ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತಲೂ ನದಿ: ಕಳಸದಲ್ಲಿ ನೀರಿಗೆ ಕೊರತೆ

ಭದ್ರಾ ನದಿ ಇದ್ದರೂ ತಪ್ಪದ ನೀರಿನ ಭವಣೆ
Published 24 ಮಾರ್ಚ್ 2024, 7:01 IST
Last Updated 24 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಕಳಸ: ಪಟ್ಟಣದ ಸುತ್ತಲೂ ಕಲಶದ ಆಕಾರದಲ್ಲಿ ಭದ್ರಾ ನದಿ ಹರಿಯುವುದರಿಂದಲೇ ಕಳಸ ಎಂಬ ಹೆಸರು ಬಂದಿದೆ. ಆದರೆ, ಪ್ರತಿ ಬೇಸಿಗೆಯಲ್ಲೂ ಕಳಸ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಆಗುತ್ತಲೇ ಇದೆ.

ಕಳಸ ಗ್ರಾಮ ಪಂಚಾಯಿತಿಯು ಗಣಪತಿ ಕಟ್ಟೆಯ ನೀರಿನ ಟ್ಯಾಂಕ್ ತುಂಬಿಸಲು 3 ದಶಕದ ಹಿಂದೆಯೇ ವಿದ್ಯುತ್ ಚಾಲಿತ ಪಂಪ್ ಅಳವಡಿಸಿದೆ. ಈ ಬಿಳಿಯಾನೆ ಸಾಕಲಾರದೆ ಹೊನ್ನೆಕಾಡು ನೈಸರ್ಗಿಕ ನೀರಿನ ಯೋಜನೆಯನ್ನು ಕಳೆದ ದಶಕದಲ್ಲೇ ಕೋಟ್ಯಂತರ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು.

‘ಈ ಯೋಜನೆಯ ಕಾಮಗಾರಿ ವೇಳೆ ಆದ ಲೋಪಗಳು ಮತ್ತು ಅನುಷ್ಠಾನಕ್ಕೆ ಇದ್ದ ಸವಾಲುಗಳು ಯೋಜನೆಯು ಪೂರ್ಣ ಯಶಸ್ಸು ಗಳಿಸದಂತೆ ಮಾಡಿದೆ. ಅಣೆಕಟ್ಟಿನ ಗೇಟ್ ಕೆಲಸ ಮಾಡದೆ ಇರುವುದರಿಂದ ಮೇಲ್ಭಾಗದಲ್ಲಿ ಪೈಪ್‍ಗಳನ್ನು ಬಳಸಿ ಕಳಸದ ಕಡೆಗೆ ಹರಿಸಲಾಗುತ್ತಿದೆ. ಇದರಿಂದ ನೀರಿನ ಒತ್ತಡ ಕಡಿಮೆಯಾಗಿ ಬೇಸಿಗೆಯಲ್ಲಿ ನೀರಿನ ಪೂರೈಕೆ ಕಡಿಮೆ ಆಗುತ್ತದೆ’ ಎಂದು ಕಳಸ ಪಂಚಾಯಿತಿ ಸದಸ್ಯರಾದ ವೀರೇಂದ್ರ ದೂರುತ್ತಾರೆ.

ಪರಿಣಾಮವಾಗಿ ಪ್ರತಿ ಬೇಸಿಗೆಯಲ್ಲೂ ಹೊನ್ನೆಕಾಡು ನೀರಿನ ಪ್ರಮಾಣ ಕಡಿಮೆಯಾಗಿ ಮತ್ತೆ ವಿದ್ಯುತ್ ಪಂಪ್ ಮೂಲಕ ನೀರು ಎತ್ತಬೇಕಾದ ಅನಿವಾರ್ಯತೆ ಕಳಸ ಪಂಚಾಯತಿಗೆ ಬಂದೊದಗುತ್ತಿದೆ. ಹೊನ್ನೆಕಾಡು ನೀರು ಅಲ್ಲಿಂದ ಕಳಕೋಡು, ಚಿಪ್ಪಲಮಗೆ, ಕೊಳಮಗೆ, ಹೊಸೂರು ಮೂಲಕ ಕಳಸಕ್ಕೆ ಗುರುತ್ವಾಕರ್ಷಣೆ ಮೂಲಕ ತಲುಪುತ್ತದೆ. ಆದರೆ, ಈಗ ಸಾಕಷ್ಟು ನೀರು ಪೂರೈಕೆ ಆಗದೆ ಬೇಸಿಗೆಯಲ್ಲಿ ದುಗ್ಗಪ್ಪನಕಟ್ಟೆಯ ಟ್ಯಾಂಕ್ ತಲುಪುತ್ತಿಲ್ಲ.

ಗಣಪತಿಕಟ್ಟೆ ಟ್ಯಾಂಕಿಗೆ ಸಣ್ಣ ಗಾತ್ರದ ನೀರು ಬಂದು ಬಿದ್ದರೂ ಅದು 6 ಸಾವಿರ ಜನಸಂಖ್ಯೆಯ ಪಟ್ಟಣಕ್ಕೆ ‘ರಾವಣನ ಹೊಟ್ಟಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಆಗಿದೆ. ಇದಕ್ಕೆ ಪರ್ಯಾಯವಾದ 80 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಪಂಪ್ ಓಡಿಸಲು ವಿದ್ಯುತ್ ಸಮಸ್ಯೆ ಕೂಡ ಇದೆ. ಪ್ರತಿದಿನ ಗಣಪತಿಕಟ್ಟೆ ಟ್ಯಾಂಕ್ ತುಂಬುವುದು ಅಸಾಧ್ಯವಾಗಿದ್ದು, 2 ದಿನಕ್ಕೊಮ್ಮೆ ಮಾತ್ರ ಬಳಕೆದಾರರಿಗೆ ನೀರು ಸರಬರಾಜಾಗುತ್ತಿದೆ.

ಕಳಸ ಆಸುಪಾಸಿನ ಅಡಕೋಡು, ಕಲ್ಲುಗೋಡು, ಬಿಳಗೋಡು, ದಂದಾಡಿ ಮುಂತಾದ ಪ್ರದೇಶದಲ್ಲಿ ನೈಸರ್ಗಿಕ ನೀರನ್ನೇ ಬಳಸಿ ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಈ ಬಾರಿ ಆ ಎಲ್ಲ ಜಲಮೂಲದಲ್ಲೂ ನೀರಿನ ಕೊರತೆ ಉಂಟಾಗಿದ್ದು, ಕುಡಿಯುವ ನೀರಿಗೆ ಈ ಪ್ರದೇಶಗಳಲ್ಲಿ ಹಾಹಾಕಾರ ಉಂಟಾಗಿದೆ. ಆದರೆ ಈವರೆಗೂ ಕಳಸ ಪಂಚಾಯಿತಿ ವ್ಯಾಪ್ತಿಯ ಯಾವ ಪ್ರದೇಶಕ್ಕೂ ಟ್ಯಾಂಕರ್ ಬಳಸಿ ನೀರು ವಿತರಣೆ ನಡೆಯುತ್ತಿಲ್ಲ.

ಪ್ರತಿ ವರ್ಷವೂ ಹೊನ್ನೆಕಾಡು ಹಳ್ಳದಲ್ಲಿ ಬೇಸಿಗೆಯಲ್ಲಿ ಶೇ 50ರಷ್ಟು ನೀರು ಕಡಿಮೆ ಆಗುವುದು ವಾಡಿಕೆ. ಈ ಕೊರತೆ ಸರಿದೂಗಿಸಲು ವಿದ್ಯುತ್ ಪಂಪ್ ಮೂಲಕ ನೀರು ಎತ್ತುತ್ತಿದ್ದೇವೆ. ಕಳಸ ಪಟ್ಟಣದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ಅವರ ಅಭಿಪ್ರಾಯ.

ಹೊನ್ನೆಕಾಡು ನೀರು ಬಾರದೆ ಕಳಸದ ದುಗ್ಗಪ್ಪನಕಟ್ಟೆ ಪ್ರದೇಶದ ನೀರಿನ ಟ್ಯಾಂಕ್‌ಗಳು ಖಾಲಿಯಾಗಿರುವುದು
ಹೊನ್ನೆಕಾಡು ನೀರು ಬಾರದೆ ಕಳಸದ ದುಗ್ಗಪ್ಪನಕಟ್ಟೆ ಪ್ರದೇಶದ ನೀರಿನ ಟ್ಯಾಂಕ್‌ಗಳು ಖಾಲಿಯಾಗಿರುವುದು

ಪಂಚಾಯಿತಿಯು ಶ್ರಮ ವಹಿಸಿ ನೀರು ಸರಬರಾಜು ಕೆಲಸ ಮಾಡುತ್ತಿದೆ. ಆದರೆ ಹೊನ್ನೆಕಾಡಿನಿಂದ ಕಳಸಕ್ಕೆ ತಲುಪುವ ನೀರಿನ ಪ್ರಮಾಣ ಕಡಿಮೆ ಆಗಿದೆ.

-ಕವೀಶ್ ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ನಮಗೆ ಎರಡು ದಿನಕ್ಕೊಮ್ಮೆ ಅರ್ಧ ಗಂಟೆ ಕೂಡ ನೀರು ಬರುತ್ತಿಲ್ಲ. ನೀರು ಬರುವುದನ್ನೇ ಕಾಯುತ್ತಾ ಕೂಲಿ ಕೆಲಸಕ್ಕೆ ಹೋಗಲು ಕೂಡ ಆಗುತ್ತಿಲ್ಲ. ದಿನ ಬಳಕೆಗೆ ನೀರು ಸಾಕಾಗದೆ ಸಮಸ್ಯೆಯಾಗುತ್ತಿದೆ.

-ಪುಷ್ಪಾ ಗಣಪಕಟ್ಟೆಯ ಕಾರ್ಮಿಕ ಮಹಿಳೆ

ಅಣೆಕಟ್ಟೆಗೆ ಅಳವಡಿಸಿರುವ ಗೇಟ್‌ ಕಾರ್ಯನಿರ್ವಹಿಸುತ್ತಿಲ್ಲ. ಮೇಲ್ಭಾಗದಲ್ಲಿ ಪೈಪ್‌ ಮೂಲಕ ನೀರು ತರಬೇಕಿದೆ. ಇದರಿಂದ ನೀರಿನ ಪೂರೈಕೆ ಕಡಿಮೆಯಾಗಿ ಸಮಸ್ಯೆಯಾಗುತ್ತಿದೆ.

- ವೀರೇಂದ್ರ ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT