ಚಿಕ್ಕಮಗಳೂರು: ನಗರದ ಟೌನ್ ಕ್ಯಾಂಟೀನ್ ಬಳಿ ನೂತನವಾಗಿ ನಿರ್ಮಿಸಿರುವ ಡಿ.ಸಿ.ಶ್ರೀಕಂಠಪ್ಪ ವೃತ್ತದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲು ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರತಿಮೆಯನ್ನು ಅವರ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಅವರು ನಗರಸಭೆ ಅನುಮತಿ ಪಡೆದು ಟೌನ್ ಕ್ಯಾಂಟೀನ್ ಬಳಿ ಡಿ.ಸಿ.ಶ್ರೀಕಂಠಪ್ಪ ವೃತ್ತವನ್ನು ನಿರ್ಮಿಸಿದ್ದರು. ಆ ವೃತ್ತಕ್ಕೆ ಡಿ.ಸಿ.ಶ್ರೀಕಂಠಪ್ಪ ಅವರ ಪ್ರತಿಮೆಯನ್ನು ಸ್ಥಾಪಿಸಿ ಉದ್ಘಾಟಿಸುವ ಕಾರ್ಯವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟು ಪ್ರತಿಮೆ ಪ್ರತಿಷ್ಠಾಪನೆಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಅದನ್ನು ಡಿ.ಸಿ.ಶ್ರೀಕಂಠಪ್ಪ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಪ್ರಮೋದ್ ಮಧ್ವರಾಜ್ ಮಾತನಾಡಿ, ‘ಕಳೆದ ಲೋಕಸಭೆ ಚುನಾವಣೆ ವೇಳೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಾಯಕರ್ತರನ್ನು ಭೇಟಿಯಾದಾಗ ಡಿ.ಸಿ.ಶ್ರೀಕಂಠಪ್ಪ ಅವರ ನಂತರ ನಮಗೆ ಒಳ್ಳೆಯ ಎಂಪಿ ದೊರೆತಿಲ್ಲ ಎನ್ನತ್ತಿದ್ದರು. ಅವರ ಸರಳ ಸಜ್ಜನಿಕೆಯ ಬಗ್ಗೆ ಗುಣಗಾನ ಮಾಡುತ್ತಿದ್ದರು. ಜಿಲ್ಲೆಯ ಜನತೆ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿತ್ತು. ಹೀಗಾಗಿ ನನಗೆ ಟಿಕೆಟ್ ಸಿಗಲಿ ಬಿಡಲಿ ಡಿ.ಸಿ.ಶ್ರೀಕಂಠಪ್ಪ ಅವರ ವೃತ್ತವನ್ನು ನಗರದಲ್ಲಿ ನಿರ್ಮಿಸಬೇಕು ಎಂಬ ಹಂಬಲವಿತ್ತು. ಹೀಗಾಗಿ ನಗರಸಭೆ ಅನುಮತಿಯೊಂದಿಗೆ ವೃತ್ತ ನಿರ್ಮಿಸಿದ್ದೇನೆ. ಅವರ ಕುಟುಂಬದವರಿಂದಲೇ ಇಂದು ಉದ್ಘಾಟನೆ ಮಾಡಿಸುತ್ತಿದ್ದೇವೆ’ ಎಂದರು.
ಡಿ.ಸಿ.ಶ್ರೀಕಂಠಪ್ಪ ಅವರ ಪುತ್ರ ಅಶೋಕ್ ಮಾತನಾಡಿ, ‘ಈವರೆಗೆ ನಮ್ಮ ತಂದೆಯವರ ಸೇವಾ ಮನೋಭಾವವನ್ನು ಬಿಜೆಪಿ ಮತ್ತಿತರೆ ಯಾರೂ ಗುರುತಿಸಲಿಲ್ಲ. ಪ್ರಮೋದ್ ಮದ್ವರಾಜ್ ನಮ್ಮ ತಂದೆ ಹೆಸರಲ್ಲಿ ವೃತ್ತ ಸ್ಥಾಪಿಸಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ’ ಎಂದರು.
ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ‘ಡಿ.ಸಿ.ಶ್ರೀಕಂಠಪ್ಪ ಅವರನ್ನು ಬಯಲು ಸೀಮೆಯ ಗಾಂಧಿ ಎಂದರೆ ತಪ್ಪಾಗದು. ಹಿಂದೆಲ್ಲಾ ಮಲೆನಾಡಿನಿಂದ ಜನಪ್ರತಿನಿಗಳು ಗೆದ್ದು ಬರುತ್ತಿದ್ದ ಕಾಲದಲ್ಲಿ ಡಿ.ಸಿ.ಶ್ರೀಕಂಠಪ್ಪ ಬಯಲು ಭಾಗದಿಂದ ಸಂಸದರಾಗಿ ಆಯ್ಕೆಯಾದರು’ ಎಂದು ಹೇಳಿದರು. ಡಿ.ಸಿ.ಶ್ರೀಕಂಠಪ್ಪ ಅವರ ಪುತ್ರಿ ಆಶಾ ಮತ್ತಿತರರು ಇದ್ದರು.
‘ಕಾನೂನಿಗೆ ತಲೆ ಬಾಗುವೆ’
ಒಂದು ಯಡವಟ್ಟಾಗಿದೆ. ವೃತ್ತದಲ್ಲಿ ಡಿ.ಸಿ.ಶ್ರೀಕಂಠಪ್ಪ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಕೊಲ್ಕೋತ್ತದಿಂದ ಮೂರ್ತಿ ತರಿಸಿದ್ದೆ. ಆದರೆ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ನಾನು ಕಾನೂನಿಗೆ ತಲೆ ಬಾಗುವವನು. ಹೀಗಾಗಿ ಆ ಮೂರ್ತಿಯನ್ನು ಡಿ.ಸಿ.ಶ್ರೀಕಂಠಪ್ಪ ಅವರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.