ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳ್ಳಯ್ಯನಗಿರಿ ರಸ್ತೆ ಕೊರಕಲುಮಯ

ಪ್ರತಿನಿತ್ಯ ಗುಂಡಿಯಲ್ಲಿ ಸಿಲುಕುತ್ತಿರುವ ಪ್ರವಾಸಿಗರ ವಾಹನಗಳು
Published 16 ಜೂನ್ 2024, 7:56 IST
Last Updated 16 ಜೂನ್ 2024, 7:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಂಗಾರು ಪೂರ್ವ ಮಳೆಯಿಂದ ಚಂದ್ರದ್ರೋಣ ಪರ್ವತದ ಗಿರಿ– ಶಿಖರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರು ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮುಳ್ಳಯ್ಯನಗಿರಿ ರಸ್ತೆ ಕೊರಕಲು ಮತ್ತು ಗುಂಡಿಮಯವಾಗಿದ್ದು, ವಾಹನಗಳು ಸಿಲುಕು ಪರದಾಡುವಂತಾಗಿದೆ.

ರಾಜ್ಯದ ಅತೀ ಎತ್ತರದ ಶಿಖರ ಎಂದು ಹೇಳಾಗುವ ಮುಳ್ಳಯ್ಯನಗಿರಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣ. ಮಳೆ ಬಿಡುವು ನೀಡಿರುವುದರಿಂದ ಮೋಡಗಳು ಸರಿದಿದ್ದು, ಗಿರಿ ಕಂದರಗಳು ಅಚ್ಚ ಹಸಿರಿನಿಂದ ಕಾಣಿಸುತ್ತಿವೆ. ಅಹ್ಲಾದಕರ ವಾತಾವರಣ ಇರುವುದರಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಮುಳ್ಳಯ್ಯನಗಿರಿಗೆ ಹೋಗುವ ರಸ್ತೆಯಲ್ಲಿ ಅಲ್ಲಲ್ಲಿ ಕೊರಕಲು ಬಿದ್ದಿದ್ದು, ಎದುರಿನಿಂದ ವಾಹನಗಳು ಬಂದರೆ ಹೊಂಡದಂತ ಕೊರಕಲಿಗೆ ಇಳಿಸುವುದು ಅನಿವಾರ್ಯವಾಗಿದೆ. ಡಾಂಬರ್ ರಸ್ತೆಯ ಪಕ್ಕದಲ್ಲಿ ಹಾಕಿದ್ದ ಮಣ್ಣು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಈ ಕೊರಕಲುಗಳು ನಿರ್ಮಾಣವಾಗಿವೆ.

ಸೀತಾಳಯ್ಯನಗಿರಿ ದಾಟಿಮುಳ್ಳಯ್ಯನಗಿರಿಗೆ ಸಾಗುವ ಮಾರ್ಗದಲ್ಲಿ ಇರುವ ಕಡಿದಾದ ರಸ್ತೆ ಇರುವ ಸ್ಥಳದಲ್ಲೇ ಕೊರಕಲುಗಳು ನಿರ್ಮಾಣವಾಗಿವೆ. ಹರಸಾಹಸದ ನಡುವೆ ವಾಹನ ಚಾಲನೆ ಮಾಡುವಾಗ ಎದುರಿನಿಂದ ವಾಹನ ಬಂದರೆ ಗುಂಡಿಗಳಿಗೆ ಇಳಿದು ಸಿಲುಕಿಕೊಳ್ಳುತ್ತಿವೆ.

ರಸ್ತೆಯಲ್ಲಿ ಸ್ವಲ್ಪ ಆಯತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ. ಕೆಲವೆಡೆ ಸುರಕ್ಷತೆಗೆ ಅಳವಡಿಸಿರುವ ಬ್ಯಾರಿಯರ್‌ಗಳು ಸಹ ಅಲ್ಲಲ್ಲಿ ಹಾಳಾಗಿದ್ದು, ಅಪಾಯದ ನಡುವೆ ವಾಹನಗಳು ಸಂಚರಿಸುತ್ತಿವೆ. ತಿಣುಕಾಟದ ನಡುವೆ ಮುಳ್ಳಯ್ಯನಗಿರಿ ತಲುಪಿದರೆ ಅಲ್ಲಿಯೂ ವಾಹನ ದಟ್ಟಣೆ ನಿತ್ಯದ ಗೋಳಾಗಿದೆ. 

ಕಾರುಗಳು ಸೇರಿ ಲಘು ವಾಹನಗಳಿಗೆ ಮಾತ್ರ ಅವಕಾಶ ಇದ್ದು, ವಾಪಸ್ ಬರಲು ವಾಹನ ತಿರುಗಿಸಿಕೊಳ್ಳುವುದು ಕಡು ಕಷ್ಟದ ಕೆಲಸ. ಮುಳ್ಳಯ್ಯನಗಿರಿಯಲ್ಲಿ ಕ್ರಮಬದ್ಧವಾಗಿ ವಾಹನ ನಿಲ್ಲುವಂತೆ ನೋಡಿಕೊಳ್ಳುವ ವ್ಯವಸ್ಥೆ ಇಲ್ಲ. ಪೊಲೀಸರೂ ಸ್ಥಳಕ್ಕೆ ಬರುವುದಿಲ್ಲ. ಇದರಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ.

ನುರಿತ ಚಾಲಕನಲ್ಲದೆ ಹೊಸದಾಗಿ ವಾಹನ ಚಾಲನೆ ಕಲಿತವರು ಬಂದರೆ ಪರದಾಡುವುದು ಸಾಮಾನ್ಯ. ಕಿರಿದಾದ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವ ಕೊರಕಲು ಮುಚ್ಚುವ ಕೆಲಸವನ್ನಾದರೂ ಜಿಲ್ಲಾಡಳಿತ ಮಾಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ನಗರದಲ್ಲೂ ವಾಹನ ದಟ್ಟಣೆ: ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕ್ಕಮಗಳೂರು ನಗರದಲ್ಲೂ ಶನಿವಾರ ವಾಹನ ದ‌ಟ್ಟಣೆ ಉಂಟಾಗಿದೆ.

ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ನಗರದ ಐ.ಜಿ.ರಸ್ತೆ, ಎಂ.ಜಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಂಡು ಬಂತು. ಎಂ.ಜಿ.ರಸ್ತೆಯಿಂದ ಐ.ಜಿ.ರಸ್ತೆಗೆ ಸಂಪರ್ಕ ಕಲ್ಪಿಸುವ ನಾಯ್ಡು ರಸ್ತೆಯನ್ನು ಅಗೆದಿರುವುದು ಕೂಡ ವಾಹನ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಿದೆ. ರಸ್ತೆ ಅಗೆದು ಬಿಟ್ಟಿರುವ ನಗರಸಭೆ ಕೂಡಲೇ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT