ಸೋಮವಾರ, ಡಿಸೆಂಬರ್ 6, 2021
27 °C
ಕುವೆಂಪು ವಿಶ್ವವಿದ್ಯಾಲಯದಿಂದ ಪ್ರವೇಶ ಮಿತಿ ಆದೇಶ

ಐಡಿಎಸ್‌ಜಿ ಕಾಲೇಜು: ಪ್ರವೇಶಾತಿ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾನಿಲಯವು ಪದವಿ ಪ್ರವೇಶಕ್ಕೆ ಸೀಟು ಮಿತಿ ನಿಗದಿಪಡಿಸಿದ್ದು, ನಗರದ ಐಡಿಎಸ್‌ಜಿ ಕಾಲೇಜು ಸಹಿತ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಗೊಂದಲ ಸೃಷ್ಟಿಸಿದೆ. ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

ಪದವಿ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಮಾಸ್ಟರ್‌, ಕಾಲೇಜ್‌, ಸ್ಟೂಡೆಂಟ್‌ ಲಾಗ್‌ಇನ್‌ ಮೂಲಕ ಅರ್ಜಿ ಅಪ್‌ಲೋಡ್‌ ಮಾಡಲಾಗಿದೆ. ಅರ್ಜಿ ಸಲ್ಲಿಸಿದ್ದವರಲ್ಲಿ ಹಲವರ ಹೆಸರು ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ಇಲ್ಲ. ಇದು ಗೊಂದಲಕ್ಕೆ ಎಡೆಮಾಡಿದೆ.

ವಿಶ್ವವಿದ್ಯಾಲಯವು ಪದವಿ ಪ್ರವೇಶಾತಿಗೆ ಬಿ.ಎ ವಿಭಾಗದಲ್ಲಿ ಸಂಯೋಜನೆವಾರು (ಎಚ್‌ಇಪಿ, ಎಚ್‌ಇಎಸ್‌…) ತರಗತಿಗೆ 90, ಬಿ.ಕಾಂಗೆ ತರಗತಿಗೆ 60, ಬಿ.ಎಸ್ಸಿ ವಿಭಾಗದಲ್ಲಿ ಸಂಯೋಜನೆವಾರು (ಪಿಸಿಎಂ, ಸಿಬಿಝಡ್‌…) ತರಗತಿಗೆ 40,ಸೀಟುಗಳ ಮಿತಿ ನಿಗದಿಪಡಿಸಿದೆ.

ಪ್ರವೇಶಾತಿ ಕೋರಿ ಬರುವ ಯಾವುದೇ ವಿದ್ಯಾರ್ಥಿಗೆ ಪ್ರವೇಶಾತಿ ನಿರಾಕರಿಸುವಂತಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರವೇಶಾತಿ ಮಾರ್ಗಸೂಚಿ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆ ದ್ವಂದ್ವದಿಂದಾಗಿ ಸಮಸ್ಯೆ ತಲೆದೋರಿದೆ.

ಬಿ.ಕಾಂ, ಬಿ.ಎಸ್ಸಿ ವಿಭಾಗದ ಪಿಸಿಎಂ, ಸಿಬಿಝಡ್‌ ಸಂಯೋಜನೆ ಪ್ರವೇಶಾತಿಗೆ ಬೇಡಿಕೆ ಹೆಚ್ಚು ಇದೆ. ಐಡಿಎಸ್‌ಜಿ ಕಾಲೇಜಿನಲ್ಲಿ ಬಿ.ಕಾಂ ಪ್ರವೇಶ ಕೋರಿ 350ಕ್ಕೂ ಹೆಚ್ಚು, ಬಿ.ಎಸ್ಸಿಯಲ್ಲಿ ಪಿಸಿಎಂಗೆ 120ಕ್ಕೂ ಹೆಚ್ಚು, ಸಿಬಿಝಡ್‌ಗೆ 120ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

‘ದ್ವಿತೀಯ ಪಿಯುನಲ್ಲಿ ಶೇ 87 ಅಂಕ ಗಳಿಸಿದ್ದೇನೆ. ಬಿ.ಕಾಂ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದೇನೆ. ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ಹೆಸರು ಇಲ್ಲ. ಸೀಟು ಸಿಗುತ್ತೋ ಇಲ್ಲವೋ, ಎಂದು ಆತಂಕವಾಗಿದೆ’ ಎಂದು ಐಡಿಎಸ್‌ಜಿ ಕಾಲೇಜು ಪ್ರವೇಶಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದಿನ ವರ್ಷಗಳಲ್ಲಿ ನಿಗದಿಗಿಂತ ಜಾಸ್ತಿ ಅರ್ಜಿಗಳು ಇದ್ದರೂ ಪ್ರವೇಶಾತಿ ನೀಡಲಾಗುತ್ತಿತ್ತು. ನಂತರ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಅನುಮತಿ ಪಡೆಯುತ್ತಿದ್ದೆವು. ಈ ವರ್ಷ ಆನ್‌ಲೈನ್‌ ಪ್ರಕ್ರಿಯೆಯಿಂದ ಗೊಂದಲವಾಗಿದೆ. ಪಿಯು ಪೂರಕ ಪರೀಕ್ಷೆಯಲ್ಲಿ ಪಾಸಾದವರಿಗೆ ಸೀಟು ನೀಡಬೇಕಿದೆ. ಅಲ್ಲದೇ ವೃತ್ತಿ ಶಿಕ್ಷಣ ಸೀಟು ಸಿಗದವರು ಬರುತ್ತಾರೆ. ಹೀಗಾಗಿ ಸಂಬಂಧಪಟ್ಟವರು ತಕ್ಷಣವೇ ಸಮಸ್ಯೆ ಪರಿಹರಿಸಬೇಕು’ ಎಂದು ಐಡಿಎಸ್‌ಜಿ ಕಾಲೇಜಿನ ಬೋಧಕರೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.