ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಕೊಳವೆಬಾವಿ ಇಲ್ಲದೆ ಪರಾವಲಂಬಿ ಸ್ಥಿತಿ: ಅಗ್ನಿಶಾಮಕ ಠಾಣೆಗೆ ನೀರಿನ ಬರ

Published 29 ಏಪ್ರಿಲ್ 2024, 7:40 IST
Last Updated 29 ಏಪ್ರಿಲ್ 2024, 7:40 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಶಿಡ್ಲಘಟ್ಟ ತಾಲ್ಲೂಕು ಅಗ್ನಿಶಾಮಕ ಠಾಣೆ ಆನೂರು ಗೇಟ್ ಬಳಿ ಇದೆಯಾದರೂ ಹಲವು ಸಮಸ್ಯೆಗಳನ್ನು ಅದು ಎದುರಿಸುತ್ತಿದೆ. ಅವರಿಗೆ ಸ್ವಂತದ್ದಾದ ಕೊಳವೆಬಾವಿ ಇಲ್ಲ. ಹಾಗಾಗಿ ಗ್ರಾಮ ಪಂಚಾಯಿತಿಯಿಂದ ಪೂರೈಕೆ ಆಗುತ್ತಿರುವ ನೀರಿನ ಮೇಲೆ ಅವಲಂಬಿತವಾಗುವಂತಾಗಿದೆ.

ಜತೆಗೆ ಒಂದು ಅಗ್ನಿಶಾಮಕ ವಾಹನವಷ್ಟೆ ಇದ್ದು, ತುರ್ತು ಪರಿಸ್ಥಿತಿಯಲ್ಲಿ ನೆರೆಯ ಚಿಂತಾಮಣಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ವಿಜಯಪುರ, ದೇವನಹಳ್ಳಿಯ ಅಗ್ನಿಶಾಮಕ ಠಾಣೆಗಳ ವಾಹನಗಳನ್ನು ಬಳಸಿಕೊಂಡು ಬೆಂಕಿ ನಂದಿಸುವ ಕಾರ್ಯವನ್ನು ಮಾಡಬೇಕಿದೆ.

ಒಂದರ್ಥದಲ್ಲಿ ಶಿಡ್ಲಘಟ್ಟದ ಅಗ್ನಿಶಾಮಕ ಠಾಣೆಯು ನೀರು ಮತ್ತು ವಾಹನ ವಿಚಾರದಲ್ಲಿ ಇತರರನ್ನು ಅವಲಂಬಿಸಿ ಕೆಲಸ ಮಾಡುವಂತಾಗಿದೆ. ಪ್ರತಿ ವರ್ಷ ಬೇಸಿಗೆ ಕಾಲ ಬಂದಾಗಲೂ ಅಗ್ನಿಶಾಮಕ ಠಾಣೆಯ ವಾಹನಗಳಿಗೆ ನೀರನ್ನು ಒದಗಿಸಿಕೊಳ್ಳುವುದೆ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದೆ.

ಶಿಡ್ಲಘಟ್ಟದಲ್ಲಿ ಅಗ್ನಿಶಾಮಕ ಠಾಣೆ ಆರಂಭವಾಗಿ ಏಳೆಂಟು ವರ್ಷಗಳಾಗಿವೆ. ಠಾಣೆ ಆರಂಭವಾದಾಗ ಕೊರೆದ ಕೊಳವೆಬಾವಿಯಲ್ಲಿ ಒಂದಷ್ಟು ನೀರು ದೊರೆತಿತ್ತಾದರೂ ಒಂದೆರಡು ತಿಂಗಳಿಗೆ ನೀರು ಖಾಲಿಯಾಗಿ ಕೊಳವೆಬಾವಿ ಬತ್ತಿ ಹೋಯಿತು.

ಆಗ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿರುವ ತಿಪ್ಪೇನಹಳ್ಳಿ ಕೆರೆಯಲ್ಲಿ ಜಿಲ್ಲಾ ಅಗ್ನಿಶಾಮಕ ಇಲಾಖೆಯ ಟ್ಯಾಂಕರ್‌ಗಳಿಂದ ನೀರನ್ನು ತುಂಬಿಸಿಕೊಂಡು ಶಿಡ್ಲಘಟ್ಟದ ಅಗ್ನಿಶಾಮಕ ಠಾಣೆಯ ವಾಹನಗಳಿಗೆ ತುಂಬಿಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಶಿಡ್ಲಘಟ್ಟ ತಾಲ್ಲೂಕಿನ ರೈತರ ಕೃಷಿ ಹೊಂಡಗಳಿಂದಲೂ ನೀರನ್ನು ತುಂಬಿಸಿಕೊಳ್ಳಲಾಗುತ್ತಿತ್ತು.

ಆದರೆ ಇದೀಗ ಅಗ್ನಿಶಾಮಕ ಠಾಣೆ ವ್ಯಾಪ್ತಿಯ ಅನೂರು ಗ್ರಾಮ ಪಂಚಾಯಿತಿಯವರು ಕೊರೆಸಿರುವ ಕೊಳವೆಬಾವಿಯಿಂದಲೆ ಅಗ್ನಿಶಾಮಕ ಠಾಣೆಗೆ ನೀರನ್ನು ಪೂರೈಸಲಾಗುತ್ತಿದೆ. ಅದೇ ಕೊಳವೆಬಾವಿಯಿಂದ ಹಿತ್ತಲಹಳ್ಳಿ ಗ್ರಾಮಕ್ಕೂ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ನೀರಿನ ಕೊರತೆ ಎದುರಾಗುವವರೆಗೂ ಠಾಣೆಗೆ ಪೂರೈಕೆ ಆಗುವುದರಲ್ಲಿ ಅನುಮಾನವಿಲ್ಲ. ಒಂದೊಮ್ಮೆ ಗ್ರಾಮಸ್ಥರಿಗೆ ನೀರಿನ ಕೊರತೆ ಆದರೆ ಠಾಣೆಗೆ ನೀರಿನ ಪೂರೈಕೆ ನಿಂತುಹೋಗುತ್ತದೆ.

ಹಿತ್ತಲಹಳ್ಳಿ ಬಳಿ ಇರುವ ಕೊಳವೆಬಾವಿಯಿಂದ ಪೈಪ್‌ಲೈನ್ ಮೂಲಕ ಅಗ್ನಿಶಾಮಕ ಠಾಣೆಗೆ ಸಂಪರ್ಕ ನೀಡಿದ್ದು ಅಲ್ಲಿ ನಲ್ಲಿ ಮೂಲಕ ಟ್ಯಾಂಕ್ ತುಂಬಿಸಿಕೊಂಡು ಅದನ್ನು ಅಗ್ನಿಶಾಮಕ ಠಾಣೆ ವಾಹನಗಳಿಗೂ, ಠಾಣೆಯ ವಸತಿ ಗೃಹಗಳಿಗೂ ಬಳಸಿಕೊಳ್ಳಲಾಗುತ್ತಿದೆ.

ಒಮ್ಮೊಮ್ಮೆ ಆನೂರು ಗ್ರಾಮ ಪಂಚಾಯಿತಿಯ ಗ್ರಾಮಗಳಲ್ಲಿ ನೀರಿನ ಕೊರತೆ ಆದಾಗ ಪಂಚಾಯಿತಿಯವರು ಅಗ್ನಿಶಾಮಕ ಠಾಣೆಯ ಟ್ಯಾಂಕ್‌ನಿಂದ ನೀರನ್ನು ತುಂಬಿಸಿಕೊಂಡು ಹೋಗುತ್ತಾರೆ. ಗ್ರಾಮಕ್ಕೆ ನೀರನ್ನು ಪೂರೈಸುತ್ತಾರೆ. ಪಂಚಾಯಿತಿಯಿಂದ ಉಚಿತವಾಗಿಯೆ ಅಗ್ನಿಶಾಮಕ ಠಾಣೆಗೆ ನೀರನ್ನು ಪೂರೈಸಲಾಗುತ್ತಿದೆ.

ಹೊಸ ಕೊಳವೆ ಬಾವಿ ಕೊರೆಸಲು ಠಾಣಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರೂ ಇದುವರೆಗೂ ಕೊಳವೆಬಾವಿ ಕೊರೆಸಿಲ್ಲ. ಅದಕ್ಕೆ ಅನುದಾನವೂ ಬಿಡುಗಡೆ ಆಗಿಲ್ಲ.

ಪ್ರತಿ ವರ್ಷವೂ ಅಗ್ನಿ ದುರಂತಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಪ್ರತಿ ವರ್ಷದ ಜನವರಿಯಿಂದ ಏಪ್ರಿಲ್, ಮೇವರೆಗೂ ಅಗ್ನಿ ಅವಘಡಗಳು ನಿರಂತರವಾಗಿರುತ್ತವೆ. ಬೆಂಕಿ ಅವಘಡಗಳನ್ನು ನಿಭಾಯಿಸುವಷ್ಟರಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸುಸ್ತು ಹೊಡೆಯುತ್ತಾರೆ.

ಈ ವರ್ಷ ಮಾರ್ಚ್ ಒಂದರಿಂದ 25ನೇ ತಾರೀಕಿನವರೆಗಿನ 25 ದಿನಗಳಲ್ಲಿ 33 ಬೆಂಕಿ ಅವಘಡಗಳ ವರದಿಯಾಗಿದ್ದು ಎಲ್ಲವನ್ನೂ ನಿರ್ವಹಣೆ ಮಾಡಿದ್ದಾರೆ. ಫೆಬ್ರುವರಿಯಿಂದ ಇದುವರೆಗೂ 55ಕ್ಕೂ ಹೆಚ್ಚು ಅಗ್ನಿ ಅವಘಡಗಳ ವರದಿಯಾಗಿದೆ.

ಸರ್ಕಾರಕ್ಕೆ ಪ್ರಸ್ತಾವ

ಶಿಡ್ಲಘಟ್ಟದ ಅಗ್ನಿಶಾಮಕ ಠಾಣೆಗೆ ಸ್ವಂತ ಕೊಳವೆಬಾವಿ ಇತ್ತಾದರೂ ಅದರಲ್ಲಿ ಆರಂಭದ ದಿನಗಳಲ್ಲೆ ನೀರು ಬತ್ತಿ ಹೋಗಿದೆ. ಸದ್ಯಕ್ಕೆ ಆನೂರು ಗ್ರಾಮ ಪಂಚಾಯಿತಿಯವರು ನಲ್ಲಿಯ ನೀರನ್ನು ಪೂರೈಸುತ್ತಿದ್ದಾರೆ. ಅದನ್ನೇ ಅಗ್ನಿಶಾಮಕ ಠಾಣಾ ವಾಹನ ವಸತಿ ಗೃಹಗಳಿಗೂ ಬಳಸಿಕೊಳ್ಳುತ್ತಿದ್ದೇವೆ. ಒಂದೇ ವಾಹನವಿದ್ದು ಇನ್ನೊಂದು ವಾಹವನ್ನು ನೀಡುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಠಾಣೆಗೆ ಸ್ವಂತ ಕೊಳವೆಬಾವಿ ಕೊರೆಸಲು ಈ ಹಿಂದಿನ ಠಾಣಾಧಿಕಾರಿಗಳೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಕದಿರಪ್ಪ ಅಗ್ನಿಶಾಮಕ ಠಾಣಾಧಿಕಾರಿ ಶಿಡ್ಲಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT