ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ದಾಖಲೆಯ 3,077 ಪ್ರಕರಣ ವಿಲೇವಾರಿ

ಚಿಕ್ಕಮಗಳೂರು ಉಪ ವಿಭಾಗ ಮುಂಚೂಣಿ: 63 ಪ್ರಕರಣ ಮಾತ್ರ ಬಾಕಿ
Last Updated 22 ಸೆಪ್ಟೆಂಬರ್ 2021, 3:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಕೋರ್ಟ್‌ ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ದಾಖಲಾಗಿದ್ದ 3,186 ಪ್ರಕರಣಗಳ ಪೈಕಿ ಈವರೆಗೆ 3,077 ವಿಲೇವಾರಿಯಾಗಿವೆ.

ಪ್ರಕರಣಗಳ ತ್ವರಿತ ವಿಲೇವಾರಿಗೆ ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜ್‌ ಅವರು ಆದ್ಯ ಗಮನ ಹರಿಸಿದ್ದಾರೆ. ಸುಧಾರಣೆಗೆ ಒತ್ತು ನೀಡಿದ್ದಾರೆ. ಕಂದಾಯ ನ್ಯಾಯಾಲಯ ಪ್ರಕರಣ ಮಾನಿಟರಿಂಗ್‌ ವ್ಯವಸ್ಥೆ (ಆರ್‌ಸಿಸಿಎಂಎಸ್‌) ತಂತ್ರಾಂಶದಲ್ಲಿ 3,077 ಪ್ರಕರಣಗಳ ವಿಲೇವಾರಿ ವಿವರ ಅಪ್‌ಲೋಡ್‌ ಆಗಿದೆ. 46 ಪ್ರಕರಣಗಳು ತಿರಸ್ಕೃತ ವಾಗಿವೆ. 63 ಮಾತ್ರ ಬಾಕಿ ಇವೆ.

‘ಮ್ಯುಟೇಷನ್’, ‘ತಹಶೀಲ್ದಾರ್‌ ಆದೇಶ’, ‘ಬಗರ್‌ ಹುಕುಂ ಸಮಿತಿ ನಿರ್ಣಯ’, ಪಿಟಿಸಿಎಲ್‌ (ಪರಿಶಿಷ್ಟ ಜಾತಿ – ಪಂಗಡಗಳ ಭೂ ಪರಭಾರೆ ನಿಷೇಧ) ಕಾಯ್ದೆ ಇತ್ಯಾದಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಅಲೆದಾಡಿ ಬೇಸತ್ತಿದ್ದವರು ಈಗ ಪ್ರಕರಣ ವೇಗವಾಗಿ ವಿಲೇವಾರಿಯಾಗಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.

‌‘3,186 ಪ್ರಕರಣಗಳಲ್ಲಿ ಮ್ಯುಟೇಷನ್‌ಗೆ ಸಂಬಂಧಿಸಿದವು 1600ಕ್ಕೂ ಹೆಚ್ಚು, ಬಗರ್‌ಹುಕುಂಗೆ ಸಂಬಂಧಿಸಿದವು 600ಕ್ಕೂ ಹೆಚ್ಚು, ತಹಶೀಲ್ದಾರ್‌ ಆದೇಶಕ್ಕೆ ಸಂಬಂಧಿಸಿದವು 400ಕ್ಕೂ ಹೆಚ್ಚು, ಪಿಟಿಸಿಎಲ್‌– 50ಕ್ಕೂ ಹೆಚ್ಚು ಇದ್ದವು. ಇದೇ 22, 24 ಮತ್ತು 27ರಂದು ಬಾಕಿ ಪ್ರಕರಣಗಳ ವಿಚಾರಣೆ ಇದೆ’ ಎಂದು ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಆನ್‌ಲೈನ್‌ ಪೋರ್ಟಲ್‌ನಲ್ಲಿ ಪ್ರಕರಣಗಳ ವಿವರ ದಾಖಲು, ಪ್ರಕರಣದ ವಿಚಾರಣೆ ನಿಗದಿಯಾಗಿರುವ ದಿನದ ಮಾಹಿತಿ ಸಂದೇಶವನ್ನು ಸಂಬಂಧ ಪಟ್ಟವರ ಮೊಬೈಲ್‌ ಫೋನ್‌ಗೆ ರವಾನಿಸುವುದು, ಕಾಲಕಾಲಕ್ಕೆ ಪ್ರಕರಣದ ವಿವರ ಅಪ್‌ಡೇಟ್‌ ವ್ಯವಸ್ಥೆ ಮೊದಲಾದವನ್ನು ಕಟ್ಟುನಿಟ್ಟಾಗಿ ಕಾರ್ಯಗತ ಗೊಳಿಸಿರುವುದು, ಪಾರದರ್ಶಕತೆಗೆ ಒತ್ತು ನೀಡಿರುವುದು, ಇವೆಲ್ಲವೂ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಿದೆ.

‘ವಿಳಂಬಕ್ಕೆ ಅವಕಾಶ ನೀಡಲ್ಲ’

ರೈತರಿಂದ ಅಂಚೆಚೀಟಿ ಶುಲ್ಕ ವಸೂಲಿ ಮಾಡವುದಕ್ಕೆ ಕಡಿವಾಣ ಹಾಕಲಾಗಿದೆ. ನೋಟಿಸ್‌ ಪತ್ರ ಮುದ್ದಾಂ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಕರಣ ಪರಿಶೀಲಿಸಿ ಎರಡು ಅಥವಾ ಮೂರು ಬಾರಿ ವಿಚಾರಣೆ ನಡೆಸಲಾಗುವುದು. ಯಾವುದೇ ಪ್ರಕರಣದ ವಿಲೇವಾರಿಗೆ ಗರಿಷ್ಠ 5 ವಾರ ಸಾಕು. ವಿಳಂಬಕ್ಕೆ ಅವಕಾಶ ನೀಡಲ್ಲ.

-ಡಾ.ಎಚ್‌.ಎಲ್‌. ನಾಗರಾಜ್‌,ಉಪ ವಿಭಾಗಾಧಿಕಾರಿ, ಚಿಕ್ಕಮಗಳೂರು ಉಪವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT