ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಕೊಡಲಾರೆ ಎಂದ ಸಚಿವ ಈಶ್ವರಪ್ಪ, ಕಾಂಗ್ರೆಸ್‌ಗೆ ಎರಡು ಪ್ರಶ್ನೆ

Last Updated 13 ಏಪ್ರಿಲ್ 2022, 10:41 IST
ಅಕ್ಷರ ಗಾತ್ರ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಂತೋಷ್ ಅವರು ಯಾರು ಎಂಬುದೇ ಗೊತ್ತಿಲ್ಲ. ಡೆತ್ ನೋಟ್ ಬರೆದೇ ಇಲ್ಲ. ಮೊಬೈಲ್ ಸಂದೇಶ ಯಾರು ಕಳುಹಿಸಿದ್ದಾರೆ ಎನ್ನುವ ಕುರಿತು ಖಚಿತತೆ ಇಲ್ಲ‌. ಇದೊಂದು ರಾಜಕೀಯ ಷಡ್ಯಂತ್ರ ಎಂದು ಬುಧವಾರ ಶಿವಮೊಗ್ಗದಬಿಜೆಪಿ ಕಚೇರಿಯಲ್ಲಿ ನಡೆದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ಸಿಕ್ಕರೂ ಅಂದಿನ ಗೃಹ ಸಚಿವ ಜಾರ್ಜ್ ರಾಜೀನಾಮೆ ಕೊಡಲಿಲ್ಲ. ಈಗ ಅದೇ ಕಾಂಗ್ರೆಸ್ ವಾಟ್ಸ್ ಆ್ಯಪ್ ಸಂದೇಶ ಇಟ್ಟುಕೊಂಡು ರಾಜೀನಾಮೆ ಕೇಳುತ್ತಿದೆ. ಇಂತಹ ಒತ್ತಡಕ್ಕೆಲ್ಲ ಮಣಿಯುವುದಿಲ್ಲ ಎಂದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಎರಡು ಪ್ರಶ್ನೆ

ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.

ನಿಮ್ಮ ಆಡಳಿತದ ಕಾಲದಲ್ಲಿ ವರ್ಕ್ ಆರ್ಡರ್ ಇಲ್ಲದೆಯೇ ಕಾಮಗಾರಿಗೆ ಹಣ ಪಾವತಿ ಮಾಡಲಾಗುತ್ತಿತ್ತೇ? ವಾಟ್ಸ್ಆ್ಯಪ್‌ನಲ್ಲಿ ಟೈಪ್ ಮಾಡಿದ್ದನ್ನು ಡೆತ್ ನೋಟ್ ಅಂತ ಹೇಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಬೇಕಿದ್ರೆ, ಆಡಳಿತಾತ್ಮಕ ಅಪ್ರೂವಲ್, ಟೆಕ್ನಿಕಲ್ ಅಪ್ರೂವಲ್, ನಂತರ ಸ್ಯಾಂಕ್ಷನ್, ನಂತರ ವರ್ಕ್ ಆರ್ಡರ್ ಇಶ್ಯೂ ಮಾಡಬೇಕು. ಕೆಲಸ ಆಗುವಾಗ ಇಲಾಖೆಯವರು ಸೂಪರ್‌ವೈಸ್ ಆಗಬೇಕು, ಕೆಲಸ ಮುಗಿದಮೇಲೆ ಪೇಮೆಂಟ್ ಆಗಬೇಕು. ಇದು ಪದ್ಧತಿ. ಇದ್ಯಾವುದೂ ಇಲ್ಲದೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಕೇಳ್ತಾ ಇದ್ದೇನೆ...
ಇಷ್ಟು ವರ್ಷ ಆಡಳಿತ ನಡೆಸಿದ್ದೀರಲ್ಲಾ ಎಲ್ಲ ನಿಯಮ ಗಾಳಿಗೆ ತೂರಿ, ವರ್ಕ್ ಆರ್ಡರ್ ಕೊಡದೆಯೇ ಬಿಲ್ ಪೇಮೆಂಟ್ ಮಾಡಿದ್ದೀರಾ? ಎಂದು ಕಾಂಗ್ರೆಸ್ ನಾಯಕರಿಗೆ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ನಾನು ಗುತ್ತಿಗೆದಾರ ಸಂತೋಷ್ ಪಾಟೀಲ್‌ ಅವರನ್ನು ಭೇಟಿಯಾಗಿಯೇ ಇಲ್ಲ, ಅವರು ಯಾರೆಂಬುದೇ ಗೊತ್ತಿಲ್ಲ. ವಾಟ್ಸ್ಆ್ಯಪ್‌ನಲ್ಲಿ ಟೈಪ್ ಮಾಡಿದ್ದಕ್ಕೆ ಡೆತ್ ನೋಟ್ ಅಂತ ಹೇಳ್ತಾರೇನ್ರೀ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂತೋಷ್ ಪಾಟೀಲ್ ಸಾವಿನ ಬಗ್ಗೆಯೂ ತನಿಖೆಯಾಗಬೇಕು. ಅದರ ಜೊತೆಗೆ ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಆಮೂಲಾಗ್ರ ತನಿಖೆಯಾಗಲಿ ಎಂದು ಒತ್ತಾಯಿಸಿರುವ ಈಸ್ವರಪ್ಪ ಈ ವಿಷಯವು ಹೈಕಮಾಂಡ್ ಮಟ್ಟಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ವಿರುದ್ಧ ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡಿ, ಸಂತೋಷ್ ತೀರಿ ಹೋದ್ರು ಅಂತ ರಾಜೀನಾಮೆ ಕೊಡಬೇಕು ಹೇಳುವುದು ಸರಿಯಲ್ಲ. ಎಲ್ಲ ವಿಷಯಗಳನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮತ್ತು ಸಿಎಂ ಬೊಮ್ಮಾಯಿ ಅವರಿಗೆ ತಿಳಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ಮೋದಿ, ಶಾರನ್ನೇ ಭೇಟಿಯಾದವರು ಮಾನನಷ್ಟ ಮೊಕದ್ದಮೆಗೆ ಹೆದರಿದರೆ?

ಬಡತನದಲ್ಲಿದ್ದೀನಿ, ಕಷ್ಟದಲ್ಲಿದ್ದೀನಿ ಅಂತ ಹೇಳುತ್ತಿದ್ದವರು ದೆಹಲಿಗೆ ಹೋಗಲು ಯಾರು ಏರ್ ಟಿಕೆಟ್ ಮಾಡಿ ಕೊಟ್ರು? ಈ ರೀತಿ ಆರೋಪ ಮಾಡಿದ್ದಕ್ಕಾಗಿ ಸಂತೋಷ್ ಪಾಟೀಲ್ ಹಾಗೂ ಖಾಸಗಿ ಚಾನಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಅದಕ್ಕೆ ನ್ಯಾಯಾಲಯ ನೋಟಿಸ್ ಕೂಡ ನೀಡಿದೆ. ಆದರೆ, ದೆಹಲಿಗೆ ಹೋದವರು, ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನೇ ಭೇಟಿ ಮಾಡಿದವರು, ಮಾನನಷ್ಟ ಮೊಕದ್ದಮೆ ನೋಟಿಸ್ ಬಂದಾಗ ಹೆದರಿದರೇ? ಎಂದು ಅವರುಪ್ರಶ್ನಿಸಿದರು.

ಇವುಗಳನ್ನೂ ಒದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT