‘ಇಂದಿರಾ ಕ್ಯಾಂಟಿನ್‌’ಗೆ ಉದ್ಘಾಟನೆ ಭಾಗ್ಯವಿಲ್ಲ

7
ಕಡಿಮೆ ದರದಲ್ಲಿ ಆಹಾರ ಒದಗಿಸುವ ಯೋಜನೆಗೆ ‘ಗ್ರಹಣ’

‘ಇಂದಿರಾ ಕ್ಯಾಂಟಿನ್‌’ಗೆ ಉದ್ಘಾಟನೆ ಭಾಗ್ಯವಿಲ್ಲ

Published:
Updated:
ನರಸಿಂಹರಾಜಪುರದ ಪಟ್ಟಣದ ಮುಖ್ಯರಸ್ತೆಯಲ್ಲಿ ನಿರ್ಮಾಣ ಮಾಡಿರುವ ಇಂದಿರಾ ಕ್ಯಾಂಟಿನ್ ಕಟ್ಟಡ

ನರಸಿಂಹರಾಜಪುರ: ಹಿಂದಿನ ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಕೂಡ ಅದು ಉದ್ಘಾಟನೆ ಭಾಗ್ಯ ಕಾಣದಂತಾಗಿದೆ ಎಂಬ ಆರೋಪ ಪಟ್ಟಣದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹಿಂದಿನ ಸಿಎಂ ತಾಲ್ಲೂಕು ಕೇಂದ್ರದ ಸೇತುವೆ ಕಾಮಗಾರಿ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ, ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸುವುದಾಗಿ ಘೋಷಿಸಿದ್ದರು. ಅದರಂತೆ ಪಟ್ಟಣದ ಬಸ್ ನಿಲ್ದಾಣದ ಸಮೀಪ ಐದನೇ ವಾರ್ಡ್‌ನಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಡಕ್ಕೆ ನಿವೇಶನ ಗುರುತಿಸಿ ಮಾರ್ಚ್‌ನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು.

ಇಂದಿರಾ ಕ್ಯಾಂಟಿನ್‌ಗೆ ಮೂಲ ಸೌಲಭ್ಯ ಒದಗಿಸಲು ಪಟ್ಟಣ ಪಂಚಾಯಿತಿ ವತಿಯಿಂದ ₹7.50 ಲಕ್ಷ ಮೀಸಲಿಡಲಾಗಿತ್ತು. ಇದರಲ್ಲಿ ಪ್ರಮುಖವಾಗಿ ನೀರಿನ ಸೌಲಭ್ಯ, ತಡೆಗೋಡೆ, ಸಿಸಿ ಕ್ಯಾಮೆರಾ ಅಳವಡಿಕೆ ಮತ್ತಿತರ ಸೌಲಭ್ಯಗಳು ಸೇರಿದ್ದವು. ಈ ನಡುವೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿ ಕುಂಟುತ್ತಾ ಸಾಗಿತು. ಪ್ರಸ್ತುತ ಸಂಪೂರ್ಣ ಮುಗಿಯುವ ಹಂತಕ್ಕೆ ತಲುಪಿದ್ದು ಇನ್ನೂ ಉದ್ಘಾಟನೆ ಆಗಿಲ್ಲ.

‘ಇಂದಿರಾ ಕ್ಯಾಂಟಿನ್ ಕಡಿಮೆ ಆದಾಯ ಇರುವವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಬೇಕೆಂಬ ಉದ್ದೇಶದಿಂದ ಹಿಂದಿನ ಸರ್ಕಾರ ಪ್ರಾರಂಭಿಸಿದ ಯೋಜನೆಯಾಗಿದೆ. ತಾಲ್ಲೂಕು ಕೇಂದ್ರದಲ್ಲೂ ಇದನ್ನು ಪ್ರಾರಂಭಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ವಿನಾಯಕ್ ಮಾಳೂರು ದಿಣ್ಣೆ ವಿನಾಯಕ್ ತಿಳಿಸಿದರು.

‘ಇಂದಿರಾ ಕ್ಯಾಂಟಿನ್ ಕಾಮಗಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ. ಅಲ್ಪ ಸ್ವಲ್ಪ ಕೆಲಸಗಳು ಬಾಕಿ ಉಳಿದಿವೆ. ಗುತ್ತಿಗೆದಾರರು ಪಟ್ಟಣ ಪಂಚಾಯಿತಿಗೆ ಕಟ್ಟಡವನ್ನು ಹಸ್ತಾಂತರಿಸಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್ ತಿಳಿಸಿದರು.

ಇಂದಿರಾ ಕ್ಯಾಂಟಿನ್ ಆರಂಭವಾಗಿದ್ದರೆ ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ತಿಂಡಿ, ಊಟದ ಸೌಲಭ್ಯ ಲಭ್ಯವಾಗುತ್ತಿತ್ತು. ಇದು ಆರಂಭವಾಗುವುದು ವಿಳಂಬವಾಗಿರುವುದರಿಂದ ಬಡವರು ಈ ಅವಕಾಶದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿ, ಕ್ಯಾಂಟೀನ್‌ ಸೌಲಭ್ಯ ಒದಗಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇಂದಿರಾ ಕ್ಯಾಂಟಿನ್ ಕಾಮಗಾರಿ ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಇದರ ಸೌಲಭ್ಯ ಜನಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು.
- ಟಿ.ಡಿ.ರಾಜೇಗೌಡ ಶಾಸಕ

ಇಂದಿರಾ ಕ್ಯಾಂಟಿನ್ ಆಹಾರ ಪೂರೈಕೆ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
- ಶ್ರೀರಂಗಯ್ಯ ಜಿಲ್ಲಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !