ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿಎಂ: ವಾರ್ಡ್ ಸಿದ್ಧವಿದೆ; ಆದರೆ ವೈದ್ಯರಿಲ್ಲ!

Last Updated 3 ಏಪ್ರಿಲ್ 2020, 10:33 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ತಡೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಫಿಜಿಶಿಯನ್ ವೈದ್ಯರಿಲ್ಲದೇ ರೋಗಿಗಳು ಜಿಲ್ಲಾ ಆಸ್ಪತ್ರೆ ಕಡೆಗೆ ಮುಖ ಮಾಡುವಂತಾಗಿದೆ.

ತಾಲ್ಲೂಕಿನಲ್ಲಿ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಂಜಿಎಂ ಆಸ್ಪತ್ರೆಯಲ್ಲಿ ಹಲವು ಸೇವಾ ಮನೋಭಾವದ ವೈದ್ಯರಿಂದಾಗಿ ಇತ್ತೀಚೆಗೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಆಸ್ಪತ್ರೆಯಲ್ಲಿ ಐದು ಹಾಸಿಗೆಗಳಿಗೆ ಮೀಸಲಾದ ಒಂದು ವಾರ್ಡ್‌ ಅನ್ನು ಪ್ರತ್ಯೇಕವಾಗಿ ಕೊರೊನಾ ವೈರಸ್ ತಡೆಗಾಗಿಯೇ ಮೀಸಲಿಡಲಾಗಿದೆ. ಆದರೆ ಕೊರೊನಾ ಲಕ್ಷಣಗಳಾದ ಕೆಮ್ಮು, ಶೀತ, ಜ್ವರದಂತಹ ರೋಗಗಳನ್ನು ಯಾರು ಪರೀಕ್ಷಿಸಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಆಸ್ಪತ್ರೆಯಲ್ಲಿರುವ ವೈದ್ಯರು ತಮ್ಮ ಪರಿಣತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೋಗಿಗಳನ್ನು ಪರೀಕ್ಷಿಸುತ್ತಿದ್ದಾರೆ. ಹೊರರೋಗಿಗಳು ಕೂಡ ಆಯಾ ರೋಗಗಳಿಗೆ ಸಂಬಂಧಿಸಿದ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಿಜಿಶಿಯನ್ ವೈದ್ಯರಿಲ್ಲದ ಕಾರಣ ಕೊರೊನಾ ಲಕ್ಷಣವಿರುವ ರೋಗಿಯು ಯಾರ ಬಳಿ ತಪಾಸಣೆಗೆ ಒಳಗಾಗಬೇಕು ಎಂಬ ವಿಚಾರದಲ್ಲಿ ಜಿಜ್ಞಾಸೆ ಮೂಡಿದೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆಯ ಬಾಗಿಲಿನಲ್ಲಿಯೇ ಸಾಮಾಜಿಕ ಅಂತರಕ್ಕೆ ಒಳಪಡಿಸಲಾಗುತ್ತಿದೆ. ಆಸ್ಪತ್ರೆಯ ಗ್ರೂಪ್ ಡಿ ಸಿಬ್ಬಂದಿ ಆಯಾ ವೈದ್ಯರ ಬಳಿಗೆ ಸಾಮಾಜಿಕ ಅಂತರದಲ್ಲಿಯೇ ಕರೆದೊಯ್ಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಶುಚಿತ್ವಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ದಿನವೂ ಎರಡು ಬಾರಿ ಆಸ್ಪತ್ರೆಯನ್ನು ಶುಚಿಗೊಳಿಸಲಾಗುತ್ತಿದ್ದು, ಡಿ ಗ್ರೂಪ್ ನೌಕರರಿಂದ ವೈದ್ಯರವರೆಗೂ ಎಲ್ಲರೂ ಮುಖಗವಸು ಧರಿಸುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

‘ತಾಲ್ಲೂಕಿನ ಎಲ್ಲಾ ವೈದ್ಯರಿಗೆ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲಾಗಿದೆ. ಪ್ರಾರಂಭದಲ್ಲಿ ಕಂಡು ಬಂದ ಕೊರೊನಾ ಶಂಕಿತ ವ್ಯಕ್ತಿಯನ್ನು ಸೂಕ್ತವಾಗಿಯೇ ತಪಾಸಣೆ ನಡೆಸಿ, ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಈಗಲೂ ಕೊರೊನಾ ಶಂಕಿತ ವ್ಯಕ್ತಿಗಳು ಕಂಡು ಬಂದರೆ ಅವರಿಗೆ ಪ್ರತ್ಯೇಕವಾಗಿರಿಸಲು ವಾರ್ಡ್ ಮೀಸಲಿಟ್ಟಿದ್ದು, ಅಲ್ಲಿಯೇ ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆಗೆ ಕ್ರಮ ಕೈಗೊಳ್ಳುತ್ತೇವೆ. ಕೊರೊನಾ ಬಗ್ಗೆ ಯಾರಿಗೂ ಭಯ ಬೇಡ. ಆದರೆ ಈಗಾಗಲೇ ತಾಲ್ಲೂಕಿನಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ 38 ವ್ಯಕ್ತಿಗಳು ಮನೆ ಬಿಟ್ಟು ಹೊರ ಬರಬಾರದು. ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು’ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸುಂದ್ರೇಶ್.

ಎಂಜಿಎಂ ಆಸ್ಪತ್ರೆಗೆ ಫಿಜಿಶಿಯನ್ ವೈದ್ಯರನ್ನು ನೇಮಿಸುವ ಮೂಲಕ ರೋಗಿಗಳಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಸಿಗಲು ನೆರವಾಗಬೇಕು ಎಂಬುದು ರೋಗಿಗಳ ಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT