ಬುಧವಾರ, ಮೇ 25, 2022
29 °C
ಸಂತೆ ಮೈದಾನದಿಂದ ಪಟ್ಟಣದ ಸಂಪರ್ಕ ರಸ್ತೆ

ಆಲ್ದೂರು: ಹದಗೆಟ್ಟ ರಸ್ತೆಯಲ್ಲಿ ಸಂಚಾರ ಬಲು ಕಠಿಣ

ಜೋಸೆಫ್ ಎಂ. Updated:

ಅಕ್ಷರ ಗಾತ್ರ : | |

Prajavani

ಆಲ್ದೂರು: ಆಲ್ದೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಸಂತೆ ಮೈದಾನದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ.

ಸಂತೆ ಮೈದಾನದ ಜನವಸತಿ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಸೂಕ್ತ ರೀತಿಯ ಒಳಚರಂಡಿ ವ್ಯವಸ್ಥೆ ಇಲ್ಲ. ಮೋರಿ ವ್ಯವಸ್ಥೆಯೂ ಇಲ್ಲ. ಈ ರಸ್ತೆಯ ಮೂಲಕ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳು ಹಾಗೂ ಅಂಗನವಾಡಿಗೆ ಪುಟಾಣಿಗಳು ಹೋಗಬೇಕಿದೆ.

ಈ ಗ್ರಾಮದ ರಸ್ತೆ ಡಾಂಬರು ಕಂಡು ದಶಕಗಳೇ ಕಳೆದಿವೆ. ಶನೀಶ್ವರ ದೇವಸ್ಥಾನವೊಂದು ಇದೇ ರಸ್ತೆ ಯಲ್ಲಿದ್ದು, ದಿನನಿತ್ಯ  ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ. ಈ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆಯಾದರೂ ಇನ್ನೂ ಈಡೇರಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ವಾಸವಿದ್ದಾರೆ. ಇಲ್ಲಿಯ ಬೀದಿಗಳಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಕೂಡ ಇಲ್ಲದೆ ರಸ್ತೆ ಇನ್ನಷ್ಟು ಹಾಳಾಗಿದೆ ಎಂದು ಗ್ರಾಮಸ್ಥರಾದ ಮೈದಿನ್, ಮಂಜುನಾಥ್, ಶಿವಕುಮಾರ್, ಮುರುಗೇಶ್, ಸುರೇಶ್ ದೂರಿದ್ದಾರೆ.

ಆಲ್ದೂರು ಗ್ರಾಮ ಪಂಚಾಯಿತಿ ವಿಸ್ತೀರ್ಣದಲ್ಲಿ ದೊಡ್ಡ ಪಂಚಾಯಿತಿ ಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ವಿಶೇಷ ಮುತುವರ್ಜಿ ವಹಿಸಿ ಶಾಸಕರು, ಸಂಸದರ ಮೂಲಕ ಅನುದಾನ ತಂದು ರಸ್ತೆ, ಮೋರಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು, ಮುಂತಾದ ಮೂಲಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಸರಿಯಾದ ಸ್ಪಂದನೆಯನ್ನು ನೀಡದೆ ಇದ್ದಲ್ಲಿ ಮುಂದೆ ಬರುವ ಜಿಲ್ಲಾ ಪಂಚಾ ಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ಕುರಿತು ಯೋಚನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು