ಮಂಗಳವಾರ, ಮಾರ್ಚ್ 2, 2021
23 °C

ಯೋಜನೆ ಕೆಲವು; ಸಮಸ್ಯೆ ಹಲವು

ಸುಧೀರ್ ಬಿ.ಟಿ. ಆಲ್ದೂರು Updated:

ಅಕ್ಷರ ಗಾತ್ರ : | |

Deccan Herald

ಆಲ್ದೂರು: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಜಾರಿಗೆ ತಂದಿರುವ ಬಹುತೇಕ ಯೋಜನೆಗಳು ಗ್ರಾಮಗಳಿಗೆ ಸರಿಯಾಗಿ ತಲುಪಿವೆಯೇ ಎಂದು ನೋಡುವುದಾದರೆ ಆಲ್ದೂರು, ವಸ್ತಾರೆ ಮತ್ತು ಸತ್ತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಬೇಕು.

ಮಲೆನಾಡು ಪ್ರದೇಶಗಳಾದ ಆಲ್ದೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಎಷ್ಟೇ ವ್ಯವಸ್ಥೆಗಳನ್ನು ಕಲ್ಪಿಸಿದರೂ ಕೂಡ ಕಡಿಮೆ ಎಂದೇ ಹೇಳಬಹುದು. ಈ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಲೇಜು ಶಿಕ್ಷಣ, ಮೆಸ್ಕಾಂ ಶಾಖೆ, ಬ್ಯಾಂಕ್, ರೈತ ಸಂಪರ್ಕ ಕೇಂದ್ರ, ಸಾಂಬಾರು ಮಂಡಳಿ, ಪೊಲೀಸ್ ಠಾಣೆ, ಅರಣ್ಯ ಇಲಾಖೆಯಂತಹ ಹಲವು ಯೋಜನೆಗಳು ತಲುಪಿವೆ.

ಆದರೆ, ಇಷ್ಟೆಲ್ಲಾ ಯೋಜನೆಗಳು ಗ್ರಾಮಗಳಿಗೆ ಬಂದಿದ್ದರೂ ಕೂಡ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಚರಂಡಿಗಳ ಅಸಮರ್ಪಕ ನಿರ್ಮಾಣ ಮತ್ತು ನಿರ್ವಹಣೆ ಹಾಗೂ ಹದಗೆಟ್ಟ ರಸ್ತೆಗಳಿಂದಾಗಿ ಊರಿನ ಸೌಂದರ್ಯ ಹಾಳಾಗಿದೆ. ಮಲೆನಾಡು ಎಂದರೆ ಭೂಲೋಕದ ಸ್ವರ್ಗ ಅಂದುಕೊಂಡು ಬಂದ ಪ್ರವಾಸಿಗರಿಗೆ ವಾಕರಿಕೆ ಬರಿಸುತ್ತಿರುವುದಂತೂ ಸತ್ಯ. ರಸ್ತೆ ಬದಿಯಲ್ಲಿ ವಿಲೇವಾರಿಯಾಗದ ಕಸ, ಗಬ್ಬು ನಾರುವ ಚರಂಡಿಗಳು, ಹಲವು ವರ್ಷಗಳಿಂದ ಬಣ್ಣವನ್ನೇ ಕಾಣದ ಸರ್ಕಾರಿ ಕಟ್ಟಡಗಳು. ಎಲ್ಲೆಂದರಲ್ಲಿ ತಿಂದು ಉಗಿದ ಎಲೆ ಅಡಿಕೆ ಮತ್ತು ಗುಟ್ಕಾದ ಕಲೆಗಳು ಅಸಹ್ಯ ಹುಟ್ಟಿಸುವಂತಿದೆ. ಹೊರಗಿನಿಂದ ಬರುವ ಪ್ರಯಾಣಿಕರಿಗೆ ಸರಿಯಾದ ಬಸ್ ನಿಲ್ದಾಣ, ಸರಿಯಾದ ಶೌಚಾಲಯದ ವ್ಯವಸ್ಥೆ, ಕರೆಂಟ್ ಹೋದಾಗ ಸೋಲಾರ್ ದೀಪದ ವ್ಯವಸ್ಥೆ ಇಲ್ಲದಿರುವುದು, ಹೀಗೆ ಹಲವು ಸಮಸ್ಯೆಗಳು ಕಣ್ಣ ಮುಂದೆ ಹಾದು ಹೋಗುತ್ತಿವೆ.

ನಿವೃತ್ತ ಶಿಕ್ಷಕ ಬಸಪ್ಪ ಗೌಡ ಅವರು ಹೇಳುವಂತೆ,  ಜಿಲ್ಲೆಯ ಇತರೆ ಗ್ರಾಮ ಪಂಚಾಯತಿಗಳಿಗೆ ನೀಡಿದಂತೆ ತಮ್ಮ ಗ್ರಾಮ ಪಂಚಾಯತಿಗಳಿಗೆ ಕೂಡ ಅನುದಾನ ನೀಡಲಾಗುತ್ತಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದೂರದೃಷ್ಟಿತ್ವದ ಕೊರತೆ ಯೋಜನೆಗಳ ಸರಿಯಾದ ಬಳಕೆ ಸಾಧ್ಯವಾಗುತ್ತಿಲ್ಲ.

‘ಯೋಜನೆಗಳ ಸರಿಯಾದ ಬಳಕೆಯ ಜೊತೆಗೆ ಇನ್ನೂ ಹೆಚ್ಚಿನ ಅನುದಾನಕ್ಕೆ ಪಕ್ಷ ಭೇದ ಮರೆತು ಒಗ್ಗಟ್ಟಿನಿಂದ ಮುಂದುವರಿದರೆ, ಮಹಾತ್ಮ ಗಾಂಧೀಜಿಯವರ ಕನಸು ‘ಗ್ರಾಮ ಸ್ವರಾಜ್ಯ’ ನನಸಾಗುವುದರಲ್ಲಿ ಸಂಶಯವೇ ಇಲ್ಲ’ ಎಂದು ಅವರು  ನೋವು ತೋಡಿಕೊಂಡರು.

ನಮ್ಮ ಗ್ರಾಮಗಳು ಸೇರಿದಂತೆ ದೇಶದ ತುಂಬೆಲ್ಲಾ ಆರ್ಥಿಕ ಮೂಲಭೂತವಾದ ಮತ್ತು ಏಕಮುಖಿ ಆರ್ಥಿಕ ನೀತಿಗಳು ಮಿತಿ ಮೀರಿದ್ದು ಅಂಕುಶ ಹಾಕಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಅದರ ಜೊತೆಗೆ ಹೊಸ ಹೊಸ ಗ್ರಾಮೀಣ ನೀತಿಗಳು ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ ಎನ್ನುವುದು ಗ್ರಾಮೀಣ ಪ್ರದೇಶದ ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ.

*
ಪಕ್ಷಭೇದ, ಸ್ವ-ಹಿತಾಸಕ್ತಿ, ದುರಾಡಳಿತದಿಂದಾಗಿ ಸರ್ಕಾರದ ಯಾವ ಯೋಜನೆಗಳೂ ಕೂಡ ಕೊನೆಯ ಹಂತವನ್ನು ತಲುಪದೆ ನಿಷ್ಪ್ರಯೋಜಕವಾಗುತ್ತಿದೆ.
-ಬಸಪ್ಪ ಗೌಡ, ನಿವೃತ್ತ ಶಿಕ್ಷಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.