ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯ ಹೊಸ ಕೊಠಡಿಗಳು ಕೊಟ್ಟಿಗೆಯಾದವು! : ಶಿಥಿಲ ಕಟ್ಟಡದಲ್ಲಿ ಮಕ್ಕಳಿಗೆ ಪಾಠ

ಧರ್ಮಛತ್ರಗಳಾದ ನೂತನ ಕಟ್ಟಡಗಳು
Last Updated 8 ಜೂನ್ 2017, 6:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಶ್ರೀರಾಮಪುರದಲ್ಲಿ ಊರ ಹೊರವಲಯದಲ್ಲಿ ನೆಡುತೋಪಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಹೊಸ ಕೊಠಡಿಗಳು ಕಳೆದ ನಾಲ್ಕು ವರ್ಷಗಳಿಂದ ಪಾಳು ಬಿದ್ದಿದ್ದು, ಆ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರು ಠಿಕಾಣಿ ಹೂಡಿ, ಕೊಠಡಿಗಳನ್ನು ಕೊಟ್ಟಿಗೆಯಾಗಿ ಪರಿವರ್ತಿಸಿದ್ದಾರೆ!

ಒಂದೆಡೆ ಹೊಸ ಕಟ್ಟಡಗಳು ಧರ್ಮಛತ್ರಗಳಾಗಿ ಬದಲಾದರೆ, ಇನ್ನೊಂದೆಡೆ ಊರಿನಲ್ಲಿರುವ ಶಾಲೆಯಲ್ಲಿ ಶಿಥಿಲಗೊಂಡ ಕಟ್ಟಡದಲ್ಲಿಯೇ ಮಕ್ಕಳ ಪಾಠ, ಪ್ರವಚನ ಮುಂದುವರಿದಿದೆ. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದ ಸರ್ಕಾರಿ ಸ್ವತ್ತು ದುರ್ಬಳಕೆಯಾಗುವ ಜತೆಗೆ ಅಪಾಯದ ಕೆಳಗೆ ಮಕ್ಕಳು ದಿನದೂಡುತ್ತಿರುವುದು ಕಳವಳಕಾರಿ ಸಂಗತಿ.

ಮಕ್ಕಳ ಕಲರವದಿಂದ ತುಂಬಿರಬೇಕಾದ ಕೊಠಡಿಗಳು ಕಾರ್ಮಿಕರು ಕಟ್ಟಡದಲ್ಲಿಯೇ ಹೊತ್ತಿಸಿದ ಒಲೆಯ ಹೊಗೆಯಿಂದಾಗಿ ಕಪ್ಪು ಬಣ್ಣಕ್ಕೆ ತಿರುಗಿ, ಅಧ್ವಾನಗೊಂಡ ಸ್ಥಿತಿಯಲ್ಲಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂಬ ಕೂಗುಗಳು ಕೇಳಿ ಬರುವ ನಡುವೆಯೇ, ಸರ್ಕಾರ ಒದಗಿಸಿದ ಕಟ್ಟಡದಂತಹ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳದೆ ಇರುವುದು ಶಿಕ್ಷಣ ಇಲಾಖೆ ವೈರುಧ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ಮರಿಯಪ್ಪ ಅವರನ್ನು ಪ್ರಶ್ನಿಸಿದರೆ, ‘ಶಾಲೆಗೆ ಊರ ಹೊರಗೆ ಹೊಸ ಕಟ್ಟಡಗಳನ್ನು ಕಟ್ಟಿ 10 ವರ್ಷಗಳಾಗಿವೆ. ವರ್ಷದಿಂದ ವರ್ಷಕ್ಕೆ ಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸುಮಾರು ನಾಲ್ಕು ವರ್ಷಗಳಿಂದ ಆ ಎರಡು ಕಟ್ಟಡಗಳನ್ನು ಬಳಕೆ ಮಾಡಿಕೊಂಡಿಲ್ಲ’ ಎನ್ನುತ್ತಾರೆ.

‘ಸದ್ಯ ಊರಿನಲ್ಲಿರುವ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 80 ವಿದ್ಯಾರ್ಥಿಗಳಿದ್ದಾರೆ. ಆರು ಕೊಠಡಿಗಳು, ನಾಲ್ಕು ಶಿಕ್ಷಕರಿದ್ದೇವೆ. ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಇಲ್ಲಿಯೇ ಇರುವುದರಿಂದ ಇಲ್ಲಿಯೇ ತರಗತಿಗಳನ್ನು ನಡೆಸುತ್ತಿದ್ದೇವೆ. ಹೊಸ ಕಟ್ಟಡಗಳು ತಕ್ಷಣಕ್ಕೆ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಹೊಸ ಕೊಠಡಿಗಳು ಇರುವಾಗ ಶಿಥಿಲಗೊಂಡ ಕೊಠಡಿಗಳಲ್ಲಿ ಪಾಠ ಮಾಡುವುದು ಅಪಾಯವಲ್ಲವೆ’ ಎಂದು ಪ್ರಶ್ನಿಸಿದಾಗ, ‘ಹೌದು ಶಾಲೆಯ ಆರು ಕೊಠಡಿಗಳ ಪೈಕಿ ಎರಡು ಕೊಠಡಿಗಳು ಶಿಥಿಲಗೊಂಡಿವೆ. ಅವುಗಳನ್ನು ಕೆಡವಲು ಮೇಲಾಧಿಕಾರಿಗಳಿಂದ ಆದೇಶ ಕೂಡ ಬಂದಿದೆ. ಈ ಬಗ್ಗೆ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಯಲ್ಲಿ (ಎಸ್‌ಡಿಎಂಸಿ) ಪ್ರಸ್ತಾಪಿಸಿ, ಅನುಮೋದನೆ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎಂದರು.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಅಶ್ವತ್ಥರೆಡ್ಡಿ ಅವರನ್ನು ಪ್ರಶ್ನಿಸಿದರೆ, ‘ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಶ್ರೀರಾಮಪುರಕ್ಕೆ ಸ್ವತಃ ನಾನೇ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸುತ್ತೇನೆ’ ಎಂದು ಅವರು ಹೇಳಿದರು.

**

ಇದಕ್ಕೆಲ್ಲ ಯಾರು ಹೊಣೆ?
‘ಊರಿನಲ್ಲಿ ಈಗಾಗಲೇ ಶಾಲೆಗೆ ಸೇರಿದ 4 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಹೊಸ ಕಟ್ಟಡಗಳು ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದೆ, ಸಿಕ್ಕ ಸಿಕ್ಕವರ ಉಪಯೋಗಕ್ಕೆ ಬಳಕೆಯಾಗಿ ಧರ್ಮಛತ್ರಗಳಾಗಿವೆ. ಇದಕ್ಕೆಲ್ಲ ಯಾರು ಹೊಣೆ? ಶಾಲೆಯ ಆಸ್ತಿ ರಕ್ಷಣೆ ಮಾಡಿಕೊಳ್ಳಬೇಕಾದುದು ಶಿಕ್ಷಕರ ಜವಾಬ್ದಾರಿಯಲ್ಲವೆ? ಜಿಲ್ಲಾಡಳಿತ ನಿದ್ದೆ ಮಾಡುತ್ತಿರುವ ಕಾರಣಕ್ಕೆ ಇಷ್ಟೆಲ್ಲ ಅವಾಂತರಗಳು ನಡೆಯುತ್ತಿವೆ’ ಎಂದು ಶ್ರೀರಾಮಪುರದ ನಿವಾಸಿ ಅಶೋಕ್‌ ಬೇಸರ ವ್ಯಕ್ತಪಡಿಸಿದರು.

**

ಭೇಟಿ ಬಳಿಕ ಕಾರ್ಮಿಕರು ಖಾಲಿ!
‘ಪ್ರಜಾವಾಣಿ’ ವರದಿಗಾರ ದುರುಪಯೋಗವಾಗುತ್ತಿದ್ದ ಶಾಲಾ ಕಟ್ಟಡಗಳಿಗೆ ಭೇಟಿ ನೀಡಿ, ಆ ಕುರಿತು ಶಿಕ್ಷಕರಿಂದ ಮಾಹಿತಿ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಶಾಲೆಯ ಮುಖ್ಯ ಶಿಕ್ಷಕ ಮರಿಯಪ್ಪ ಎರಡು ಕಟ್ಟಡಗಳಲ್ಲಿ ಬೀಡು ಬಿಟ್ಟಿದ್ದ ಕಾರ್ಮಿಕರನ್ನು ಅಲ್ಲಿಂದ ಖಾಲಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

**

ಶಾಲೆಯ ಆಸ್ತಿ ಕಬಳಿಸಿದರೂ, ಕೊಠಡಿಗಳು ಕೊಟ್ಟಿಗೆಯಾದರೂ ಶಿಕ್ಷಕರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಅವರ ಸ್ವಂತ ಆಸ್ತಿಯಲ್ಲಿ ಹೀಗಾದರೆ ಸುಮ್ಮನಿರುತ್ತಾರಾ?
–ರಾಮಾಂಜನಪ್ಪ, ಶ್ರೀರಾಮಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT