ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ಸೇತುವೆಗೆ ಕಾದಿರುವ ವಿದ್ಯಾರ್ಥಿಗಳು

ಕಾಲು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವುದೇ ಸರ್ಕಾರ?
Last Updated 12 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೋಣಿಸರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಬೆಳ್ಳೂರು ಗ್ರಾಮ ಮತ್ತು ದೋಣಿಸರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಬೆಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಿದ್ದ ಕಾಲು ಸೇತುವೆಗೆ ಕುದುರೆಗುಂಡಿಯ ಕಪಿಲಾ ಹಳ್ಳದ ನೀರು ನುಗ್ಗಿದ ಪರಿಣಾಮವಾಗಿ ಕೊಚ್ಚಿ ಹೋಗಿತ್ತು. ಇದರಿಂದ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಇಂದಿಗೂ ಪರದಾಡುತ್ತಿದ್ದಾರೆ.

12 ವರ್ಷಗಳ ಹಿಂದೆ ದೋಣಿಸರ ಗ್ರಾಮಕ್ಕೆ ಹತ್ತಿರದ ಮಾರ್ಗವಾಗಿ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು. ದೋಣಿಸರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿದ್ದು 100ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಈ ಗ್ರಾಮದ ಜನರು ದಿನಬಳಕೆಯ ವಸ್ತುಗಳು, ಪಡಿತರ ವ್ಯವಸ್ಥೆಗೆ, ಆಸ್ಪತ್ರೆ, ಗ್ರಾಮ ಪಂಚಾಯಿತಿ ಕಚೇರಿಗೆ, ಎನ್.ಆರ್.ಪುರ ಅಥವಾ ಕೊಪ್ಪಕ್ಕೆ ಹೋಗಲು ಬಸ್‌ಗೆ ಹತ್ತಿರದ ಮಾರ್ಗವಾಗಿ ಈ ಸೇತುವೆಯನ್ನು ಆಶ್ರಯಿಸಿದ್ದರು. ಈ ಸೇತುವೆಯ ಮಾರ್ಗದಿಂದ ಬೆಳ್ಳೂರಿಗೆ ಕೇವಲ 1 ಕಿ.ಮೀ. ಕಾಲುನಡಿಗೆಯಲ್ಲಿಯೇ ತಲುಪಲು ಅವಕಾಶವಿತ್ತು. ಪ್ರಸ್ತುತ ಈ ಸೇತುವೆ ಕೊಚ್ಚಿಹೋಗಿದ್ದರಿಂದ 6 ಕಿ.ಮೀ. ಸುತ್ತಿಬಳಸಿ ಬೆಳ್ಳೂರಿಗೆ ತಲುಪಬೇಕಿದೆ. ಈ ಗ್ರಾಮದಿಂದ ಬೆಳ್ಳೂರಿಗೆ ಬರಲು ಯಾವುದೇ ಬಸ್ ಸೌಲಭ್ಯವಿಲ್ಲದಿರುವುದರಿಂದ ಜನರಿಗೆ ಕಾಲ್ನಡಿಗೆಯೇ ಆಸರೆಯಾಗಿದೆ.

ಗ್ರಾಮದಿಂದ 30ಕ್ಕೂ ಹೆಚ್ಚು ಮಕ್ಕಳು ಬೆಳ್ಳೂರು ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬರುತ್ತಾರೆ. ಕಾಲು ಸೇತುವೆ ಇದ್ದಾಗ 1 ಕಿ.ಮೀ. ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿದ್ದರು. ಸೇತುವೆ ಕೊಚ್ಚಿ ಹೋಗಿರುವುದರಿಂದ 6 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾಗಿದ್ದರಿಂದ ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುವುದು ಹೇಗೆ ಎಂಬ ಚಿಂತೆ ಪೋಷಕರನ್ನು ಕಾಡಿತ್ತು.

ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೀರಿರುವುದರಿಂದ ಸರ್ಕಾರದಿಂದ ಸೇತುವೆ ನಿರ್ಮಾಣವಾಗುವುದು ತಡವಾಗುತ್ತದೆ ಎಂಬುದನ್ನು ಅರಿತ ದೋಣಿಸರದಲ್ಲಿ ವಾಸವಿರುವ 20ಕ್ಕೂ ಹೆಚ್ಚು ಮನೆಯವರು ತಾತ್ಕಾಲಿಕವಾಗಿ ಹತ್ತಿರದ ಸಂಪರ್ಕಕ್ಕೆ ಸ್ವಂತ ವೆಚ್ಚದಲ್ಲಿಯೇ ಕಾಲು ಸಂಕ ನಿರ್ಮಾಣ ಮಾಡಿಕೊಳ್ಳಲು ನಿರ್ಧರಿಸಿದರು. ಆದರೆ, ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಹಳ್ಳದ ನೀರು ಏರುತ್ತಿದ್ದುದರಿಂದ ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿತ್ತು. 35ರಿಂದ 40 ಅಡಿ ಉದ್ದದ ಮರದ ದಿಮ್ಮಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಳ್ಳದಲ್ಲಿಯೇ ಇಳಿದು ಸಾಗಿಸ ಬೇಕಾಗಿತ್ತು. ನೀರಿನಲ್ಲಿ ಇಳಿಯುವವರ ಸೊಂಟಕ್ಕೆ ಹಗ್ಗ ಕಟ್ಟಿ ಹಿಡಿದು ಕೊಂಡು ಸಾಹಸಮಯವಾಗಿ ಮರದ ದಿಮ್ಮಿ ಹಾಗೂ 46 ಕಬ್ಬಿಣದ ಸಲಾಕೆಗಳನ್ನು ಹಾಕಿ ಸತತವಾಗಿ 4 ದಿನಗಳ ಕಾಲ ಶ್ರಮಪಟ್ಟು ಕಾಲು ಸಂಕವನ್ನು ಗ್ರಾಮಸ್ಥರೇ ನಿರ್ಮಾಣ ಮಾಡಿದರು.

ಈ ಬಗ್ಗೆ ‘ಪ್ರಜಾವಾಣಿ’ ಸೀತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಪಿ.ರಮೇಶ್ ಅವರನ್ನು ಸಂಪರ್ಕಿಸಿದಾಗ, ‘ಗ್ರಾಮದ ಸಂಪರ್ಕಕ್ಕೆ ದೋಣಿಸರ ಗ್ರಾಮಸ್ಥರೇ ಸೇರಿಕೊಂಡು ಕಾಲು ಸಂಕ ನಿರ್ಮಾಣ ಮಾಡಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಸ್ವಲ್ಪ ಪ್ರಮಾಣದ ಧನ ಸಹಾಯ ಮಾಡಲಾಗಿದೆ’ ಎಂದರು.

‘ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸುವ ಕಾಲು ಸೇತುವೆಗಳನ್ನು ಸರ್ಕಾರ ನಿರ್ಮಾಣ ಮಾಡುವಾಗ ಗುಣಮಟ್ಟದ ಕಾಮಗಾರಿ ಮಾಡಿಸುವತ್ತ ಗಮನಹರಿಸಿದರೆ, ಸಮಸ್ಯೆಯಾಗುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಹಳ್ಳಿಬೈಲು ನಿವಾಸಿ ಬಸವರಾಜಪ್ಪ.

ಸಂಸದರಿಂದ ಅನುದಾನದ ಭರವಸೆ

ದೋಣಿಸರಕ್ಕೆ ಹಾತೂರು, ಕಂಡಕ, ಕಣಿಬೈಲು ಮೂಲಕ ಸುತ್ತಿಬಳಸಿ ಬರಲು ಅವಕಾಶವಿದ್ದರೂ ಸಹ ಯಾವುದೇ ವಾಹನ ಬರದ ರೀತಿಯಲ್ಲಿ ಇಲ್ಲಿನ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.

‘ಮಕ್ಕಳನ್ನು ಶಾಲೆಗೆ ಕಳುಹಿಸಲು ಅನುಕೂಲವಾಗುವಂತೆ ಗ್ರಾಮಸ್ಥರೆಲ್ಲಾ ಸೇರಿಕೊಂಡು ಅಕೇಶಿಯಾ ದಿಮ್ಮಿ ಹಾಗೂ ಕಬ್ಬಿಣದ ಸಲಾಕೆಗಳನ್ನು ಬಳಸಿ 15 ದಿನಗಳ ಹಿಂದೆ ಕಾಲು ಸಂಕ ನಿರ್ಮಾಣ ಮಾಡಿಕೊಂಡಿದ್ದೇವೆ. ಪ್ರತಿನಿತ್ಯವೂ ಮಕ್ಕಳ ಜತೆಗೆ ದೊಡ್ಡವರು ಹೋಗಿ ಕಾಲು ಸಂಕ ದಾಟಿಸಿ ಶಾಲೆಗೆ ಬಿಟ್ಟುಬರುತ್ತಿದ್ದೇವೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಸಹ ಭೇಟಿ ನೀಡಿ ಪರಿಶೀಲಿಸಿ, ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶೀಘ್ರವೇ ಕಾಲು ಸೇತುವೆ ನಿರ್ಮಾಣವಾದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ದೋಣಿಸರ ನಿವಾಸಿ ನಾಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT