ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಬದಲಾದ ಹವಾಮಾನ: ಕಾಫಿಗೆ ಸಂಕಷ್ಟ

Published 15 ಜನವರಿ 2024, 5:58 IST
Last Updated 15 ಜನವರಿ 2024, 5:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೆಟ್ಟದಿಂದ ಬಟ್ಟಲಿಗೆ ಕಾಫಿ ತಂದುಕೊಡುವ ಬೆಳೆಗಾರರಿಗೆ ಈ ವರ್ಷ ಮಳೆ ಕೊರತೆ ಮತ್ತು ಅಕಾಲಿಕ ಮಳೆ ಎರಡೂ ಕಂಟಕವಾಗಿ ಕಾಡಿವೆ.

ಮುಂಗಾರು ಮಳೆ ಕೊರತೆ ಈ ಬಾರಿ ಕಾಫಿ ಬೆಳೆಗೆ ಹಲವು ರೀತಿಯ ತೊಂದರೆಗಳನ್ನು ತಂದೊಡ್ಡಿತ್ತು. ಮಳೆಗಾಲದಲ್ಲಿ ವಾಡಿಕೆಯಷ್ಟು ಮಳೆ ಸುರಿದಿದ್ದರೆ ಕಾಯಿ ಕೊರಕ ಬಾಧೆಯಿಂದ ಕಾಫಿ ಬೆಳೆ ಪಾರಾಗುತ್ತಿತ್ತು. ಅದರಲ್ಲೂ ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಳೆ ಬಂದಿದ್ದರೆ ಈ ಕೀಟಗಳು ನಾಶವಾಗುತ್ತಿದ್ದವು. ಆದರೆ, ಮಳೆ ಬಾರದಿರುವುದು ಕೀಟಗಳ ಸಂಖ್ಯೆ ಹೆಚ್ಚಾಯಿತು.

ಕಾಳುಗಟ್ಟುವ ಸಂದರ್ಭದಲ್ಲಿ ಹೆಚ್ಚು ಮಳೆಯಾದರೆ ಗೊಬ್ಬರ ಹಾಕಲು ಅನುಕೂಲ ಆಗುತ್ತಿತ್ತು. ಮಳೆ ಇಲ್ಲದೆ ಗೊಬ್ಬರ ಹಾಕಲು ಸಾಧ್ಯವಾಗದೆ ಬೆಳೆಗಾರರು ಹಲವು ತಿಂಗಳು ಕಾದಿದ್ದರು. ಅದು ಕೂಡ ಇಳುವರಿ ಕಡಿಮೆಯಾಗಲು ಕಾರಣವಾಯಿತು.

ಕಾಫಿ ಹೂ ಅರಳುವ ಸಂದರ್ಭದಲ್ಲಿ ಮಳೆಯಾದರೆ ಫಸಲು ಉತ್ತಮವಾಗಿ ಕಟ್ಟುತ್ತದೆ. ಹಿಂದಿನ ಹಲವು ವರ್ಷಗಳ ವಾಡಿಕೆ ಗಮನಿಸಿದರೆ ಕಾಫಿ ಹೂಬಿಡುವ ದಿನಗಳಲ್ಲಿ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಮಳೆಯಾಗದೆ ಉಷ್ಣಾಂಶ ಹೆಚ್ಚಾಯಿತು. ಇದರಿಂದ ಕಾಫಿ ಹೂವುಗಳು ಉದುರಿದವು.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮಳೆ ಬಂದರೆ ಕಾಫಿ ಹಣ್ಣಿನ ಗಾತ್ರ ಹೆಚ್ಚಾಗುತ್ತದೆ. ಆದರೆ, ಯಾವುದೇ ತಿಂಗಳಲ್ಲೂ ವಾಡಿಕೆಯಷ್ಟು ಮಳೆ ಬರಲಿಲ್ಲ. ಇದರಿಂದಾಗಿ ಕಾಫಿ ಬೇಳೆಯ ಗಾತ್ರ ಕಡಿಮೆಯಾಗಿ ಇಳುವರಿಯ ಮೇಲೆ ಪರಿಣಾಮ ಬೀರಿತು.

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಕಾಫಿ ಹಣ್ಣಿನ ಗೊಂಚಲಗಳು ಕೊಳೆತು ಕಪ್ಪಾದವು. ಗೊಂಚಲಗಳ ಸಹಿತವೇ ಉದುರಿ ಹೋದವು. ಅರೇಬಿಕಾ ಕಾಫಿ ಹಣ್ಣಿನ ಕೊಯ್ಲು ಸಂದರ್ಭದಲ್ಲಿ ಕೆಲವೆಡೆ ಮಳೆ ಸುರಿಯಿತು. ಇದರಿಂದಲೂ ಕಾಫಿ ನೆಲಕ್ಕೆ ಉದುರಿತು. ಈ ಎಲ್ಲಾ ಕಾರಣಗಳಿಂದ ಕಾಫಿ ಉತ್ಪಾದನೆಯಲ್ಲಿ ಶೇ 20ರಿಂದ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಬೆಳೆಗಾರರು ಅಂದಾಜಿಸಿದ್ದರು.

ಕಾರ್ಮಿಕರ ಕೊರತೆ, ಗೊಬ್ಬರದ ಬೆಲೆ ಎರಿಕೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ ಈ ಬಾರಿ ಬರಗಾಲ ಬರಸಿಡಿಲಾಗಿಯೇ ಕಾಡಿತು. ಇಳುವರಿ ಕಡಿಮೆಯಾಗಿದ್ದರೂ ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಬಂದ ಮಳೆ ಅದನ್ನೂ ಮಣ್ಣುಪಾಲು ಮಾಡಿತು.

ಕಾಫಿ ಬೆಲೆ ಏರಿಕೆಯ ಹರ್ಷ ಮರೆಸಿದ ಅಕಾಲಿಕ ಮಳೆ

ಕಳಸ: ರೊಬಸ್ಟಾ ಕಾಫಿಯ ಬೆಲೆ ಮೂಟೆಗೆ ₹7 ಸಾವಿರ ದಾಟಿ ಬೆಳೆಗಾರರಲ್ಲಿ ಹೊಸ ಹುಮ್ಮಸ್ಸು ತಂದ ಬೆನ್ನಲ್ಲೇ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಳೆದ ವಾರ ಸುರಿದ ಅಕಾಲಿಕ ಮಳೆ ಕಾಫಿ ಬೆಳೆಗಾರರನ್ನು ಕಂಗೆಡಿಸಿ ನಷ್ಟ ತಂದೊಡ್ಡಿದೆ. ಕಳೆದ ಗುರುವಾರ ದಿನವಿಡೀ ಸುರಿದ ಮಳೆ ಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಹೂವು ಅರಳಿಸಿದೆ. ಮಳೆ ಹೊಡೆತಕ್ಕೆ ಸಿಲುಕಿ ಕಾಫಿ ಹಣ್ಣು ನೆಲಕ್ಕೆ ಉದುರಿದ್ದು ಬೆಳೆ ನಷ್ಟ ಉಂಟಾಗಿದೆ. ಹೂಗಳಿಗೆ ಆಗುವ ಹಾನಿ ತಪ್ಪಿಸಲು ಸಣ್ಣ ಬೆಳೆಗಾರರು ಕಾಫಿ ಕೊಯ್ಲು ನಿಲ್ಲಿಸಿದ್ದಾರೆ. ಆದರೆ ದೊಡ್ಡ ತೋಟಗಳಲ್ಲಿ ಹೂವು ಅರಳಿದ್ದನ್ನು ಲೆಕ್ಕಿಸದೆ ಕೊಯ್ಲು ಮುಂದುವರೆಸಲಾಗುತ್ತಿದೆ. ಮಳೆ ಮತ್ತೆ ಸುರಿಯಬಹುದು ಎಂಬ ಚಿಂತೆಯೂ ಇದೆ. ಇದರಿಂದ ಮುಂದಿನ ವರ್ಷದ ಫಸಲಿನ ಆಲೋಚನೆ ಮಾಡದೆ ಈ ವರ್ಷದ ಫಸಲು ಕೈ ಸೇರಿದರೆ ಸಾಕು ಎಂಬ ಲೆಕ್ಕಚಾರದಲ್ಲಿ ಹೆಚ್ಚಿನ ಬೆಳೆಗಾರರು ಇದ್ದಾರೆ. ಕಳೆದ ಮೂರು ವರ್ಷಗಳಿಂದ ಬದಲಾದ ಮಳೆಯ ವಾತಾವರಣ ಕಾಫಿ ತೋಟಕ್ಕೆ ಭಾರಿ ಹೊಡೆತ ಕೊಡುತ್ತಿದೆ. ಇದರಿಂದ ಈವರೆಗೂ ಮಳೆಗಾಲದಲ್ಲಿ ಮಾತ್ರ ಉದುರುತ್ತಿದ್ದ ಕಾಫಿ ಫಸಲು ಈಗ ಕೊಯ್ಲಿನ ಸಂದರ್ಭದಲ್ಲೂ ಮಣ್ಣುಪಾಲು ಆಗುತ್ತಿದೆ. ಬಿಸಿಲಿನ ಕೊರತೆಯಿಂದ ಕಣದಲ್ಲಿ ಒಣಗಲು ಹರಡಿದ್ದ ಕಾಫಿ ಹಣ್ಣು ಬೂಷ್ಟು ಹಿಡಿದಿದೆ. ಇದರಿಂದ ಕಾಫಿ ಗುಣಮಟ್ಟ ಹಾಳಾಗಿದೆ. ಜೊತೆಗೆ ಚೆರ್ರಿ ಕಾಫಿಯಲ್ಲಿ ಶೇ10ರಿಂದ 15ರಷ್ಟು ತೂಕ ಕೂಡ ಕಡಿಮೆ ಆಗಿದ್ದು ಬೆಳೆಗಾರರಿಗೆ ದೊಡ್ಡ ನಷ್ಟ ಆಗಿದೆ. 8 ದಿನ ಒಣಗಬೇಕಿದ್ದ ಕಾಫಿ 12 ದಿನ ಕಳೆದರೂ ಒಣಗದೆ ಕಣದಲ್ಲಿ ಜಾಗದ ಸಮಸ್ಯೆ ಉಂಟಾಗಿದೆ. ಮೊದಲೇ ಕಾಫಿ ಕೊಯ್ಯಲು ಕಾರ್ಮಿಕರ ಸಮಸ್ಯೆ ಇರುವಲ್ಲಿ ನೆಲಕ್ಕೆ ಬಿದ್ದ ಕಾಫಿ ಹೆರಕಿಸುವುದು ಅಸಾಧ್ಯದ ಮಾತು ಎನ್ನುತ್ತಾರೆ ಬೆಳೆಗಾರರು.

ಸೊರಗಿದ ಕಾಳು ಮೆಣಸು ಏಲಕ್ಕಿ

ಜೂನ್ ತಿಂಗಳಲ್ಲಿ ವಾಡಿಕೆ ಮಳೆಯಾಗದೇ ತಾಲ್ಲೂಕಿನಲ್ಲಿ ಕಾಳುಮೆಣಸು ಏಲಕ್ಕಿ‌ ಬೆಳೆಗಳು ಸೊರಗಿವೆ. ಕಾಳು‌ ಮೆಣಸು ಏಲಕ್ಕಿ ಎರಡೂ ಬೆಳೆಗಳಿಗೆ ತೆನೆ‌ ಕಟ್ಟುವ ವೇಳೆ ಮಳೆ ಅವಶ್ಯ. ಆದರೆ ಸಮರ್ಪಕವಾಗಿ ಮಳೆಯಾಗದೆ ತೆನೆ ಕಟ್ಟಲಾಗದೆ ಹಾಗೂ ತೆನೆಯಾದ ಬಳ್ಳಿಗಳು ಕೂಡ ಉದುರಿ‌ ಫಸಲು ಕುಂಠಿತವಾಯಿತು ಎಂಬುದು ಬೆಳೆಗಾರರ ಅಭಿಪ್ರಾಯ. ಏಲಕ್ಕಿ‌ ಬೆಳೆಯು ಆಗಸ್ಟ್‌ನಿಂದ ನವಂಬರ್ ತನಕ ಕೊಯ್ಲು ನಡೆಯುತ್ತದೆ. ಏಲಕ್ಕಿ ಬಲಿಯುವ ವೇಳೆಗೆ ನೀರಿಲ್ಲದೆ ಇಳುವರಿ ಕುಂಠಿತವಾಗಿದ್ದು ಗುಣಮಟ್ಟದ‌ ಕೊರತೆಯೂ ಉಂಟಾಗಿದೆ. ಮಳೆ‌ ಕಡಿಮೆಯಾದ ಕಾರಣ ಕಾಳು ಮೆಣಸು‌ ಬೆಳೆಗಾರರಿಗೆ‌ ವರ್ಷದ ಬೆಳೆ ನಷ್ಟವಾಗಿರುವುದು ಮಾತ್ರವಲ್ಲದೇ ನೀರಿನ ಕೊರತೆಯಿಂದ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಗಿಡವೇ ಸಾಯ‌ತೊಡಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಅರಳಿದ ಹೂವುಗಳು ತಂದ ಸಂಕಷ್ಟ

ಒಂದೆಡೆ ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಹಣ್ಣು ಉದುರಿ ಮಣ್ಣು ಪಾಲಾಗುತ್ತಿದ್ದರೆ ಮತ್ತೊಂದೆಡೆ ಗಿಡದಲ್ಲಿ ಹೂವುಗಳು ಅರಳಲಾರಂಭಿಸಿವೆ. ಇದು ಕಾಫಿ ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಹಣ್ಣು ಕೊಯ್ಲಿಗೆ ಮುಂದಾದರೆ ಅರಳಿರುವ ಹೂವು ಉದುರಿ ಹೋಗುತ್ತವೆ. ಹಾಗೇ ಬಿಟ್ಟರೆ ಹಣ್ಣುಗಳು ಕರಗಿ ಉದುರಿ ಹೋಗುತ್ತವೆ. ಏನು ಮಾಡಬೇಕು ಎಂಬ ದಿಕ್ಕು ತೋಚದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ. ಈಗ ಅರಳಿರುವ ಹೂವು ಕಾಯಿಗಟ್ಟಿದರೂ ಮಳೆಗಾಲದಲ್ಲಿ ಕೊಯ್ಲಿಗೆ ಬರಲಿವೆ. ಆಗ ಅದು ಬೆಳೆಗಾರರ ಕೈಗೆ ಸಿಗುವುದಿಲ್ಲ ತೋಟದಲ್ಲಿ ಉದುರಿ ಹೋಗುವ ಸಾಧ್ಯತೆಯೇ ಹೆಚ್ಚು. ಹೂವು ಉದುರಿದರೆ ಆ ಗಿಡದಲ್ಲಿ ಮತ್ತೆ ಹೂವು ಬಿಡುವುದಿಲ್ಲ. ಇದು ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು.

ಅಂಕಿ–ಅಂಶ

97582 ಹೆಕ್ಟೇರ್‌ಜಿಲ್ಲೆಯಲ್ಲಿ ಕಾಫಿ ಬೆಳೆ ಇರುವ ಪ್ರದೇಶ 93050 ಟನ್ಕಾಫಿ ಉತ್ಪಾದನೆ ನಿರೀಕ್ಷೆ

ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಬರಬೇಕು. ಕಾಫಿ ಮಂಡಳಿ ಅಧ್ಯಕ್ಷರೊಂದಿಗೂ ಚರ್ಚಿಸಿದ್ದೇವೆ. ನಿಯೋಗದೊಂದಿಗೆ ತೆರಳಿ ಕೇಂದ್ರ ಸಚಿವರಿಗೆ ಸಮಸ್ಯೆ ಮನವರಿಕೆ ಮಾಡಿಸಿ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಲಾಗುವುದು.
ಎಚ್.ಟಿ ಮೋಹನ್‌ಕುಮಾರ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ
ಅರ್ಧ ಕಾಫಿ ಗಿಡದಲ್ಲಿದ್ದರೆ ಇನ್ನರ್ಧ ನೆಲ ಸೇರಿದೆ. ಕಣದಲ್ಲಿರುವ ಕಾಫಿ ಒಣಗಿಸಲು ಸಾಧ್ಯವಾಗದೆ ಗುಣಮಟ್ಟ ಹಾಳಾಗಿದ್ದು ಶೇ 50ರಷ್ಟು ಬೆಲೆಗೂ ಈ ಕಾಫಿ ಕೇಳುವುದಿಲ್ಲ. ಈ ವರ್ಷ ಕಾಫಿ ಬೆಳೆಗಾರರು ಭಾರಿ ತೊಂದರೆಗೆ ಸಿಲುಕಿದ್ದಾರೆ.
ಗಿರೀಶ್‌ ಹೊಲದಗದ್ದೆ, ಕಾಫಿ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ
ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಕರಗುತ್ತಿರುವ ಕಾಫಿಹಣ್ಣು
ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಕರಗುತ್ತಿರುವ ಕಾಫಿಹಣ್ಣು
ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಒಣಗಿರುವ ಕಾಫಿ ಹಣ್ಣು
ಕೊಯ್ಲು ಸಾಧ್ಯವಾಗದೆ ಗಿಡದಲ್ಲೇ ಒಣಗಿರುವ ಕಾಫಿ ಹಣ್ಣು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT