ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆಗೆ ಸಂಘಟನೆಗಳ ಖಂಡನೆ

Last Updated 7 ಸೆಪ್ಟೆಂಬರ್ 2017, 5:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ ಹತ್ಯೆ ಖಂಡಿಸಿ ಬುಧವಾರ ನಗರದಲ್ಲಿ ದಲಿತ ಸಂಘರ್ಷ ಸಮಿತಿ, ಸಿಪಿಎಂ, ರೈತಸಂಘ, ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್‌) ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆದ ಪ್ರತಿಭಟನಾಕಾರರು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ, ಶೀಘ್ರವಾಗಿ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ‘ಇವತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಗೌರವ, ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಇಲ್ಲ. ಪ್ರಗತಿಪರ ಚಿಂತಕರು, ಸಾಮಾಜಿ ಕಳಕಳಿ ಉಳ್ಳವರು, ಸಮಾನತೆ ಬಗ್ಗೆ ಮಾತನಾಡುವವರನ್ನು ಕೊಲೆ ಮಾಡುವ ಮೂಲಕ ಕೋಮುವಾದಿಗಳು, ಕೊಲೆಗಡುಕರು ಇವತ್ತು ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಗತಿಪರ ವಿಚಾರಧಾರೆ ಹೊಂದಿದ್ದ ಎಂ.ಎಂ.ಕಲಬುರ್ಗಿ ಅವರನ್ನು ಕೂಡ ಒಂದು ವರ್ಷದ ಹಿಂದೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕಲಬುರ್ಗಿ ಅವರ ಹಂತಕರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅದನ್ನು ಯೋಚಿಸುವ ಸಂದರ್ಭದಲ್ಲಿಯೇ ಪ್ರಗತಿಪರ ಚಿಂತಕಿಯಾಗಿದ್ದ ಗೌರಿ ಲಂಕೇಶ್‌ ಅವರ ಹತ್ಯೆ ನಡೆದಿದೆ’ ಎಂದು ಹೇಳಿದರು.

‘ಇವತ್ತಿನ ಸಂದರ್ಭದಲ್ಲಿ ನಾಳೆ ಯಾರ ಹತ್ಯೆಯಾಗುತ್ತದೆ ಎನ್ನುವ ಭಯ ಮೂಡಿದೆ. ಇಂತಹ ಕೆಟ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಾದ ಜವಾಬ್ದಾರಿ ಹೊಂದಿರುವ ಕೇಂದ್ರ, ರಾಜ್ಯ ಸರ್ಕಾರಗಳು ಜನಪರವಾಗಿ ಯೋಚಿಸಿ, ಕೋಮುವಾದಿಗಳನ್ನು ಮಟ್ಟ ಹಾಕುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು ಇವತ್ತು ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇವತ್ತು ದೇಶದಲ್ಲಿ ಪತ್ರಕರ್ತರು ಧೈರ್ಯವಾಗಿ ಕೆಲಸ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಗಳು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಕಲಬುರ್ಗಿ ಮತ್ತು ಗೌರಿ ಲಂಕೇಶ್‌ ಅವರ ಹಂತಕರನ್ನು ಕೂಡಲೇ ಬಂಧಿಸಿ, ಗಲ್ಲಿಗೆ ಹಾಕಬೇಕು’ ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಸೋಮಶೇಖರ್‌ ಮಾತನಾಡಿ, ‘ಗೌರಿ ಲಂಕೇಶ್‌ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಸಮಾಜದ ಪರಿವರ್ತನೆಗಾಗಿ ಶ್ರಮಿಸಿದವರು. ಶೋಷಿತರ ಕೊರಳ ಧ್ವನಿಯಾಗಿ ಹಾಗೂ ವಿಶೇಷವಾಗಿ ನಕ್ಸಲ್‌ರನ್ನು ಸಮಾಜಮುಖಿಯಾಗಿ ಪರಿವರ್ತಿಸುವಲ್ಲಿ ಅವರ ಪಾತ್ರ ಮುಖ್ಯವಾಗಿತ್ತು. ಜಾತ್ಯತೀತ ಧೋರಣೆ ಹೊಂದಿ, ಸಮಾಜದ ಸರ್ವತೋಮುಖ ಏಳಿಗೆಗೆ ಶ್ರಮಿಸಿದ ಅವರ ಹತ್ಯೆ ನಿಜಕ್ಕೂ ಶೋಚನೀಯ’ ಎಂದು ಅವರು ಹೇಳಿದರು.

ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಬಿ.ವಿ.ಆನಂದ್, ಉಷಾಕಿರಣ್, ವೆಂಕಟರಮಣ, ಬಿ.ಎಚ್‌.ನರಸಿಂಹಯ್ಯ, ಕುಷ್‌ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT