ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದತ್ತ ಮುಖ ಮಾಡಿದ ಗ್ರಾಮಸ್ಥರು

Last Updated 13 ಫೆಬ್ರುವರಿ 2011, 11:00 IST
ಅಕ್ಷರ ಗಾತ್ರ

 ಚಿಕ್ಕಬಳ್ಳಾಪುರ: ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ಸ್ವಚ್ಛತಾ ಅಭಿಯಾನದಲ್ಲಿ ತೊಡಗಿಕೊಂಡಿದ್ದ ಗ್ರಾಮಸ್ಥರು ಈಗ ನಗರಪ್ರದೇಶದತ್ತ ಮುಖ ಮಾಡಿದ್ದಾರೆ.  
  ನಗರದಲ್ಲಿ ಹೆಚ್ಚುತ್ತಿರುವ ದೂಳು- ಮಾಲಿನ್ಯ ತಡೆಗಟ್ಟಲು ಅವರು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಯಲುವಹಳ್ಳಿ ಗ್ರಾಮದ ಒಂದು ತಂಡ ರಸ್ತೆಗಳನ್ನು ಸ್ವಚ್ಛಗೊಳಿಸುವ- ಮಣ್ಣು ತೆಗೆಯುವ ಕಾರ್ಯದಲ್ಲಿ ನಿರತವಾಗಿದ್ದರೆ ಇನ್ನೊಂದು ತಂಡ ಮುಖ ಗವುಸುಗಳನ್ನು (ಮಾಸ್ಕ್) ಹಂಚುವ ಮೂಲಕ ದೂಳಿಗೆ ಪ್ರತಿರೋಧ ಒಡ್ಡಲು ಯತ್ನಿಸುತ್ತಿದೆ.

ಶನಿವಾರ ಬೆಳಿಗ್ಗೆ ಗ್ರಾಮದ ಎರಡೂ ತಂಡಗಳ ಯುವಕರು ದೂಳು-ಮಾಲಿನ್ಯ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡರು. ಕಳೆದ ಬಾರಿಯಂತೆ ಈ ಶನಿವಾರವೂ ಯಲುವಹಳ್ಳಿ ಸೊಣ್ಣೇಗೌಡರ ನೇತೃತ್ವದಲ್ಲಿ ಯುವಕರು ನಸುಕಿನ 5 ಗಂಟೆಯಿಂದ 8 ಗಂಟೆಯವರೆಗೆ  ನಗರದ ಪ್ರವಾಸಿ ಮಂದಿರದ ಎದುರು ಸೇರಿಕೊಂಡು ಸ್ವಚ್ಛತಾ ಅಭಿಯಾನ ಕೈಗೊಂಡರು. ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಮತ್ತು ಪ್ರವಾಸಿ ಮಂದಿರ ಎದುರಿನ ರಸ್ತೆಯ ಮೇಲಿದ್ದ ಮಣ್ಣು ತೆಗೆದ ಯುವಕರು ಒಂದು ಟ್ರ್ಯಾಕ್ಟರ್ ಲೋಡು ಆಗುವಷ್ಟು ಮಣ್ಣು ತೆಗೆದರು. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಪೊರಕೆ, ಕಬ್ಬಿಣದ ಸಲಾಕೆ ಮುಂತಾದವುಗಳ ನೆರವಿನಿಂದ ಮಣ್ಣನ್ನು ತೆಗೆದರು. ಕಳೆದ ಬಾರಿ ಅವರು ಟಿ.ಚೆನ್ನಯ್ಯ ಉದ್ಯಾನ ಮುಂದಿನ ರಸ್ತೆಯನ್ನು ಶುಚಿಗೊಳಿಸಿ ನೀರು ಹಾಕಿದ್ದರು.

ಎಂ.ಜಗೀಶ್, ಡಿ.ವೆಂಕಟರಾಜು, ಎನ್. ರವಿಕುಮಾರ್, ಎಂ.ಆನಂದ್, ಕೆ.ಆನಂದ್, ನವೀನ್, ಕಿಶೋರ್, ಪಿ.ಮಂಜುನಾಥ್, ಎನ್.ಮಂಜುನಾಥ್, ವಿ.ಮುನಿರಾಜು, ಕೆ.ಮುನಿರಾಜು, ಜಗದೀಪ್, ಮುನೇಗೌಡ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಮತ್ತೊಬ್ಬ ಮುಖಂಡ ಯಲುವಹಳ್ಳಿ ರಮೇಶ್ ಅವರು ಕೆಲ ಗ್ರಾಮಸ್ಥರೊಂದಿಗೆ ಸೇರಿಕೊಂಡು ಶಿಡ್ಲಘಟ್ಟ ವೃತ್ತದ ಬಳಿ ಸಾರ್ವಜನಿಕರಿಗೆ ಮಾಸ್ಕ್‌ಗಳನ್ನು ವಿತರಿಸಿದರು. ದೂಳು-ಮಾಲಿನ್ಯದಿಂದ ಪಾರಾಗಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದ ಅವರು, ‘ದೂಳು-ಮಾಲಿನ್ಯವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ’ ಎಂದರು.
 
ಪೊಲೀಸ್ ಸಿಬ್ಬಂದಿಗಳಿಗೆ, ವೃದ್ಧರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಎಲ್ಲರಿಗೂ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡ ಎಂ.ಎಸ್.ಶ್ರೀಧರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT