ಬುಧವಾರ, ಡಿಸೆಂಬರ್ 11, 2019
25 °C

₹ 4.5 ಕೋಟಿ ಉಳಿತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 4.5 ಕೋಟಿ ಉಳಿತಾಯ

ಚಿಕ್ಕಮಗಳೂರು: 2018–19ನೇ ಸಾಲಿನಲ್ಲಿ ನಗರಸಭೆಗೆ ವಿವಿಧ ಮೂಲಗಳಿಂದ ಒಟ್ಟು ₹ 81.77 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ₹ 77.27 ಕೋಟಿ ವೆಚ್ಚ ಅಂದಾಜು ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್‌ ಹೇಳಿದರು.

ಬುಧವಾರ ಬಜೆಟ್‌ ಮಂಡಿಸಿದ ಅವರು, ಪ್ರಾರಂಭಿಕ ಶಿಲ್ಕು ₹ 16.40 ಕೋಟಿ ಇದೆ. ಆದಾಯ 65.37 ಕೋಟಿ, ಪ್ರಾರಂಭಿಕ ಶಿಲ್ಕು ಒಳಗೊಂಡಂತೆ ಒಟ್ಟು ಆದಾಯ ₹ 81.77 ಕೋಟಿ ನಿರೀಕ್ಷಿಸಲಾಗಿದೆ. ಒಟ್ಟಾರೆ ₹ 4.5 ಕೋಟಿ ಉಳಿತಾಯ ಬಜೆಟ್‌ ಇದಾಗಿದೆ. ರಾಜಸ್ವ, ಬಂಡವಾಳ ಮತ್ತು ವಿಶೇಷ ಖಾತೆ ಹಂತಗಳಲ್ಲಿ ಬಜೆಟ್‌ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಮೂರು ವರ್ಷಗಳಿಂದ ನಗರಸಭೆಯ ಆರ್ಥಿಕ ಸ್ಥಿತಿ ಸದೃಢವಾಗಿದೆ. ಆದಾಯ ಕ್ರೋಢೀಕರಣ ವೃದ್ಧಿಸಿದೆ. ಆದಾಯದ ಮೂಲಗಳನ್ನು ಹೆಚ್ಚಿಸಲು ಕಟ್ಟಡ ರಚನೆ ಪರವಾನಗಿ, ವ್ಯಾಪಾರ ಪರವಾನಗಿ, ಒಳಚರಂಡಿ ಸಂಪರ್ಕ, ವಾಹನ ನಿಲುಗಡೆ ಶುಲ್ಕ, ನಲ್ಲಿ ಸಂಪರ್ಕ, ಜಾಹೀರಾತು ಅನುಮತಿ, ನಿರಕ್ಷೇಪಣಾ ಪತ್ರ, ದೃಢೀಕರಣ ಶುಲ್ಕಗಳು, ಆಸ್ತಿ ತೆರಿಗೆ, ನಗರದಲ್ಲಿನ ಮೊಬೈಲ್‌ ಗೋಪುರಗಳ ಸಮೀಕ್ಷೆ ಮಾಡಿ ವಾರ್ಷಿಕ ದರ ನಿಗದಿ ಮಾಡುವ ನಗರಸಭೆ ಆದಾಯವನ್ನು ಶೇ 20 ಹೆಚ್ಚಿಸಲು ಕ್ರಮ ವಹಿಸಲಾಗುವುದು. ಈ ಅಂಶವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದರು.

2017–18ನೇ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಪೈಕಿ ಶೇ 65 ಯೋಜನೆಗಳು ಪೂರ್ಣಗೊಂಡಿವೆ. ಉಳಿಕೆಯವು ಪ್ರಗತಿಯಲ್ಲಿವೆ ಎಂದು ಹೇಳಿದರು.

ಕಾಂಗ್ರೆಸ್‌ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ‘ಹಿಂದಿನ ಬಜೆಟ್‌ನ ಶೇ 60 ಅಂಶಗಳು ಪುನರಾವರ್ತನೆಯಾಗಿವೆ. ಫುಡ್‌ ಕೋರ್ಟ್‌ ನಿರ್ಮಾಣ 4 ನಾಲ್ಕು ವರ್ಷಗಳಿಂದ ಪ್ರಸ್ತಾಪವಾಗಿದೆ. ಈವರೆಗೆ ನಿರ್ಮಾಣ ಮಾಡಿಲ್ಲ. ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ನಗರದಲ್ಲಿನ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಮೂರು ವರ್ಷಗಳ ಹಿಂದೆ ನಿರ್ಣಯ ಮಾಡಲಾಗಿತ್ತು. ಹಳೆಯ ವಾಹನಗಳನ್ನು ವಿಲೇವಾರಿ ಮಾಡಿ, ಹೊಸ ವಾಹನಗಳ ಖರೀದಿಗೆ ವ್ಯವಸ್ಥೆ ಮಾಡಬೇಕು. ಈ ಅಂಶಗಳನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು’ ಎಂದರು.

ಕಾಂಗ್ರೆಸ್‌ ಸದಸ್ಯ ರೂಬೆನ್‌ ಮೊಸೆಸ್‌ ಮಾತನಾಡಿ, ‘ವಿವಿಧ ಶುಲ್ಕ ಹೆಚ್ಚಳ ನಿಟ್ಟಿನಲ್ಲಿ ಸದಸ್ಯರೆಲ್ಲರ ಸಲಹೆ ಪಡೆಯಬೇಕು. ಪೌರಕಾರ್ಮಿಕರಿಗೆ ವಸತಿ ನೀಡಲು ಯೋಜನೆ ರೂಪಿಸಿದರೆ ಸಾಲದು. ಈ ಅದನ್ನು ಕಾರ್ಯಗತಗೊಳಿಸಬೇಕು’ ಎಂದರು.

ಬಿಜೆಪಿ ಸದಸ್ಯ ಎಚ್‌.ಡಿ.ತಮ್ಮಯ್ಯ ಮಾತನಾಡಿ, ‘ನಗರಸಭೆ ಆಸ್ತಿ ಒತ್ತುವರಿ ತೆರವು ಮಾಡಿಸಬೇಕು. ಸರ್ಕಾರಿ ಆಸ್ತಿ ಕಬಳಿಸಲು ಬಿಡಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು’ ಎಂದರು.

ವಿವಿಧ ಮೂಲಗಳಿಂದ ಆದಾಯ ನಿರೀಕ್ಷೆ

ರಾಜಸ್ವ ಖಾತೆ

ಆಸ್ತಿ ತೆರಿಗೆ ₹8 ಕೋಟಿ

ಕಟ್ಟಡ ಪರವಾನಗಿ ₹50 ಲಕ್ಷ

ವಾಣಿಜ್ಯ ಮಳಿಗೆ ಬಾಡಿಗೆ ₹1.70 ಕೋಟಿ

ಅಭಿವೃದ್ಧಿ ಶುಲ್ಕ ₹1 ಕೋಟಿ

ವ್ಯಾಪಾರ ಪರವಾನಗಿ ಶುಲ್ಕ ₹60 ಲಕ್ಷ

ಪಾರ್ಕಿಂಗ್‌ ಶುಲ್ಕ ₹40 ಲಕ್ಷ

ಖಾತೆ ಬದಲಾವಣೆ ಶುಲ್ಕ ₹40 ಲಕ್ಷ

ನಿರುಪಯುಕ್ತ ಸಾಮಗ್ರಿ ಮಾರಾಟ ₹5 ಲಕ್ಷ

ನೀರು, ಒಳಚರಂಡಿ ಶುಲ್ಕ ₹2.20 ಕೋಟಿ

ಎಸ್‌ಎಫ್‌ಸಿ ವೇತನ ನಿಧಿ ಅನುದಾನ 6.05 ಕೋಟಿ

ವಿದ್ಯುತ್‌ ಅನುದಾನ ₹6.60 ಕೋಟಿ

ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ ₹6 ಕೋಟಿ

ಎಂ.ಜಿ, ಐ.ಜಿ, ಅಂಬೇಡ್ಕರ್‌ ರಸ್ತೆ ಪಾರ್ಕಿಂಗ್ ಶುಲ್ಕ ₹40 ಲಕ್ಷ

(ಈ ರಸ್ತೆಗಳಲ್ಲಿ ಶುಲ್ಕ ವಿಧಿಸಲು ಚಿಂತನೆ)

ಬಂಡವಾಳ ಖಾತೆ

ನಗರಸಭೆ ನಿವೇಶನ ಹರಾಜು ಮೂಲಕ ಮಾರಾಟ ₹ 2 ಕೋಟಿ

ವಿಶೇಷ ಖಾತೆ

ಅಮೃತ್‌ ಯೋಜನೆ ₹14.25 ಕೋಟಿ

14ನೇ ಹಣಕಾಸು ಅನುದಾನ ₹5.50 ಕೋಟಿ

ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ, ಇತರೆ ₹10 ಲಕ್ಷ

ನಲ್ಮ್‌ ಯೋಜನೆ ₹1 ಕೋಟಿ

ಉದ್ದೇಶಿತ ಕಾರ್ಯಕ್ರಮಗಳು

ರಸ್ತೆ, ಚರಂಡಿ, ಕುಡಿಯುವ ನೀರು ಯೋಜನೆಗಳಿಗೆ ₹ 6 ಕೋಟಿ ಮೀಸಲು

ಸಂಘಸಂಸ್ಥೆಗಳು, ಶಾಲಾಕಾಲೇಜು ಟೂರ್ನಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರವು ನೀಡಲು ₹ 4 ಲಕ್ಷ ಮೀಸಲು

ಅಮೃತ್‌ ಯೋಜನೆಯಡಿ ನಗರದಲ್ಲಿ 24X7 ನೀರು ಪೂರೈಕೆಗೆ ಅನುದಾನ ಮಂಜೂರು; ಈ ಸಾಲಿಗೆ ₹ 14.25 ಕೋಟಿ ಅನುದಾನ ನಿಗದಿ

ಕಸ ನಿರ್ವಹಣೆ: ವಿವಿಧ ಉಪಕರಣ, ಕಸವಿಂಗಡಣೆ ಯಂತ್ರ ಖರೀದಿ, ಕಸ ವಿಂಗಡಣೆಗೆ ಪ್ರತಿ ಮನೆಗೆ ‘ಹಸಿರು’, ‘ಹಳದಿ’ ಟಬ್‌ ವಿತರಣೆಗೆ ಯೋಜನೆ, ಏಪ್ರಿಲ್‌ 1 ರಿಂದ ಕಾರ್ಯಗತ

ಎಲ್ಲ ವಾರ್ಡ್‌ಗಳಲ್ಲೂ ಅಡ್ಡರಸ್ತೆ ನಾಮಫಲಕ ಅಳವಡಿಕೆ

ನಗರದ ಹೊರವಲಯಗಳಲ್ಲಿ ಪಾವತಿ ಶೌಚಾಲಯ ನಿರ್ಮಾಣ

ಎಂ.ಜಿ ರಸ್ತೆಯ ಬದಿಗಳಲ್ಲಿ ಹೂಕುಂಡ ಮತ್ತು ಕಸದ ಡಬ್ಬಿಗಳನ್ನು ಇಡಲು ವ್ಯವಸ್ಥೆ

ಆಧುನಿಕ ಚಿತಾಗಾರ ಮತ್ತು ಕಸಾಯಿ ಖಾನೆ ನಿರ್ಮಾಣ

ನಗರದ ಸೌಂದರ್ಯ ಹೆಚ್ಚಿಸಲು ಅಮೃತ್‌ ಯೋಜನೆಯಡಿ ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ; ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಕೆ

ನಗರಸಭಾ ವ್ಯಾಪ್ತಿಯಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ, ಶೌಚಾಲಯಗಳ ನವೀಕರಣ

ನಲ್ಮ್ ಯೋಜನೆಯಡಿ ಬಡವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ವಿತರಣೆ

ಬಡ ಕುಟುಂಬದ ಮಹಿಳೆಯರಿಗೆ ಸ್ವ ಉದ್ಯೋಗಪೂರಕ ತರಬೇತಿ ಕಾರ್ಯಕ್ರಮಗಳು

ವಸತಿರಹಿತರಿಗೆ ರಾತ್ರಿ ತಂಗುದಾಣ ನಿರ್ಮಾಣ

ನಗರಸಭಾ ವ್ಯಾಪ್ತಿಯಲ್ಲಿ ಫುಡ್‌ ಕೋರ್ಟ್‌ ನಿರ್ಮಾಣ

ಹಿಂದೂ ಮುಸಾಫಿರ್‌ ಖಾನ ಮತ್ತು ಹಳೆ ತರಕಾರಿ ಮಾರುಕಟ್ಟೆ ಜಾಗಗಳಲ್ಲಿ ಮಾದರಿ ಸಂಕೀರ್ಣ ನಿರ್ಮಾಣ

ಶೇ 3 ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಸೌಲಭ್ಯ

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1511 ಫಲಾನುಭವಿಗಳಿಗೆ ಜಿ+2ಮಾದರಿ ವಸತಿ ಸಮುಚ್ಚಯ

ಖಾಲಿ ನಿವೇಶನಗಳಲ್ಲಿ ಮಾಲೀಕರು ಸ್ವಚ್ಛತೆ ಕಾಪಾಡದಿದ್ದರೆ ₹ 5,000 ವರೆಗೆ ದಂಡ

ಪೌರಕಾರ್ಮಿಕರಿಗೆ ನಿತ್ಯ ಬೆಳಗಿನ ಉಪಹಾರ ವಿತರಣೆ

ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿವೇಶನ ಒದಗಿಸಿ ವಸತಿ ಕಲ್ಪಿಸುವುದು

ಪ್ರತಿಕ್ರಿಯಿಸಿ (+)