ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆರಿಗೆ ಹಂಚಿಕೆಯಲ್ಲಿ ತಾರತಮ್ಯ: ಕಾಂಗ್ರೆಸ್ ಪ್ರತಿಭಟನೆ

Published 7 ಫೆಬ್ರುವರಿ 2024, 14:54 IST
Last Updated 7 ಫೆಬ್ರುವರಿ 2024, 14:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಆಜಾದ್ ಪಾರ್ಕ್‌ ವೃತ್ತದಲ್ಲಿ ‘ನನ್ನ ತೆರಿಗೆ–ನನ್ನ ಹಕ್ಕು’ ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತು ಪ್ರತಿ ರಾಜ್ಯಗಳಿಗೆ ನ್ಯಾಯ ಕಲ್ಪಿಸಬೇಕು. ಆದರೆ, ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಆ ಮೂಲಕ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಕಿಡಿಕಾರಿದರು.

ರಾಜ್ಯದಿಂದ 27 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅತಿವೃಷ್ಟಿ, ಬರ ಪರಿಹಾರ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ನೀಡುವಂತೆ ಕೇಂದ್ರವನ್ನು ಪ್ರಶ್ನಿಸದೆ ಮೌನ ವಹಿಸಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನೇ ಬಿಟ್ಟಿ ಭಾಗ್ಯ ಎಂದು ಟೀಕಿಸುವ ಮೂಲಕ ಜನರ ಕಷ್ಟಗಳಿಗೆ ಧ್ವನಿಯಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಶೋಭಾ ಕರಂದ್ಲಾಜೆ ಎರಡು ಬಾರಿ ಜಿಲ್ಲೆಯ ಸಂಸದೆಯಾಗಿ, ಕೇಂದ್ರ ರೈತ ಕಲ್ಯಾಣ ಸಚಿವೆಯೂ ಆಗಿದ್ದಾರೆ. ಈವರೆಗೂ ರೈತರ ಸಮಸ್ಯೆ, ಕೇಂದ್ರದ ಅನುದಾನದ ಕುರಿತು ಒಮ್ಮೆಯೂ ಚರ್ಚಿಸಿಲ್ಲ. ಬದಲಾಗಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಕೋಮುದ್ವೇಷ ಹುಟ್ಟಿಸುವುದೇ ಬಿಜೆಪಿ ಕೆಲಸ. ಅಧಿಕಾರವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನು’ ಎಂದು ಪ್ರಶ್ನಿಸಿದರು.

ತೆರಿಗೆ ಪಾಲು ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿ ಖಂಡನೀಯ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿಕೊಡವರಂತೆ ಮೌನವಹಿಸದೆ ತುಟಿ ಬಿಚ್ಚಬೇಕು ಎಂದು ಆಗ್ರಹಿಸಿದರು.

ಮುಖಂಡ ಎಂ.ಎಲ್‌.ಮೂರ್ತಿ ಮಾತನಾಡಿ, ‘ಕೇಂದ್ರಕ್ಕೆ ಅಧಿಕ ತೆರಿಗೆ ಆದಾಯ ತಂದುಕೊಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ವಿರೋಧ ಪಕ್ಷದ ರಾಜ್ಯಗಳಿಗೆ ತಾರತಮ್ಯ ಮಾಡುವುದು ಸರಿಯಲ್ಲ’ ಎಂದು ಖಂಡನೆ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್‌, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದಸ್ವಾಮಿ, ಮುಖಂಡರಾದ ಡಿ.ಎಲ್‌. ವಿಜಯ್‌ಕುಮಾರ್, ಎಂ.ಡಿ.ರಮೇಶ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಹನೀಫ್‌, ಹರೀಶ್‌, ಸಿ.ಎನ್‌.ಅಕ್ಮಲ್‌, ತನೋಜ್‌ಕುಮಾರ್,  ಭರತೇಶ್‌, ಹುಣಸೇಮಕ್ಕಿ ಲಕ್ಷ್ಮಣ ಭಾಗವಹಿಸಿದ್ದರು.

ಮೂರ್ಖ ಸಂಸದರನ್ನು ಆಯ್ಕೆ ಮಾಡಿದ್ದೇವೆ!

‘ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಅನುದಾನ ಸವಲತ್ತುಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದ 25 ಬಿಜೆಪಿ ಮೂರ್ಖ ಸಂಸದರನ್ನು ಆಯ್ಕೆ ಮಾಡಿದ್ದೇವೆ’ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್‌.ದೇವರಾಜ್ ಲೇವಡಿ ಮಾಡಿದರು.

‘ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಪ್ರತಿಭಟನೆ ರಾಜ್ಯದ ಜನರ ಹಿತಕ್ಕಾಗಿಯೇ ಹೊರತು ಕಾಂಗ್ರೆಸ್ ಹಿತಕ್ಕಾಗಿ ಅಲ್ಲ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದು ಯಾಕೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ರೈತರು ಕಾರ್ಮಿಕರು ದಲಿತರು ಸೇರಿದಂತೆ ಹಲವು ವರ್ಗದ ಜನರ ಸಮಸ್ಯೆಗಳಿಗೆ ಆಯ್ಕೆಯಾಗಿರುವ ಬಿಜೆಪಿ ಯಾವುದೇ ಸಂಸದರು ಕರ್ನಾಟಕದ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಅಂತಹ ಮೂರ್ಖ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT