ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್‌ ಪಾಟೀಲ್‌ ಆತ್ಮಹತ್ಯೆ; ಸಮಗ್ರ ತನಿಖೆಯಾಗಲಿ- ಸಿ.ಟಿ.ರವಿ

Last Updated 13 ಏಪ್ರಿಲ್ 2022, 10:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಪರಿಶೀಲನೆ ಪ್ರಕಾರ ಪ್ರಕರಣದಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ. ನಾನು ಹೇಳಿದರೆ ಅದನ್ನು ಯಾರು ನಂಬುವುದಿಲ್ಲ. ತನಿಖೆ ನಡೆದರೆ ಅಪರಾಧಿ ಯಾರು ಎಂದು ಪತ್ತೆಯಾಗುತ್ತದೆ. ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ’ ಎಂದು ಉತ್ತರಿಸಿದರು.

‘ರಾಜೀನಾಮೆ ನೀಡುವಂತೆ ಪಕ್ಷವು ಸೂಚನೆ ನೀಡಿಲ್ಲ. ಸಾರ್ವಜನಿಕ ಜೀವನದಲ್ಲಿ ಕೆಲವೊಮ್ಮೆ ಅನಿವಾರ್ಯವಾಗಿ ತಲೆ ಕೊಡಬೇಕಾಗುತ್ತದೆ. ಸಾರ್ವಜನಿಕರ ಸಂಶಯ ದೂರ ಮಾಡಲು ಮುಖ್ಯಮಂತ್ರಿ ಮತ್ತು ಈಶ್ವರಪ್ಪ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಸಂತೋಷ್‌ ಪತ್ರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದೆ. ಸಂತೋಷ್‌ ಅವರು ಕಾಮಗಾರಿ ಅನುಮೋದನೆ ಪತ್ರ, ಕಾರ್ಯಾದೇಶ ಪಡೆಯದೆ ಕೆಲಸ ಮಾಡಿ ಬಿಲ್‌ ಪಾವತಿಸುವಂತೆ ಬೇಡಿಕೆ ಇಟ್ಟಿದ್ದರಂತೆ. ಅನುಮೋದನೆ ಪತ್ರ, ಕಾರ್ಯಾದೇಶ ಇಲ್ಲದೆ ಕೋಟಿಗಟ್ಟಲೆ ಮೊತ್ತದ ಕಾಮಗಾರಿ ಹೇಗೆ ಮಾಡಿದರು ಎಂಬ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಹೇಳಿದರು.

‘ಶೇ 40 ಕಮಿಷನ್‌ ಸರ್ಕಾರ ಎಂಬುದು ಸುಳ್ಳು ಆರೋಪ. ಇದೊಂದು ಹಾಸ್ಯಾಸ್ಪದ ಸಂಗತಿ. ಕಾಂಗ್ರೆಸ್‌ನವರ ಮೇಲಿನ ಶೇ 10 ಕಮಿಷನ್‌ ಆರೋಪ ಮರೆಮಾಚಲು ಈ ರೀತಿ ಹೇಳುತ್ತಿದ್ದಾರೆ. ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ನವರ ಬಳಿ ದಾಖಲೆ, ಸಾಕ್ಷ್ಯ ಇದ್ದರೆ ಸಂಬಂಧಪಟ್ಟ ತನಿಖಾ ಸಂಸ್ಥೆಗೆ ನೀಡಲು ಅವಕಾಶ ಇದೆ. ಅವರಿಗೆ ಪೊಲೀಸ್‌, ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮೇಲೆ ನಂಬಿಕೆ ಇಲ್ಲದಿದ್ದರೆ ದಾಖಲೆ, ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿ ನ್ಯಾಯ ಕೊಡಿಸುವ ಕೆಲಸ ಮಾಡಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT