ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕ್ಕಲಮಡುಗು ಅಣೆಕಟ್ಟೆ ಎತ್ತರಕ್ಕೆ ವಿರೋಧ

Last Updated 22 ಅಕ್ಟೋಬರ್ 2017, 4:53 IST
ಅಕ್ಷರ ಗಾತ್ರ

ಗೌರಿಬಿದನೂರು: ಚಿಕ್ಕಬಳ್ಳಾಪುರ ಕಣಿವೆಯಲ್ಲಿರುವ ಜಕ್ಕಲಮಡುಗು ಜಲಾಶಯದ ಅಣೆಕಟ್ಟೆ ಮಟ್ಟ ಎತ್ತರ ಹೆಚ್ಚಿಸಬೇಕೆಂಬ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಅವರ ಪ್ರಸ್ತಾವಕ್ಕೆ ಗೌರಿಬಿದನೂರು ತಾಲ್ಲೂಕಿನ ವಿವಿಧ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇಪ್ಪತ್ತು ದಿನ ಸತತವಾಗಿ ಸುರಿದ ಮಳೆಯಿಂದಾಗಿ ಎಲ್ಲ ಕೆರೆ, ಕುಂಟೆಗಳು ತುಂಬಿ ಹರಿದವು. ಕೆಲವೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಹಾನಿಯಾಯಿತು. ಬೆಳೆ ನಷ್ಟವಾಗಿ ರೈತರು ತೊಂದರೆ ಅನುಭವಿಸಿದರು. ಆದರೆ ಉತ್ತರ ಪಿನಾಕಿನ ನದಿ ಮಾತ್ರ ಗೌರಿಬಿದನೂರು ಪಟ್ಟಣದವರೆಗೆ ಹರಿಯಲಿಲ್ಲ. ನಂದಿ ಗಿರಿಧಾಮದಲ್ಲಿ ಹುಟ್ಟಿ ಪೋಶೆಟ್ಟಿಹಳ್ಳಿ ಮಾರ್ಗವಾಗಿ ಗೌರಿಬಿದನೂರಿನತ್ತ ಹರಿಯುವ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಕ್ಕಲಮಗುಡು ಜಲಾಶಯದ ಅಣೆಕಟ್ಟೆ ಎತ್ತರಿಸಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

ಹದಿನೈದು ವರ್ಷಗಳ ಹಿಂದೆ ಆರ್.ಎಲ್. ಜಾಲಪ್ಪ ಸಂಸದರಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಜಕ್ಕಲ ಮಡುಗು ಜಲಾಶಯವನ್ನು 48 ಅಡಿಗೆ ಎತ್ತರಿಸಲಾಗಿತ್ತು. ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ದಿನನಿತ್ಯ 40 ಲಕ್ಷ ಲೀಟರ್ ಮತ್ತು ದೊಡ್ಡಬಳ್ಳಾಪುರಕ್ಕೆ 10 ಲಕ್ಷ ಲೀಟರ್‌ ನೀರು ಸರಬರಾಜು ಮಾಡಲಾಗುತ್ತಿದೆ.

ಜಕ್ಕಲಮಡುಗು ಜಲಾಶಯದ ನೀರು ಗೌರಿಬಿದನೂರು ತಾಲ್ಲೂಕಿಗೆ ಬರಬೇಕಾಗಿತ್ತು. ಆದರೆ ಅಂದಿನ ರಾಜಕಾರಣಿಗಳ ಸ್ವಹಿತಾಸಕ್ತಿಯಿಂದ ಸಂಬಂಧವಿಲ್ಲದ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಯಿತು. ಆದರೆ ಮೂಲ ಉದ್ದೇಶವೇ ಮೂಲೆ ಗುಂಪಾಗಿ ಗೌರಿಬಿದನೂರು ನೀರಿಗಾಗಿ ಪರದಾಡು ವಂತಾಗಿದೆ ಎಂದು ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸುವರು.

ಜಕ್ಕಲಮಡುಗು ಅಣೆಕಟ್ಟೆ ಎತ್ತರಿಸುವ ಮುನ್ನ ಚಿಕ್ಕಬಳ್ಳಾಪುರ ಕಣಿವೆಯಲ್ಲಿ ಸ್ವಲ್ಪ ಮಳೆ ಬಿದ್ದರೂ ಉತ್ತರ ಪಿನಾಕಿನಿ ನದಿ ನೀರು ಗೌರಿಬಿದನೂರು ಭಾಗದತ್ತ ಹರಿಯುತ್ತಿತ್ತು. ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಹಾಗೂ ಪಟ್ಟಣಕ್ಕೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲವಾಗಿತ್ತು. ಆದರೆ ಅಣೆಕಟ್ಟೆ ಮಟ್ಟ ಎತ್ತರಿಸಿದ್ದರಿಂದ ಹದಿನೈದು ವರ್ಷಗಳಿಂದ ಉತ್ತರ ಪಿನಾಕಿನಿ ನದಿ ಹರಿವು ಸ್ಥಗಿತವಾಗಿದೆ.

ಅದರ ಪರಿಣಾಮ ಕುಡಿಯುವ ನೀರಿಗೂ ಜನ ತತ್ತರಿಸುವಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಒಂದು ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ನೀರಿಲ್ಲದೆ ರೈತರು ವ್ಯವಸಾಯ ಬಿಟ್ಟು ಪಟ್ಟಣಕ್ಕೆ ಗುಳೆ ಹೋಗುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಶಾಸಕ ಡಾ.ಕೆ. ಸುಧಾಕರ್ ಮತ್ತೊಮ್ಮೆ ಜಕ್ಕಲಮಡುಗು ಅಣೆಕಟ್ಟೆ ಮಟ್ಟ ಎತ್ತರಿಸುವ ಪ್ರಸ್ತಾವ ಮಾಡಿರುವುದು ಸರಿಯಲ್ಲ. ಒಂದು ವೇಳೆ ಅಣೆಕಟ್ಟೆ ಮಟ್ಟ ಎತ್ತರಿಸಿದರೆ ಗೌರಿಬಿದನೂರು ತಾಲ್ಲೂಕಿನ ಜನರ ವಿರೋಧ ಎದುರಿಸುವುದು ಅನಿವಾರ್ಯ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಎಲ್. ಅಶ್ವತ್ಥನಾರಾಯಣ.

ಇತ್ತೀಚೆಗೆ ಬಿದ್ದ ಮಳೆಯಿಂದ ಜಕ್ಕಲಮಡುಗು ಜಲಾಶಯ ತುಂಬಿ ಶ್ರೀನಿವಾಸ ಸಾಗರ ಜಲಾಶಯ ಭರ್ತಿಯಾಗಿದೆ. ಆ ನೀರು ಮಂಚೇನಹಳ್ಳಿ ಮೂಲಕ ನಂದಿಗಾನಹಳ್ಳಿ ರಾಯರೇಖಲಹಳ್ಳಿ ವರೆಗೂ ಹರಿದಿದೆ. ಕನಿಷ್ಠ ಸಕ್ಕರೆ ಕಾರ್ಖಾನೆ ಸಮೀಪದ ಕಿಂಡಿ ಅಣೆಕಟ್ಟೆವರೆಗೂ ನದಿ ಹರಿದಿದ್ದರೆ ಪಟ್ಟಣಕ್ಕೆ ಆರು ತಿಂಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಗ್ರಾಮದ ಹಿರಿಯರಾದ ನರಸಿಂಹಯ್ಯ ಹೇಳುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT