ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿಗೆ ಕೆ.ಸಿ, ಎಚ್.ಎನ್ ವ್ಯಾಲಿ ನೀರು ಯಾವಾಗ?

Published 4 ಸೆಪ್ಟೆಂಬರ್ 2024, 6:46 IST
Last Updated 4 ಸೆಪ್ಟೆಂಬರ್ 2024, 6:46 IST
ಅಕ್ಷರ ಗಾತ್ರ

ಚಿಂತಾಮಣಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕು ಎಂದು ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೆ ನೀರು ಮಾತ್ರ ಹರಿದಿಲ್ಲ.

ಹೋರಾಟಗಾರರ ತೀವ್ರ ಒತ್ತಡಗಳಿಂದ ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹರಿಸುವ ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಗಳ ನೀರು ಸಹ ಚಿಂತಾಮಣಿ ತಾಲ್ಲೂಕಿಗೆ ಕನಸಾಗಿದೆ.

ಶಾಶ್ವತ ನೀರಾವರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಾಲ್ಲೂಕು ಪ್ರತಿಫಲ ಪಡೆಯುವಲ್ಲಿ ವಂಚನೆಗೆ ಒಳಗಾಗಿದೆ. ಭೌತಿಕ ವಿಸ್ತಾರದಲ್ಲಿ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿರುವ ತಾಲ್ಲೂಕು ಅಭಿವೃದ್ಧಿ ಯೋಜನೆಗಳಲ್ಲಿ ವಂಚನೆಗೆ ಒಳಗಾಗಿದೆ ಎಂಬ ಕೊರಗು ಜನರಲ್ಲಿ ಮಡುಗಟ್ಟಿದೆ.

ಕೆ.ಸಿ.ವ್ಯಾಲಿ ನೀರು ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕುಗಳಿಗೆ ಹರಿಯುತ್ತಿದೆ. ಎಚ್.ಎನ್. ವ್ಯಾಲಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹರಿಯುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಮೊದಲ ಹಂತದ ಯೋಜನೆಯಲ್ಲಿ ಕುರುಟಹಳ್ಳಿ, ಮೂಡಲಚಿಂತಲಹಳ್ಳಿ, ಹಾದಿಗೆರೆ, ಆನೂರು, ದಂಡುಪಾಳ್ಯ ಕೆರೆಗಳಿಗೆ ಸ್ವಲ್ಪದಿನ ನೀರು ಹರಿದಿತ್ತು. ಕೆಲವೇ ದಿನಗಳಲ್ಲಿ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಚಿಂತಾಮಣಿ ತಾಲ್ಲೂಕಿಗೆ ಒಂದು ಹನಿ ನೀರು ಹರಿಯುತ್ತಿಲ್ಲ.

ಚಿಂತಾಮಣಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 546 ಹಾಗೂ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ 19 ಸೇರಿ ಒಟ್ಟು 565 ಕೆರೆಗಳಿವೆ. ನಗರಕ್ಕೆ ಕುಡಿಯುವ ನೀರನ್ನು ಪೂರೈಸಲು ಯೋಜನೆಯನ್ನು ಕೈಗೊಂಡಿರುವ ಭಕ್ತರಹಳ್ಳಿ-ಅರಸೀಕೆರೆ ಒಂದನ್ನು ಹೊರತುಪಡಿಸಿ ಯಾವುದರಲ್ಲೂ ನೀರಿಲ್ಲ. ಕೆರೆ ಒಣಗಿಹೋಗಿವೆ. ಬಹುತೇಕ ಕೆರೆಗಳಲ್ಲಿ ಮರಗಿಡಗಳು ಬೆಳೆದಿದೆ.

ಶಾಶ್ವತ ನೀರಾವರಿ ಹೋರಾಟದ ಹೆಸರಿನಲ್ಲಿ ವಿವಿಧ ಸಂಘಸಂಸ್ಥೆಗಳು ಡಾ.ಪರಮಶಿವಯ್ಯ ವರದಿ ಜಾರಿಗೊಳಿಸುಂತೆ ಒತ್ತಾಯಿಸಿ ಹೋರಾಟ ಆರಂಭಿಸಿ, ಜಿಲ್ಲಾ ಕೇಂದ್ರದಲ್ಲಿ 160 ದಿನ ಧರಣಿ ನಡೆಸಿದ್ದು ಇತಿಹಾಸ ಸೇರಿದೆ.

ಕೆ.ಸಿ.ವ್ಯಾಲಿಯಿಂದ ಪ್ರತಿದಿನ 410 ಎಂಎಲ್‌ಡಿ ನೀರು ಹರಿಸಿ 5 ಟಿಎಂಸಿ ನೀರನ್ನು ಪಡೆಯಬಹುದು. ಚಿಂತಾಮಣಿ ತಾಲ್ಲೂಕು ಸೇರಿ ಕೋಲಾರ ಜಿಲ್ಲೆಯಲ್ಲಿ 126 ಕೆರೆಗಳನ್ನು ತುಂಬಿಸುವ ಮೊದಲ ಹಂತದ ಯೋಜನೆ ಅನುಷ್ಠಾನವಾಗಿದೆ. ಇಲ್ಲೇ ತಾರತಮ್ಯ, ಮಲತಾಯಿ ಧೋರಣೆ ಆರಂಭವಾಗಿ ಹೆಚ್ಚು ಕೆರೆಗಳನ್ನು ಹೊಂದಿರುವ ಚಿಂತಾಮಣಿ ತಾಲ್ಲೂಕಿನ ಕೇವಲ 5 ಕೆರೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ.

ರೈತ ಸಂಘಟನೆಗಳ ಹೋರಾಟದ ನಂತರ ಎರಡನೇ ಹಂತದಲ್ಲಿ ಚಿಂತಾಮಣಿಯ ಹೆಚ್ಚು ಕೆರೆಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ತಿಪ್ಪೆ ಸಾರಿಸಲಾಯಿತು. 2018ರಲ್ಲಿ ಯೋಜನೆ ಆರಂಭವಾಗಿದ್ದು 6 ವರ್ಷ ಕಳೆದರೂ ಒಂದನೇ ಹಂತವೇ ಸಮರ್ಪಕವಾಗಿ ಜಾರಿಯಾಗಿಲ್ಲ. ಇನ್ನು ಎರಡನೇ ಹಂತ ಜಾರಿಯಾಗಲು ಎಷ್ಟು ವರ್ಷಗಳು ಬೇಕಾಗುತ್ತೋ ಗೊತ್ತಿಲ್ಲ ಎಂದು ರೈತರು ಅಸಮಧಾನ ವ್ಯಕ್ತಪಡಿಸುತ್ತಾರೆ.

ಎಚ್.ಎನ್ ವ್ಯಾಲಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲ್ಲೂಕುಗಳ ಕೆರೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ಚಿಂತಾಮಣಿಯ ಯಾವ ಕೆರೆಯೂ ಸೇರಿಲ್ಲ.

ಕೆ.ಸಿ ವ್ಯಾಲಿಯ ಎರಡನೇ ಹಂತದ ಯೋಜನೆಯಲ್ಲಿ ತಾಲ್ಲೂಕಿನ 50 ಕೆರೆಗಳನ್ನು ಸೇರಿಸಲಾಗಿದೆ. ಕೈವಾರ ಹೋಬಳಿಯ ಕೆರೆಗಳಿಗೆ ಎಚ್.ಎನ್.ವ್ಯಾಲಿಯ ಮೂರನೇ ಹಂತದಲ್ಲಿ ನೀರು ಹರಿಸಲಾಗುವುದು. ಚಿಂತಾಮಣಿ ತಾಲ್ಲೂಕಿನ 100 ಕೆರೆಗಳನ್ನು ಎಚ್.ಎನ್.ವ್ಯಾಲಿಗೆ ಸೇರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇತ್ತೀಚೆಗೆ ವೈಜಕೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಮೊದಲ ಹಂತವೇ ಅನುಷ್ಠಾನಗೊಳ್ಳದೆ ಸ್ಥಗಿತಗೊಂಡಿದೆ, ಎರಡನೇ ಹಂತದ ನೀರು ಯಾವಾಗ ಹರಿಯುತ್ತದೋ ಎಂದು ಜನರು ಕಾದು ಕುಳಿತಿದ್ದಾರೆ.

 2-3 ದಶಕಗಳಿಂದ ನೀರು ಸಂಗ್ರಹವಾಗದೆ, ನಿರ್ವಹಣೆಯೂ ಇಲ್ಲದೆ ಕೆರೆಗಳು ಸಂಪೂರ್ಣ ಹಾಳಾಗಿವೆ. ಕಟ್ಟೆ, ತೂಬುಗಳು ಶಿಥಿಲಗೊಂಡಿವೆ. ಕೆರೆಗಳ ಸ್ವಚ್ಛತೆ, ಹೂಳು ತೆಗೆಯುವುದು, ತೂಬು, ಕಟ್ಟೆಗಳ ರಿಪೇರಿಯೂ ಅಗತ್ಯವಾಗಿದೆ ಎಂದು ರೈತ ಮುಖಂಡರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT