ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್ ಬೇಲಿ, ಆನೆ ಶಿಬಿರ ಸ್ಥಾಪಿಸಲು ಒತ್ತಾಯ

ಬೆಳೆಗಾರರ ಒಕ್ಕೂಟದೊಂದಿಗೆ ಶಾಸಕಿ ನಯನ ಮೋಟಮ್ಮ ಸಭೆ
Published 23 ನವೆಂಬರ್ 2023, 14:53 IST
Last Updated 23 ನವೆಂಬರ್ 2023, 14:53 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಲ್ಲಿ ಸಂಭವಿಸುತ್ತಿರುವ ಕಾಡಾನೆ ದಾಳಿಯನ್ನು ಶಾಶ್ವತವಾಗಿ ನಿಯಂತ್ರಿಸಲು ತುರ್ತಾಗಿ ಸೋಲಾರ್ ಬೇಲಿ ಹಾಗೂ ಆನೆ ಶಿಬಿರವನ್ನು ತೆರೆಯಬೇಕು ಎಂದು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಬಾಳೂರು ಒತ್ತಾಯಿಸಿದರು.

ಪಟ್ಟಣದ ಸುಶಾಂತ್ ನಗರದಲ್ಲಿರುವ ಶಾಸಕಿ ನಯನಾ ಮೋಟಮ್ಮ ಅವರ ಗೃಹ ಕಚೇರಿಯಲ್ಲಿ ಗುರುವಾರ ಕಾಡಾನೆ ದಾಳಿ ಪರಿಹಾರ ಕುರಿತು ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 30 ಕ್ಕೂ ಅಧಿಕ ಕಾಡಾನೆಗಳು ನಿತ್ಯವ ಸಂಚರಿಸಿ ಬೆಳೆ, ಜೀವ ಹಾನಿ ಮಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಕೂಡಲೇ ಮೂಡಿಗೆರೆ, ಸಕಲೇಶಪುರ ತಾಲ್ಲೂಕುಗಳನ್ನೊಳಗೊಂಡ ಪ್ರದೇಶದಲ್ಲಿ ಸಕ್ರೇಬೈಲ್‌ನಲ್ಲಿರುವ ಆನೆ ಶಿಬಿರದ ಮಾದರಿಯಲ್ಲಿಯೇ ಶಿಬಿರವನ್ನು ಸ್ಥಾಪಿಸಿದರೆ ಶಾಶ್ವತ ಪರಿಹಾರವನ್ನು ಕಾಣಬಹುದು. ಕಾಡಾನೆಗಳು ಅರಣ್ಯದಿಂದ ಹೊರ ಬರದಂತೆ ಸೋಲಾರ್ ಬೇಲಿಯನ್ನು ನಿರ್ಮಿಸಿದರೆ ಬೆಳೆಹಾನಿಯನ್ನು ತಡೆಯಬಹುದು’ ಎಂದರು.

ಬೆಳೆಗಾರರ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಬಿದರಹಳ್ಳಿ ಜಯರಾಂ ಮಾತನಾಡಿ, ‘ಕಾಡಾನೆ ದಾಳಿಯಿಂದ ಹಾನಿಗೊಳಗಾದ ಬೆಳೆಗೆ ನೀಡುವ ಪರಿಹಾರವು ವೈಜ್ಞಾನಿಕವಾಗಿಲ್ಲ. ಕಾಡಾನೆ ದಾಳಿ ನಡೆಸುತ್ತಿರುವ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ರೈತರು ವನ್ಯಪ್ರಾಣಿಗಳ ದಾಳಿಯಿಂದ ಬೆಳೆ ಕಳೆದುಕೊಂಡಿದ್ದಾರೆ. ಹಾನಿಯಾದ ಬೆಳೆಗೆ ವೈಜ್ಞಾನಿಕ ಪರಿಹಾರವನ್ನು ನೀಡುವಂತೆ ಯೋಜನೆ ರೂಪಿಸಬೇಕು. ಕೇರಳದಲ್ಲಿ ನಿರ್ಮಿಸಿರುವ ಮಾದರಿಯಲ್ಲಿ ರೈಲ್ವೆ ಹಳಿಗಳ ಬೇಲಿಯನ್ನು ನಿರ್ಮಿಸಬೇಕು’ ಎಂದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ಕ್ಷೇತ್ರದಲ್ಲಿ ಜೀವಹಾನಿಯಂತಹ ಘಟನೆಗಳು ಮರುಕಳುಹಿಸಬಾರದು. ಕಾಡಾನೆ ದಾಳಿಯನ್ನು ಸಮರ್ಪಕವಾಗಿ ತಡೆಯಲು ಅರಣ್ಯ ಇಲಾಖೆಯು ಕಾರ್ಯ ಪ್ರವೃತ್ತವಾಗಬೇಕು. ಭೈರಾಪುರ, ಹೊಸ್ಕೆರೆ ಭಾಗಗಳಲ್ಲಿ ಹಾಗೂ ಆಲ್ದೂರು ವಲಯದಲ್ಲಿ ದಾಳಿ ನಡೆಸುತ್ತಿರುವ ಕಾಡಾನೆಯನ್ನು ಹಿಡಯಲು ಎರಡೂ ಭಾಗದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಕಾಡಾನೆಗಳನ್ನು ಹಿಡಿಯಬೇಕು. ಈಗಾಗಲೇ ಮಂಜೂರಾತಿ ದೊರೆತಿರುವ ಸೋಲಾರ್ ಬೇಲಿ ಕಾಮಗಾರಿಯನ್ನು ತ್ವರಿತವಾಗಿ ನಡೆಸಿ, ಕಾಡಾನೆಗಳು ರೈತರ ಜಮೀನಿಗೆ ಬರದಂತೆ ತಡೆಯಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಂದ್ರೇಗೌಡ, ಊರುಬಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಪಿ ಭಾರತಿ, ಮರಗುಂದಪ್ರಸನ್ನ, ಚಿಕ್ಕಳ್ಳ ಶಂಕರ್, ನಿಶಾಂತ್ ಪಟೇಲ್, ಸುಧೀರ್, ಆಶ್ರಿತ್, ಹರೀಶ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್ ವಿವಿಧ ಹೋಬಳಿ ಘಟಕಗಳ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT