ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ | ಪಾದಚಾರಿಗಳ ಸಂಚಾರ ಪ್ರಯಾಸ

ಪಟ್ಟಣದ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿಯೇ ನಿಲ್ಲುವ ಮಳೆ ನೀರು
Published 10 ಜುಲೈ 2024, 7:06 IST
Last Updated 10 ಜುಲೈ 2024, 7:06 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಹಾದು ಹೋಗುವ ಮುಖ್ಯರಸ್ತೆಯ ಮೇಲೆಯೇ ನಿಲ್ಲುವ ಮಳೆ ನೀರಿನಿಂದ ಪಾದಚಾರಿಗಳು ಸಂಚಾರ ಮಾಡುವುದೇ ಪ್ರಯಾಸವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪ್ರಮುಖವಾಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪದಿಂದ ಪ್ರವಾಸಿ ಮಂದಿರದವರೆಗೆ ಹಾದು ಹೋಗಿರುವ ಕೆಂಗಲ್ ಹನುಮಂತಯ್ಯ ಅವರ ಕಾಲದಲ್ಲಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಕೆಲವು ಕಡೆ ರಸ್ತೆ ಕುಸಿತವು ಆಗಿದೆ. ಪಟ್ಟಣದ ಹಲವು ವಾರ್ಡ್‌ಗಳ ಜನರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯ ಮೂಲಕ ಪಟ್ಟಣಕ್ಕೆ ಬರುವುದರಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಮಳೆ ನೀರು ಪಾದಚಾರಿಗಳ ಮೇಲೆ ಎರಚುವುದು ಮಾಮೂಲಿ ಸಂಗತಿಯಾಗಿದೆ.

ಗುಂಡಿ ಬಿದ್ದ ಸ್ಥಳದಲ್ಲಿ ನೀರು ನಿಲ್ಲುವುದರಿಂದ ರಸ್ತೆ ಯಾವುದು ಗುಂಡಿಯಾವುದು ಎಂಬುದು ವಾಹನ ಸವಾರರಿಗೆ ತಿಳಿಯದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಾಹನ ಸವಾರರು.

ಪಟ್ಟಣ ಪಂಚಾಯಿತಿಯಿಂದ ಬಸ್ ನಿಲ್ದಾಣದವರೆಗೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯು ಅಲ್ಲಲ್ಲಿ ಶಿಥಿಲವಾಗಿರುವುದರಿಂದ ಮಳೆ ಬಂದಾಗ ರಸ್ತೆಯ ಮೇಲೆ ನೀರು ನಿಲ್ಲುತ್ತದೆ.

ಸುಂಕದಕಟ್ಟೆಯಿಂದ ಪ.ಪಂಯ ಸಮೀಪದವರೆಗೆ ವರ್ಷಗಳ ಹಿಂದೆ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಯ ಮೇಲೆ, ಅಗ್ರಹಾರದ ಬಸ್ ನಿಲ್ದಾಣದ ವ್ಯಾಪ್ತಿಯಲ್ಲಿ, ಮಿನಿವಿಧಾನ ಸೌಧದ ಸಮೀಪವಿರುವ ಬಸ್ ನಿಲ್ದಾಣದ ಮುಂಭಾಗ ನೀರು ನಿಲ್ಲುವುದರಿಂದ ಬಸ್‌ಗಾಗಿ ಕಾಯುವವರ ಮೇಲೆ ಕೆಸರು ನೀರು ಹಾರುತ್ತಿದೆ. ನೀರು ಸರಾಗವಾಗಿ ಹರಿಯಲು ಇಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲವಾಗಿದೆ.

ಪಟ್ಟಣದ ಹಲವು ವಾರ್ಡ್‌ಗಳಲ್ಲಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳು ಈಚೆಗೆ ಮುಚ್ಚಲಾಗಿದ್ದು, ಇನ್ನೂ ಕೆಲವು ಕಡೆ ಗುಂಡಿಗಳು ಹಾಗೇ ಉಳಿದಿವೆ. ಪಟ್ಟಣದ ಅಜಾದ್ ಗಲ್ಲಿ ವ್ಯಾಪ್ತಿಯಲ್ಲಿ ಹಾದು ಹೋಗುವ ಮೋರಿಯ ಬಳಿ ರಸ್ತೆಗುಂಡಿ ಬಿದ್ದಿದ್ದು, ವಾಹನ ಸಂಚಾರ ದುಃಸ್ತರವಾಗಿದೆ.

ಪ್ರವಾಸಿ ಮಂದಿರ ಸಮೀಪದಿಂದ ಹಳೇಮಂಡಗದ್ದೆ ಸರ್ಕಲ್‌ವರೆಗೆ ರಸ್ತೆ ಸಂಪೂರ್ಣವಾಗಿ ಶಿಥಿಲವಾಗಿದ್ದು, ಓಡಾಡುವುದೇ ಕಷ್ಟಕರವಾಗಿದೆ. ರಸ್ತೆಯ ಮೇಲೆ ನೀರು ನಿಲ್ಲುವುದರಿಂದ ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದ ಸ್ಥಿತಿಯಿದ್ದು, ರಸ್ತೆ ದುರಸ್ತಿಪಡಿಸುವತ್ತ ಸಂಬಂಧಪಟ್ಟವರು ಕ್ರಮಕೈಗೊಂಡಿಲ್ಲ ಎಂದು ವಾಹನ ಸವಾರ ಸುನಿಲ್ ಹೇಳಿದರು.

ರಸ್ತೆ ನಿರ್ಮಾಣಕ್ಕೆ ₹40 ಲಕ್ಷ ಅನುದಾನ ಬಿಡುಗಡೆ

ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ಹೊಸ ರಸ್ತೆ ನಿರ್ಮಾಣಕ್ಕೆ ಪ್ರಸ್ತುತ ₹40ಲಕ್ಷ ಅನುದಾನ ಬಿಡುಗಡೆಯಾಗಿದ್ದು ಮಳೆಗಾಲ ಮುಗಿದ ಕೂಡಲೇ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ರಸ್ತೆಯ ಬದಿ ನಿಲ್ಲುವ ನೀರನ್ನು ಸದ್ಯಕ್ಕೆ ಚರಂಡಿಗೆ ಹರಿಯುವಂತೆ ಮಾಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT