ಭಾನುವಾರ, ಆಗಸ್ಟ್ 14, 2022
22 °C
ಸ್ವಂತ ಸೂರು ಹೊಂದಬೇಕೆಂಬ ಬಡವರ್ಗದ ಜನರ ಕನಸು ನನಸಾಗುತ್ತಿಲ್ಲ

ವಸತಿರಹಿತರಿಗೆ ಹಂಚಿಕೆಯಾಗದ ನಿವೇಶನ

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

Prajavani

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಸತಿರಹಿತರಿಗೆ ನಿವೇಶನ ಹಂಚಿಕೆಯಾಗದಿರುವುದರಿಂದ ಸ್ವಂತ ಸೂರು ಹೊಂದಬೇಕೆಂಬ ಬಡವರ್ಗದ ಜನರ ಕನಸು ನನಸಾಗದೆ ಉಳಿದಿದೆ.

ನಿವೇಶನ ವಿತರಿಸಲು ಹಿಳುವಳ್ಳಿ ಗ್ರಾಮದ ಗ್ರಾಮಠಾಣಾ ವ್ಯಾಪ್ತಿಯ 9 ಎಕರೆಯಲ್ಲಿ 2009–10ನೇ ಸಾಲಿನಲ್ಲಿ ಜಾಗ ಗುರುತಿಸಿ, ಬಡಾವಣೆ ನಿರ್ಮಿಸಲಾಗಿತ್ತು. ನಂತರ ಆ ಜಾಗದ ಬಗ್ಗೆ ತಕಾರರು ಇದ್ದುದರಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯದಲ್ಲಿ ಪಟ್ಟಣ ಪಂಚಾಯಿತಿ ಪರ ತೀರ್ಪು ಬಂದಿದ್ದ ರಿಂದ 2014ರಲ್ಲಿ ಆಶ್ರಯ ನಿವೇಶನಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು, 400 ಜನ ಅರ್ಜಿ ಸಲ್ಲಿಸಿದ್ದರು. ಆದರೆ, ಅಂದು ಆಡಳಿತದಲ್ಲಿದ್ದವರ ನಿರ್ಲಕ್ಷ್ಯದಿಂದ ನಿವೇಶನ ಹಂಚಿಕೆ ನನೆಗುದಿಗೆ ಬಿತ್ತು ಎಂಬುದು ನಿವೇಶನ ರಹಿತ ಆರೋಪ.

ಹಿಂದೆ ಡಿ.ಬಿ.ಚಂದ್ರೇಗೌಡರು ಸಚಿವರಾಗಿದ್ದಾಗ ಪಟ್ಟಣದ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿದ್ದು ಬಿಟ್ಟರೆ ಇದುವರೆಗೂ ನಿವೇಶನ ಹಂಚಿಕೆಯಾಗಿಲ್ಲ ಎಂಬುದು ಬಹುತೇಕ ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ.

ಪ್ರಸ್ತುತ ಪಟ್ಟಣ ಪಂಚಾಯಿತಿಯ ನೂತನ ಆಡಳಿತ ಮಂಡಳಿಯು ನಿವೇಶನ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿರುವುದರಿಂದ ವಸತಿ ರಹಿತರಲ್ಲಿ ಆಶಾಭಾವ ಮೂಡಿದೆ.

‘ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ 50ವರ್ಷಗಳಿಂದ ವಾಸವಾಗಿ ದ್ದೇವೆ. ಸ್ವಂತ ಮನೆಯಿಲ್ಲ. ಪಟ್ಟಣ ಪಂಚಾಯಿತಿಯಿಂದ ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಏಳೆಂಟು ವರ್ಷಗಳಾಯಿತು. ಎರಡು ಮೂರು ವರ್ಷದ ಹಿಂದೆ ನಿವೇಶನ ನೀಡುವುದಾಗಿ ತಿಳಿಸಿದ್ದರೂ ಇದುವರೆಗೂ ನಿವೇಶನ ನೀಡಿಲ್ಲ. ಹಾಗಾಗಿ ಸ್ವಂತ ಮನೆ ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಪ್ರವಾಸಿ ಮಂದಿರದ
ಸಮೀಪದ ನಿವಾಸಿ ಶೋಭಾ.

‘ಶಾಸಕರ ನೇತೃತ್ವದಲ್ಲಿ ಎಲ್ಲಾ ಪಟ್ಟಣ ಪಂಚಾಯಿತಿ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನ ರಹಿತ ಬಡವರಿಗೆ ಆದ್ಯತೆ ಮೇಲೆ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು ತಿಳಿಸಿದರು.

‘ಪಟ್ಟಣ ಪಂಚಾಯಿತಿಯಿಂದ ವಸತಿ ರಹಿತರಿಗೆ ನಿವೇಶನ ವಿತರಿಸಲು ಈಗಾಗಲೇ ₹ 7.50 ಲಕ್ಷ ವೆಚ್ಚದಲ್ಲಿ ಬಡಾ ವಣೆ ನಿರ್ಮಿಸಲು ಕ್ರಮ ಕೈಗೊಳ್ಳ ಲಾಗಿದೆ. 20x30 ಅಳತೆಯ 157 ನಿವೇ ಶನ ಗುರುತಿಸಿ ಆಶ್ರಯ ಸಮಿತಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಾಧಿಕಾರಿ ಕುರಿಯಾ ಕೋಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು