊಂದರೆ ಆಗಿದೆ ಅದನ್ನು ಯಾವ ರೀತಿ ಸರಿ ಮಾಡಬಹುದು ಎನ್ನುವುದು ಗೊತ್ತಾಗುತ್ತದೆ. ಆದರೆ ವರದಿ ಬಿಡುಗಡೆಯೇ ಮಾಡದಿದ್ದರೆ ಹೇಗೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT