ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಕೋನ ಸ್ಪರ್ಧೆ ಕೂತುಹಲ

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ-2013
Last Updated 10 ಏಪ್ರಿಲ್ 2013, 7:09 IST
ಅಕ್ಷರ ಗಾತ್ರ

ಚಿಂತಾಮಣಿ: ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆ ಚಟುವಟಿಕೆ ನಿಧಾನವಾಗಿ ರಂಗೇರುತ್ತಿದ್ದು, ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ತಮ್ಮ ಅಭ್ಯರ್ಥಿಗಳು ಮತ್ತು ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕಕಾಲಕ್ಕೆ ಪ್ರಚಾರ ಕಾರ್ಯ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮದೇ ಆದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇಂತಿಷ್ಟು ದಿನದಲ್ಲಿ  ಇಷ್ಟು ಪ್ರದೇಶಗಳಿಗೆ ಭೇಟಿ ನೀಡಿ, ಪ್ರಚಾರ ಕಾರ್ಯ ಪೂರ್ಣಗೊಳಿಸಬೇಕೆಂದು ಪಣತೊಟ್ಟಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಕೆಯಾಗುವ ಮುನ್ನವೇ ಪ್ರಚಾರ ಮತ್ತು ಮತಯಾಚನೆ ಆರಂಭಗೊಂಡಿರುವುದು ವಿಶೇಷ.

ಈ ಹಿಂದಿನ ಚುನಾವಣೆಗಳಂತೆಯೇ ಈ ಬಾರಿಯು ಚುನಾವಣೆ ತೀವ್ರ ಕುತೂಹಲ ಮತ್ತು ಸವಾಲಿನಿಂದ ಕೂಡಿದೆ. ಈಗಾಗಲೇ ಕಾಂಗ್ರೆಸ್‌ನಿಂದ ಎರಡೂ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಾ.ಎಂ.ಸಿ.ಸುಧಾಕರ್ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಲು ಬಯಸಿದ್ದು, ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್ ಮತ್ತು ಜೆ.ಕೆ.ಕೃಷ್ಣಾರೆಡ್ಡಿಯವರು ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಹಲವು ಹಂತಗಳ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲು ಪೂರ್ಣಪ್ರಮಾಣದ ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳು ಕಾರ್ಯಕರ್ತರೊಂದಿಗೆ ಕ್ಷೇತ್ರದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ಮೊದಲನೇ ತಲೆಮಾರಿನಲ್ಲಿ ಎಂ.ಸಿ.ಆಂಜನೇಯರೆಡ್ಡಿ ಮತ್ತು ಟಿ.ಕೆ.ಗಂಗಿರೆಡ್ಡಿ, ಎರಡನೆಯ ತಲೆಮಾರಿನಲ್ಲಿ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ, ಪ್ರಸ್ತುತ ಮೂರನೇ ತಲೆಮಾರಿನಲ್ಲಿ  ಡಾ.ಎಂ.ಸಿ.ಸುಧಾಕರ್ ಮತ್ತು ವಾಣಿಕೃಷ್ಣಾರೆಡ್ಡಿ ನಡುವೆ ಹೋರಾಟ ನಡೆದಿದೆ. ಜೆ.ಕೆ.ಕೃಷ್ಣಾರೆಡ್ಡಿ ಮೂರನೇ ಪ್ರಬಲ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹಳೆ ಇತಿಹಾಸ ಮರುಕಳಿಸುವುದೋ ಅಥವಾ ಹೊಸ ದಾಖಲೆ ಸೃಷ್ಟಿಯಾಗುವುದೋ ಕಾದು ನೋಡಬೇಕು.

ಎಂ.ಸಿ.ಆಂಜನೇರೆಡ್ಡಿ ತಮ್ಮ ಪುತ್ರ ಎ.ಚೌಡರೆಡ್ಡಿ ಅವರನ್ನು, ಟಿ.ಕೆ.ಗಂಗಿರೆಡ್ಡಿ ತಮ್ಮ ಬಾವಮೈದುನ ಕೆ.ಎಂ.ಕೃಷ್ಣಾರೆಡ್ಡಿಯವರನ್ನು ರಾಜಕೀಯದಲ್ಲಿ ಬೆಳೆಸಿ ವಾರಸುದಾರರನ್ನಾಗಿ ಮಾಡಿದ್ದರು. ಚೌಡರೆಡ್ಡಿ ತಮ್ಮ ಪುತ್ರ ಡಾ.ಸುಧಾಕರ್‌ಗೆ ರಾಜಕೀಯ ವಹಿಸಿ ತಾವು ನಿವೃತ್ತಿಯಾದರು.

ಕೆ.ಎಂ.ಕೃಷ್ಣಾರೆಡ್ಡಿ ಮಾತ್ರ ಯಾರನ್ನು ವಾರಸುದಾರರನ್ನಾಗಿ ಮಾಡದೇ ಕೊನೆಯವರೆಗೂ ತಾವೇ ಚುನಾವಣೆಯಲ್ಲಿ ಸ್ಪರ್ಧಿಸಿದರು. ಕಳೆದ ವರ್ಷ ಅವರು ನಿಧನರಾದ ಹಿನ್ನೆಲೆಯಲ್ಲಿ ಅವರ ಪುತ್ರಿ ವಾಣಿಕೃಷ್ಣಾರೆಡ್ಡಿ ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಆಂಜನೇಯರೆಡ್ಡಿ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಈಗಾಗಲೇ ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದಾರೆ.  1972ರಲ್ಲಿ ಕಾಂಗ್ರೆಸ್ ವಿ.ಸೀತಪ್ಪನವರಿಗೆ ಟಿಕೆಟ್ ನೀಡಿದಾಗ, ಚೌಡರೆಡ್ಡಿ ಸ್ವತಂತವಾಗಿ ಸ್ಫರ್ಧಿಸಿ, ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಚೌಡರೆಡ್ಡಿ ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 15 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಟಿಕೆಟ್‌ಗಾಗಿ ಕಾಂಗ್ರೆಸ್‌ಗೆ ಅರ್ಜಿ ಸಲ್ಲಿಸದ ಡಾ. ಎಂ.ಸಿ.ಸುಧಾಕರ್ ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಅವರ ಕುಟುಂಬದ ಗೆಲುವಿನ ಪರಂಪರೆ ಮುಂದುವರಿಯುವುದೇ ಅಥವಾ ಏನಾಗುವುದೋ ಭವಿಷ್ಯವೇ ಉತ್ತರಿಸಬೇಕು.

ಚೌಡರೆಡ್ಡಿಯವರು ಸತತವಾಗಿ ಮೂರು ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಲ್ಲದೇ ಒಟ್ಟು 5 ಬಾರಿ ವಿಜೇತರಾಗಿ ದಾಖಲೆ ನಿರ್ಮಿಸಿದ್ದಾರೆ. ಅವರ ಪುತ್ರ ಡಾ. ಎಂ.ಸಿ.ಸುಧಾಕರ್ ಎರಡು ಬಾರಿ ಗೆದ್ದಿದ್ದು, ಮೂರನೇ  ಬಾರಿ ಸ್ಪರ್ಧೆಯಲ್ಲಿದ್ದಾರೆ. ಅವರ ತಾತ ಎಂ.ಸಿ.ಆಂಜನೇರೆಡ್ಡಿ 1967ರಲ್ಲಿ ಹಾಗೂ 1975 ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು.

ಮತ್ತೊಂದು ಕುಟುಂಬದ ವಾಣಿಕೃಷ್ಣಾರೆಡ್ಡಿ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದಾರೆ. ಕ್ಷೇತ್ರದಲ್ಲಿ ಇದೇ ಪ್ರಥಮ ಮಹಿಳಾ ಅಭ್ಯರ್ಥಿ ಸ್ಪರ್ಧೆಯಲ್ಲಿರುವುದು ವಿಶೇಷ. ಜೆಡಿಎಸ್‌ನಲ್ಲಿದ್ದು, ಈಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಬಿ.ಫಾರಂ ರಾಜಕೀಯದಿಂದ ಬೇಸತ್ತು ಅವರು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಶಾಸಕ ಡಾ.ಎಂ.ಸಿ.ಸುಧಾಕರ್ ತಾವು ಮತ್ತು ತಮ್ಮ ಕುಟುಂಬ ಮಾಡಿರುವ ಅಭಿವೃದ್ದಿಯ ಹೆಸರಿನಲ್ಲಿ ಮತ ಯಾಚಿಸಿದರೆ, ವಾಣಿಕೃಷ್ಣಾರೆಡ್ಡಿ ತಮ್ಮ ತಂದೆ ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆ ಮತ್ತು ಕಾಂಗ್ರೆಸ್ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಜೆ.ಕೆ.ಕೃಷ್ಣಾರೆಡ್ಡಿ ತಾವು ಮಾಡಿರುವ ಸಮಾಜಸೇವೆ, ದಾನ-ಧರ್ಮಗಳಿಂದ ಮತ್ತು ಕುಮಾರಸ್ವಾಮಿ ಸರ್ಕಾರದ ಸಾಧನೆಗಳಿಂದ ಮತ ಕೇಳುತ್ತಿದ್ದಾರೆ. ಯಾರು ವಿಜಯಮಾಲೆ ಹಾಕಿಕೊಳ್ಳುವುರೋ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT