ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖ: ಎಸ್‌ಡಿಪಿಐ

ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯಲ್ಲಿ ಅಂಗಡಿ ಚಂದ್ರು ಆರೋಪ
Published 22 ಜೂನ್ 2024, 13:54 IST
Last Updated 22 ಜೂನ್ 2024, 13:54 IST
ಅಕ್ಷರ ಗಾತ್ರ

ಮೂಡಿಗೆರೆ: ‘ಅಧಿಕಾರಕ್ಕಾಗಿ ಸಿದ್ಧಾಂತ ಬದಿಗಿಡುವ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ’ ಎಂದು ಎಸ್‌ಡಿಪಿಐ ಕ್ಷೇತ್ರ ಸಮಿತಿ ಅಧ್ಯಕ್ಷ ಅಂಗಡಿ ಚಂದ್ರು ಆರೋಪಿಸಿದರು.

ಪಟ್ಟಣದ ಜೆ.ಎಂ. ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಶನಿವಾರ ನಡೆದ 16ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ನಂತರ ಭಾರತವನ್ನು ಕಾಂಗ್ರೆಸ್ ಹಾಳುಗೆಡವಿತ್ತು. ಈಗ ಬಿಜೆಪಿ ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಅಧಿಕಾರದಲ್ಲಿರುವ ಬಿಜೆಪಿಯ ಧೋರಣೆಯನ್ನೆ ವಿರೋಧ ಪಕ್ಷ ಕಾಂಗ್ರೆಸ್ ಅನುಸರಿಸುತ್ತಿದೆ. ಈ ಎರಡು ಪಕ್ಷಗಳಿಗೂ ಬದ್ಧತೆ ಇಲ್ಲ. ಜೆಡಿಎಸ್ ವಿಧಿ ಇಲ್ಲದೆ ಬಿಜೆಪಿಯೊಂದಿಗೆ ಸೇರಿಕೊಂಡಿದೆ. ಈಗ ಮೂರು ಪಕ್ಷಗಳ ಸಿದ್ಧಾಂತವು ಒಂದೇ ಆಗಿದೆ. ಒಡೆದಾಳುವ ನೀತಿಯನ್ನು ಮೂರು ಪಕ್ಷಗಳು ಸಿದ್ಧಾಂತವನ್ನಾಗಿ ಮಾಡಿಕೊಂಡಿವೆ ಎಂದು ಅವರು ದೂರಿದರು.

ಯಾವ ಸಮುದಾಯದ ಅಭಿವೃದ್ಧಿ ಬಯಸದ ಈ ಪಕ್ಷಗಳ ಚಿಂತನೆಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ. ಸಂವಿಧಾನ ಬದಲಾಯಿಸುವ ಮಟ್ಟಕ್ಕೆ ಬಿಜೆಪಿ ಇಳಿದಿದ್ದರೆ ಕಾಂಗ್ರೆಸ್ ಏನು ಗೊತ್ತಿಲ್ಲದಂತೆ ನಾಟಕವಾಡುತ್ತಾ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ 10 ವರ್ಷ ಆಡಳಿತ ನಡೆಸಿ ಜನಾಂಗಗಳ ಮಧ್ಯೆ ದ್ವೇಷ ಸಾಧಿಸಿದ್ದು ಬಿಟ್ಟರೆ ಬೇರೆ ಏನ್ನನ್ನೂ ಮಾಡಲಿಲ್ಲ ಎಂದು ಚಂದ್ರು ಆರೋಪಿಸಿದರು.

ಎಸ್‌ಡಿಪಿಐ ಪದಾಧಿಕಾರಿ ರಿಜ್ವಾನ್ ಹುಸೇನ್ ಮಾತನಾಡಿ, ‘ಐದು ವರ್ಷಗಳ ಹಿಂದೆ ವಿರೋಧ ಪಕ್ಷದಲ್ಲಿರಬೇಕಾದ ಕಾಂಗ್ರೆಸ್ ತನ್ನ ಧೋರಣೆಯಿಂದ ನೆಲಕಚ್ಚಿ ವಿರೋಧ ಪಕ್ಷದ ಸ್ಥಾನದಲ್ಲಿರಲು ಸಾಧ್ಯವಾಗಲಿಲ್ಲ. ಈ ಬಾರಿ ತಕ್ಕಮಟ್ಟಿಗೆ ಕಾಂಗ್ರೆಸ್ ಚೇತರಿಸಿಕೊಂಡರೂ, ವಿಪಕ್ಷ ಸ್ಥಾನ ಅಲಂಕರಿಸಿಕೊಂಡರೂ ದೇಶದ ಜನರು ಎರಡು ಪಕ್ಷಗಳ ಧೋರಣೆ ಒಂದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರಿಂದಾಗಿ ಕೇಂದ್ರದಲ್ಲಿ ಈ ಭಾರಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಬೇಕಾಯಿತು. ಎಸ್‌ಡಿಪಿಐ ಹೋರಾಟದಿಂದ ಬಂದ ಪಕ್ಷವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ಸಜ್ಜುಗೊಂಡಿದೆ. ಮುಂದಿನ ಚುನಾವಣೆಗಳಲ್ಲಿ ಅಧಿಕಾರಕ್ಕೆರಲು ಎಸ್‌ಡಿಪಿಐ ಸಿದ್ಧವಾಗಿದೆ’ ಎಂದರು.

ಎಸ್‌ಡಿಪಿಐ ಮುಖಂಡರಾದ ರಿಜ್ವಾನ್ ಹುಸೇನ್, ಕೆ.ಪಿ. ಖಾಲಿದ್, ಎಂ.ಯು. ಶರೀಫ್, ರಿಜ್ವಾನ್ ಫಲ್ಗುಣಿ, ನಾಗೇಶ್ ಸಾಲುಮರ, ಸಂತೋಷ್, ಆತಿಫ್, ರಫಿಕ್, ಪಿ.ಕೆ. ಹನೀಫ್, ಜಾವಿದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT