ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಧ್ಯಾಕಾಲದಲ್ಲಿ ಲವಲವಿಕೆಯ ಬದುಕು ಮುಖ್ಯ

‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅಭಿಮತ
Last Updated 1 ಅಕ್ಟೋಬರ್ 2019, 11:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹಿರಿಯ ನಾಗರಿಕರು ಜೀವನದ ಸಂಧ್ಯಾಕಾಲದಲ್ಲಿ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೆ ಲವಲವಿಕೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಪ್ರಗತಿಯ ಸಂಕೇತವಾಗಿರುವ ಹಿರಿಯರ ಅನುಭವ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಬಳಕೆಯಾಗಬೇಕಿದೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆದಾಗ ಜೀವನದಲ್ಲಿ ಗುರಿ ಮುಟ್ಟಲು, ಯಶಸ್ಸು ಗಳಿಸಲು ಸಾಧ್ಯ. ಹಿರಿಯ ನಾಗರಿಕರು ನಮ್ಮ ಸಾಂಪ್ರದಾಯದ ಸ್ಫೂರ್ತಿದಾಯಿಗಳು’ ಎಂದರು.

‘ಹಿರಿಯ ನಾಗರಿಕರಿಗಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ರಿಯಾಯಿತಿ ದರದ ಬಸ್‌ಪಾಸ್, ತಿಂಗಳ ಪಿಂಚಣಿ, ಸರ್ಕಾರಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ನಾಗರಿಕರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಒಂದೇ ಶ್ರಮಿಸಿದರೆ ಸಾಲದು, ಮಕ್ಕಳು ಸಹ ತಮ್ಮ ತಂದೆ- ತಾಯಿಯರಿಗೆ ಬೇಕಾದ ಪ್ರೀತಿ, ವಾತ್ಸಲ್ಯ ನೀಡಿದರೆ, ವೃದ್ಧಾಶ್ರಮ ಸೇರುವವರ ಸಂಖ್ಯೆ ಕಡಿಮೆ ಆಗುತ್ತದೆ’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್ ಮಾತನಾಡಿ, ‘ಹಿರಿಯ ನಾಗರಿಕರು ನಮ್ಮ ಸಹಾಯಕ್ಕೆ ಯಾರು ಇಲ್ಲ ಎಂದು ಆತಂಕ ಪಡುವ ಅಗತ್ಯ ಇಲ್ಲ. ತಮಗೆ ಆಗುವ ಅನ್ಯಾಯಗಳನ್ನು ಕಾನೂನು ವ್ಯಾಪ್ತಿಯಲ್ಲಿ ಪರಿಹರಿಸಿಕೊಳ್ಳಲು ಅವಕಾಶವಿದೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ‘ಆಧುನಿಕ ಜೀವನದ ಶೈಲಿ, ಉಡುಗೆ -ತೊಡುಗೆ, ಆಚಾರ- ವಿಚಾರಗಳ ಬಗ್ಗೆ ಹಿರಿಯ ನಾಗರಿಕರಿಗೆ ಸ್ವಲ್ಪ ಕಿರಿಕಿರಿ ಇದೆ. ಅವರು ಕೂಡ ಇಂದಿನ ಜೀವನ ಕ್ರಮಕ್ಕೆ ಹೊಂದಿಕೊಂಡು ಹೋಗುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದರು.

‘ಹಿರಿಯ ನಾಕರಿಕರು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ನಿಯಮಿತವಾಗಿ ವ್ಯಾಯಾಮ, ವಾಯುವಿಹಾರ ಮಾಡುವ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಕ್ಕಳು, ಮೊಮ್ಮಕ್ಕಳ ಜತೆ ಬೆರೆತು ಸಂತಸದಿಂದ ಕಾಲ ಕಳೆಯಬೇಕು’ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಜಿ.ಕೆ.ಲಕ್ಷೀದೇವಮ್ಮ, ಹಂಗಾಮಿ ಜಿಲ್ಲಾ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎನ್.ಪಿ. ರಾಜೇಂದ್ರಪ್ರಸಾದ್, ನಿವೃತ್ತ ನೌಕರ ಸಂಘದ ಖಜಾಂಜಿ ಎಸ್.ಎಂ.ಶ್ರೀನಾಥ್, ನಿವೃತ್ತ ನೌಕರ ಸಂಘದ ಕಾರ್ಯದರ್ಶಿ ತಿರುಮಲಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT