ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಬಿಸಿಲ ತಾಪ: ಎಳೆನೀರಿಗೆ ಬೆಲೆ, ಬೇಡಿಕೆ ಹೆಚ್ಚಳ

ತೋಟಗಳಲ್ಲಿ ಎಳನೀರು ಲಭ್ಯತೆ ಪ್ರಮಾಣವೂ ಇಳಿಕೆ
Published 23 ಫೆಬ್ರುವರಿ 2024, 5:01 IST
Last Updated 23 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ಕಡೂರು: ಒಂದೆಡೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಇನ್ನೊಂಡೆ ಎಳೆನೀರಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚುತ್ತಿದೆ. ತೋಟಗಳಲ್ಲಿ ಎಳನೀರು ಲಭ್ಯತೆ ಪ್ರಮಾಣವೂ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚುತ್ತಿದೆ.

ಎಳನೀರು ವ್ಯಾಪಾರಿಗಳು ಒಂದು ಸಾವಿರ ಎಳನೀರಿಗೆ ₹15 ಸಾವಿರದಿಂದ ₹17 ಸಾವಿರ ದರದಲ್ಲಿ  ಖರೀದಿಸುತ್ತಾರೆ. ರೈತರು ಒಂದು ಸಾವಿರ ಎಳನೀರಿಗೆ 100 ಎಳೆನೀರನ್ನು ಉಚಿತವಾಗಿ ವ್ಯಾಪಾರಿಗಳಿಗೆ ನೀಡಬೇಕು. ರೈತರಿಗೆ ಒಂದು ಸಾವಿರ ಎಳನೀರು ಮಾರಾಟ ಮಾಡಿದಾಗ ₹13,500 ಸಿಗುತ್ತದೆ.

ತೆಂಗಿನ ಕಾಯಿಗಿಂತ ಎಳನೀರು ಮಾರಾಟದಲ್ಲೇ ಲಾಭ ಹೆಚ್ಚು ಎನ್ನುತ್ತಾರೆ ರೈತರು.

ಬಿಸಿಲಿನ ತಾಪ ಹೆಚ್ಚಿರುವುದರಿಂದ ಎಳನೀರಿಗೆ ಬೇಡಿಕೆ ಹೆಚ್ಚಿದೆ. ಚಿಲ್ಲರೆ ಮಾರಾಟಗಾರರು ವ್ಯಾಪಾರಿಗಳಿಂದ  ಒಂದು ಎಳೆನೀರಿಗೆ ₹23 ರಿಂದ ₹25 ದರದಲ್ಲಿ ಖರೀದಿಸಿ ತಂದು ಮಾರುತ್ತಾರೆ. ಚಿಲ್ಲರೆಯಾಗಿ ಒಂದು ಎಳನೀರಿಗೆ ₹35 ಬೆಲೆ ಇದೆ.

ಕೆಲ ವ್ಯಾಪಾರಿಗಳು ಒಮ್ಮೆಗೆ ಸುಮಾರು 6 ಸಾವಿರ ಎಳನೀರನ್ನು ಒಟ್ಟುಗೂಡಿಸಿ ಪಿಕಪ್ ವಾಹನದಲ್ಲಿ ಮಂಗಳೂರಿನ ಕಡೆಗೆ ಕೊಂಡೊಯ್ಯುತ್ತಾರೆ. ಕಾರ್ಕಳ, ಮೂಡಬಿದರೆ, ಮಣಿಪಾಲ ಮುಂತಾದೆಡೆ ಎಳನೀರಿಗೆ ಹೆಚ್ಚಿನ ಬೇಡಿಕೆಯಿದೆ. ಅಲ್ಲಿ ನೂರು ಎಳನೀರಿಗೆ ₹3000 ಬೆಲೆಯಿದೆ. ಎಳನೀರು ಕೆಡವುವ, ವಾಹನದ ಖರ್ಚು ಮುಂತಾದವುಗಳನ್ನು ಕಳೆದು ಒಂದು ಎಳನೀರಿಗೆ ₹4 ರಿಂದ ₹5  ಲಾಭ ದೊರೆಯುತ್ತದೆ ಎನ್ನುತ್ತಾರೆ ಮಚ್ಚೇರಿಯ ಎಳನೀರು ವ್ಯಾಪಾರಿ ಓಂಕಾರಪ್ಪ.

ಮುಂಬೈಗೆ ಎಳನೀರು ಕಳಿಸುವ ವ್ಯಾಪಾರಿಗಳು ಒಂದು ಎಳನೀರಿಗೆ ₹28 ರಿಂದ ₹30 ದರದಲ್ಲಿ ಎಳೆನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಅವರಿಗೆ ಎಳೆನೀರು ನೀಡುತ್ತಿರುವುದರಿಂದಲೂ ಚಿಲ್ಲರೆ ವ್ಯಾಪಾರಿಗಳಿಗೆ ಎಳನೀರು ದೊರೆಯುವುದು ತುಸು ಕಷ್ಟವಾಗಿದೆ.

‘ಸಿಗುವುದೇ ಕಷ್ಟ’

ಇನ್ನೆರಡು ವಾರ ಕಳೆದರೆ ಎಳೆನೀರು ಸಿಗುವುದೇ ಕಷ್ಟವಾಗುತ್ತದೆ. ಚಿಲ್ಲರೆ ಮಾರಾಟಗಾರರು ₹30 ಕೊಡುತ್ತೇವೆಂದರೂ ಸಿಗುವುದು ಕಷ್ಟ ಎನ್ನುತ್ತಾರೆ ಕಡೂರಿನ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಎಳನೀರು ವ್ಯಾಪಾರಿ ಲೋಕೇಶಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT