ಸೋಮವಾರ, ನವೆಂಬರ್ 18, 2019
°C
ಕಾಡಿನಲ್ಲೇ ಬಿಟ್ಟು ಪರಾರಿಯಾದ ಯುವಕ

ಕಗ್ಗನಳ್ಳ ಕಾಡಿನಲ್ಲಿ ಯುವತಿಗೆ ಚಾಕುವಿನಿಂದ ಇರಿತ

Published:
Updated:

ಬಾಳೆಹೊನ್ನೂರು: ಬಾಳೆಹೊನ್ನೂರು –ಕಳಸ ನಡುವಿನ ಮಾಗುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಲ್ ಗೋಡು ಕಗ್ಗನಳ್ಳ ಮಧ್ಯದ ಕಾಡಿನಲ್ಲಿ ಯುವತಿಗೆ ಚಾಕುವಿನಿಂದ ಇರಿದು, ಯುವಕನೊಬ್ಬ ಪರಾರಿಯಾಗಿದ್ದಾನೆ.

ಬಾಳೆಹೊನ್ನೂರು ಸಮೀಪದ ಗಡಿಗೇಶ್ವರದ ಮಿಥುನ್ ಹಾಗೂ ಖಾಂಡ್ಯ ಸಮೀಪ ಬಾಸಾಪುರದ ಬಿಂದು ಮಂಗಳವಾರ ಹೊರನಾಡು, ಕ್ಯಾತನಮಕ್ಕಿಗೆ ಬೈಕ್‌ನಲ್ಲಿ ತೆರಳಿದ್ದರು. ಮಹಾಲ್ ಗೋಡು ಬಳಿಯ ಕಾಡಿನ ನಡುವೆ ಹರಿಯುವ ಭದ್ರಾ ನದಿಯಲ್ಲಿನ ಕಲ್ಲಿನ ಬಂಡೆ ಮೇಲೆ ಇಬ್ಬರೂ ಕುಳಿತು ಸಂಜೆಯವರೆಗೂ ಮಾತುಕತೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಆ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಯುವಕ ಆಕೆಯನ್ನು ಬಂಡೆಯ ಮೇಲಿಂದ ಭದ್ರಾ ನದಿಗೆ ನೂಕಿದ್ದಾನೆ. ಅಲ್ಲಿಂದ ಎದ್ದು ಆಕೆ ಮೇಲೆ ಬರುತ್ತಿದ್ದಂತೆ ಕಲ್ಲು ತೂರಿ ಗಾಯಗೊಳಿಸಿದ್ದಾನೆ. ಮತ್ತೆ ಆಕೆ ರಸ್ತೆಗೆ ಬರಲು ಪ್ರಯತ್ನಿಸುತ್ತಿದ್ದಂತೆ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ.

ಆದೇ ವೇಳೆ ಕಳಸ ಕಡೆಗೆ ತೆರಳುತ್ತಿದ್ದ ಸಂಸೆಯ ಪ್ರದೀಪ್‌ ಎಂಬುವರು ಆಕೆಯನ್ನು ಗಮನಿಸಿ ವಾಹನದಲ್ಲಿ ಕರೆದೊಯ್ದು ಕಳಸ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ಕುತ್ತಿಗೆ, ತಲೆ ಹಾಗೂ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಕಳಸದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಆರೋಪಿ ವಿರುದ್ಧ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ಟಿ. ತೇಜಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)