ಶನಿವಾರ, ಮಾರ್ಚ್ 6, 2021
30 °C
ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ ಕಡೂರು ಶಾಸಕ ಬೆಳ್ಳಿಪ್ರಕಾಶ್

ಬಯಲುಸೀಮೆ ಹಸಿರಾಗಿಸಲು ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ‘ಬರಗಾಲಗಳ ನಡುವೆ ಕೆಲವೊಮ್ಮೆ ಸಮೃದ್ಧಿಯ ಸಿಹಿ ಕಾಣುವ ಬಯಲುಸೀಮೆಯ ರೈತರ ಬವಣೆ ನೀಗಿಸುವ ಸಲುವಾಗಿ ನೀರಾವರಿ ಯೋಜನೆಯ ಮೂಲಕ ಹಸಿರಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ’ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.

ಇಲ್ಲಿನ ರಂಭಾಪುರಿ ಖಾಸಾ ಶಾಖಾಮಠದಲ್ಲಿ ಗುರುವಾರ ರಾತ್ರಿ ನಡೆದ ಕಾರ್ತೀಕ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭದ್ರಾನದಿಯಿಂದ ತಾಲ್ಲೂಕಿನ 114 ಕೆರೆಗಳಿಗೆ ನೀರು ತುಂಬಿಸುವ
₹ 1,281 ಕೋಟಿ ವೆಚ್ಚದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ದೊರಕಿರುವುದು ರೈತರ ಬದುಕಿಗೆ ಹೊಸ ಭರವಸೆ ಮೂಡಿಸಿದೆ. ಇದರೊಂದಿಗೆ ಸರ್ಕಾರದ ಸಹಕಾರದಿಂದ ಕ್ಷೇತ್ರದ ಪ್ರಗತಿಗೆ ಪ್ರಾಕೃತಿಕ ವಿಕೋಪಗಳ ನಡುವೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬರುತ್ತಿದ್ದು, ಇನ್ನೂ ಸಹಕಾರ ಸಿಗುವ ವಿಶ್ವಾಸವಿದೆ, ಇದರಿಂದ ತಾಲ್ಲೂ ಕಿನ ಆಮೂಲಾಗ್ರ ಪ್ರಗತಿಗೆ ಕಾಳಜಿ ವಹಿಸಲು ಸಾಧ್ಯವಾಗಿದೆ’ ಎಂದರು.

‘ಇಂದಿನ ವೇಗದ ಯುಗದಲ್ಲಿ ಯುವಜನರು ವ್ಯಾಮೋಹದ ಕಡೆ ಹೆಚ್ಚು ಒಲವು ಹೊಂದಿದ್ದಾರೆ. ಅದು ವಯೋಸಹಜ ಸೆಳೆತ. ಇದರ ಜತೆಯಲ್ಲಿ ನಮ್ಮ ಸನಾತನ ಸಂಸ್ಕೃತಿ, ಧಾರ್ಮಿಕ ಪರಂಪರೆಯ ಆಚಾರ ವಿಚಾರದ ಮೌಲ್ಯಗಳಿಗೂ ಅಷ್ಟೇ ಮಹತ್ವ ನೀಡಬೇಕು. ಬೀರೂರು ಧರ್ಮ, ಸಂಸ್ಕೃತಿ, ಕಲೆ, ಆಚಾರ, ವಿಚಾರದಲ್ಲಿ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದೆ. ಹೀಗಾಗಿ ನಿಮ್ಮೆಲ್ಲರ ಬದುಕಿಗೆ ಅಳಿಲುಸೇವೆ ಸಲ್ಲಿಸುವುದು ನಮಗೆ ಕರ್ತವ್ಯ ಮತ್ತು ಸ್ಫೂರ್ತಿ’ ಎಂದರು.

ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮೌಲ್ಯಯುತ ಬದುಕಿಗೆ ಧರ್ಮ ದಾರಿದೀಪವಾಗಿದೆ. ಅಂತರಂಗದ ಕತ್ತಲೆಯನ್ನು ಕಳೆಯದೇ ಹೊರನೋಟದ ಬಾಹ್ಯಾಡಂಬರದ ಬದುಕಿಗೆ ಬೆಲೆಯಿಲ್ಲ ಎನ್ನುವ ದೀಪಗಳ ಹಬ್ಬದ ಸಂಕೇತ, ಶರಣರ ಧಾರ್ಮಿಕ ಮೌಲ್ಯದ ಆಶಯಗಳನ್ನು ಕೂಡಾ ಪ್ರತಿಪಾದಿಸಿದೆ. ನಮಗೆ ಸತ್ಯ ಮಾರ್ಗದಲ್ಲಿ ನಡೆಯುವ ಸಂಕಲ್ಪ ಸೂತ್ರ ಬದುಕಿನ ಬೆಳಕಾಗುತ್ತದೆ ಎನ್ನುವ ಜ್ಞಾನವಿರಲಿ. ಯಾರೂ ಧರ್ಮದಲ್ಲಿ ರಾಜಕೀಯ ಬೆರೆಸುವುದು ಬೇಡ, ರಾಜಕೀಯದಲ್ಲಿ ಧರ್ಮದ ನೆರಳಿರಲಿ’ ಎಂದು ಸಲಹೆ ನೀಡಿದರು.

ಪುರಸಭಾಧ್ಯಕ್ಷ ಎಂ.ಪಿ.ಸುದರ್ಶನ್ ಗೌರವರಕ್ಷೆ ಸ್ವೀಕರಿಸಿ ಮಾತನಾಡಿ, ‘ಶಾಸಕರ ಬದ್ಧತೆಯಿಂದ ಪಟ್ಟಣದ ಅಭಿವೃದ್ಧಿ ವೇಗ ಪಡೆದಿದೆ. ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಹಲವು ಕೆಲಸಗಳು ಪ್ರಾರಂಭವಾಗುತ್ತಿದೆ. ಬೀರೂರು ಮಠದ ಕಾರ್ಯಕ್ರಮಗಳು ನಮ್ಮಲ್ಲಿನ ಧಾರ್ಮಿಕ ಜಾಗೃತಿಗೆ ಹೆಚ್ಚಿನ ಕೊಡುಗೆ ನೀಡುತ್ತಲಿದೆ’ ಎಂದು ಪ್ರಶಂಸಿಸಿದರು.

ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು. ಎಪಿಎಂಸಿ ನಿರ್ದೇಶಕ ಮಾರ್ಗದ ಮಧು, ಹೊಗರೇಹಳ್ಳಿ ರೇಣುಕಾರಾಧ್ಯ, ಹಿರಿಯ ವಕೀಲ ಎಂ.ಎಂ.ವಿಶ್ವಾರಾಧ್ಯ, ರೇಣುಕ ಸಾಂಸ್ಕೃತಿಕ ಸಂಘದ ಮರುಳಸಿದ್ದಾರಾಧ್ಯ, ನಾಗೇಂದ್ರ, ದಯಾನಂದ್, ಕುಮಾರಶಾಸ್ತ್ರಿ, ಸಂಪತ್ ಕುಮಾರ್, ಶಾಮಿಯಾನ ಚಂದ್ರು ಮತ್ತು ಭಕ್ತರು ಇದ್ದರು. ದೀಪೋತ್ಸವ ಅಂಗವಾಗಿ ಮಠದ ಆವರಣದಲ್ಲಿ ಬೆಳಿಗ್ಗೆ ಗಣಹೋಮ, ಸಂಕಷ್ಟಹರ ಗಣಪತಿ ವ್ರತ, ಸಂಜೆ ದೀಪೋತ್ಸವ ನೆರವೇರಿಸಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು